ಹುಬ್ಬಳ್ಳಿ(ಫೆ.19): ಮಹದಾಯಿ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಲು ಉತ್ತರ ಕರ್ನಾಟಕ ಭಾಗದ ಸಂಸದರಿಗೆ ಹಣ ಕೊಟ್ಟಿದ್ದೇವೆ. ಆದರೆ ಹಣ ಪಡೆದುಕೊಂಡಿರುವ ಸಂಸದರು ಕೆಲಸ ಮಾಡಿ ಕೊಡದೇ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ‘ಕರ್ನಾಟಕ ರೈತ ಸೇನೆ’ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಆರೋಪಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಸಿದ ಅವರು, ಮಹದಾಯಿ ನ್ಯಾಯಾಧಿಕರಣ ತೀರ್ಪು ನೀಡಿ ವರ್ಷವೇ ಕಳೆದರೂ ಕೇಂದ್ರ ಸರ್ಕಾರ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸುತ್ತಿರಲಿಲ್ಲ. ಹೀಗಾಗಿ ಮಹದಾಯಿ ಕೆಲಸ ಮಾಡಲು ಸಂಸದರ ಬಳಿ ದುಡ್ಡು ಇರಲಿಕ್ಕಿಲ್ಲ, ಪದೇ ಪದೇ ದೆಹಲಿಗೆ ಹೋಗಬೇಕಾಗುತ್ತದೆ ಎಂದುಕೊಂಡು ಮಲಪ್ರಭಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಸಂಸದರಾದ ಪ್ರಹ್ಲಾದ ಜೋಶಿ, ಸುರೇಶ ಅಂಗಡಿ, ಶಿವಕುಮಾರ ಉದಾಸಿ ಹಾಗೂ ಪಿ.ಸಿ. ಗದ್ದಿಗೌಡರ ಅವರಿಗೆ ತಲಾ 5 ಸಾವಿರ ಕೊಟ್ಟಿರುವುದಾಗಿ ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದರಲ್ಲಿ ಪಿ.ಸಿ. ಗದ್ದಿಗೌಡರ ಅಕೌಂಟ್‌ ನಂಬರ್‌ ಸಿಗಲಾರದ ಕಾರಣ ಅವರಿಗೆ ಮನಿ ಆರ್ಡರ್‌ ಮಾಡಲಾಗಿತ್ತು. ಉಳಿದ ಮೂವರ ಅಕೌಂಟ್‌ಗಳಿಗೆ ನೆಫ್ಟ್‌ ಮಾಡಲಾಗಿತ್ತು. ಗದ್ದಿಗೌಡರಿಗೆ ನೀಡಿದ್ದ ದುಡ್ಡು ವಾಪಸ್‌ ಕಳುಹಿಸಿದ್ದಾರೆ. ಆದರೆ ಉಳಿದ ಮೂವರು ಸಂಸದರು ಮಾತ್ರ ಹಣವನ್ನು ವಾಪಸ್‌ ಕಳುಹಿಸಲಿಲ್ಲ. ಕೆಲಸವನ್ನೂ ಮಾಡಲಿಲ್ಲ ಎಂದು ಆರೋಪಿಸಿದರು.

ಇದನ್ನು ನಾವು ಲಂಚ ಎಂದೇನೂ ಕೊಟ್ಟಿರಲಿಲ್ಲ. ಆದರೆ ರೈತರ ಕೆಲಸ ಮಾಡಲು ದುಡ್ಡಿನ ಕೊರತೆ ಎದುರಾಗಬಾರದೆಂಬ ಉದ್ದೇಶದಿಂದ ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನವೇ ಕಳುಹಿಸಿದ್ದೇವು. ನಂತರ ಚುನಾವಣೆ ಘೋಷಣೆಯಾಗಿ ಅವರೇ ಸಂಸದರಾಗಿ ಪುನರಾಯ್ಕೆಯಾದರು. ಆದರೂ ಈವರೆಗೂ ಕೆಲಸ ಮಾತ್ರ ಮಾಡಿಲ್ಲ ಎಂದು ವಿಷಾಧಿಸಿದರು.

ಇನ್ನು ರಾಜ್ಯ ಸರ್ಕಾರದ ಮುಖ್ಯಮಂತ್ರಿ ನಿಧಿಗೂ 10 ಸಾವಿರ ದುಡ್ಡು ಜಮೆ ಮಾಡಿದ್ದೆವು. ಈ ದುಡ್ಡನ್ನು ಕಳಸಾ-ಬಂಡೂರಿ ನಾಲಾ ಜೋಡಣೆ ಕಾಮಗಾರಿಗೆ ಬಳಸುವಂತೆ ಕೋರಿ ಜಮೆ ಮಾಡಿದ್ದೆವು. ಆಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಈಗಲೂ ಓಡಾಟದ ಖರ್ಚಿಗೆ ಸಂಸದರಿಗೆ ದುಡ್ಡು ಕೊಡಲು ನಾವು ಸಿದ್ಧರಿದ್ದೇವೆ. ಒಟ್ಟಿನಲ್ಲಿ ನಮ್ಮ ಕೆಲಸ ಮಾಡಿ ಕೊಡಲಿ ಎಂದು ಆಗ್ರಹಿಸಿದರು.

ಪಿಐಎಲ್‌ ಹಾಕಿದ್ದೇವೆ

ಮಹದಾಯಿ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಹೋರಾಟಗಳನ್ನು ಮಾಡಲಾಗಿದೆ. ಆದರೂ ಗೆಜೆಟ್‌ ನೋಟಿಫಿಕೇಶನ್‌ ಮಾತ್ರ ಹೊರಡಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್‌ ಹಾಕಿದ್ದೇವೆ. ಕೂಡಲೇ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಲು ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿ ಹಾಕಿರುವ ಪಿಐಎಲ್‌ ಇದು. ಫೆ. 28 ಅಥವಾ ಮಾಚ್‌ರ್‍ 2ರ ಒಳಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದರು.

ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟಕ್ಕೆ ಸುಮಾರು  1.5 ರಿಂದ 2.5 ಲಕ್ಷ ಹಣದ ಅವಶ್ಯಕತೆ ಇದ್ದು, ಸ್ಥಿತಿವಂತ ರೈತರಿಂದ ಹಣ ಸಂಗ್ರಹಿಸುತ್ತಿದ್ದೇವೆ. ಯಾರಾದರೂ ದಾನಿಗಳು ಆರ್ಥಿಕ ಸಹಾಯ ಮಾಡಲು ಮುಂದಾದರೆ ನಮಗೆಅನುಕೂಲವಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ರಾಜಕಾರಣಿಗಳ ಹಣ ನಮಗೆ ಬೇಡ ಎಂದು ಸ್ಪಷ್ಟಪಡಿಸಿದರು.

ದಯಾಮರಣ ನೀಡಿ:

ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆಗೆ ಕೂಡಲೇ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಇಲ್ಲವಾದರೆ ಮಹಾದಾಯಿ ಹೋರಾಟಗಾರರಿಗೆ ಅರಬ್ಬಿ ಸಮುದ್ರದಲ್ಲಿ ದಯಾಮರಣಕ್ಕೆ ಅವಕಾಶ ಕೊಡಬೇಕು. ಈ ನಿಟ್ಟಿನಲ್ಲಿ ದೆಹಲಿಗೆ ತೆರಳಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸ್ಥಳೀಯವಾಗಿಯೇ ದಯಾಮರಣ ಪಡೆದರೆ ನಮ್ಮ ಸಮಾಧಿ ಮೇಲೆ ಸಂಘಟನೆಗಳು ಹುಟ್ಟಿಕೊಳ್ಳುತ್ತವೆ. ಇದಕ್ಕೆ ಅವಕಾಶ ಕೊಡಲು ನಮಗೆ ಇಷ್ಟವಿಲ್ಲ. ಮಹದಾಯಿ ನೀರಿಗಾಗಿ ಹೋರಾಡಿ ಮೃತಪಟ್ಟರೈತರ ಸಮಾಧಿ ಮೇಲೆ ಈಗಲೂ ಹಲವಾರು ಸಂಘಟನೆಗಳು ಹುಟ್ಟಿಕೊಂಡಿವೆ. ಆದ್ದರಿಂದ ಈ ಬಾರಿ ಅರಬ್ಬಿ ಸಮುದ್ರದಲ್ಲಿಯೇ ದಯಾಮರಣಕ್ಕೆ ಅವಕಾಶ ಕೊಡಬೇಕು ಎಂದು ವಿನಂತಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಲ್ಲಣ್ಣ ಆಲೇಕರ್‌, ಗುರು ರಾಯನಗೌಡ್ರ, ಗಂಗಣ್ಣ ಈರೇಶನವರ, ಮುತ್ತು ಪಾಟೀಲ ಇದ್ದರು.