Asianet Suvarna News Asianet Suvarna News

‘ರಕ್ತ ಹರಿಸಿಯಾದರೂ ಮಹದಾಯಿ ನೀರು ತಂದೇ ತರುತ್ತೇವೆ'

ಪರಿಸರ ಇಲಾಖೆ ಅನುಮತಿಗೆ ಕೇಂದ್ರದ ತಡೆ: ಮಹದಾಯಿ ಹೋರಾಟಗಾರರ ಆಕ್ರೋಷ|ಶೀಘ್ರ ಬಗೆಹರಿಸದಿದ್ದಲ್ಲಿ ಸಂಸತ್ ಭವನದ ಎದುರಿಗೆ ಹೋರಾಟ ನಡೆಸುತ್ತೇವೆ|ಮಹದಾಯಿ ವಿಷಯದಲ್ಲಿ ಕರ್ನಾಟಕಕ್ಕೆ ಮತ್ತೊಮ್ಮೆ ಮೋಸ|

Veeresh Sobaradamatha talks Over Mahdayi
Author
Bengaluru, First Published Dec 19, 2019, 7:33 AM IST

ಹುಬ್ಬಳ್ಳಿ[ಡಿ.19]: ಮಹದಾಯಿ ನದಿಯಿಂದ ಕರ್ನಾಟಕಕ್ಕೆ ಕುಡಿಯುವ ನೀರಿಗಾಗಿ ಕಳಸಾ- ಬಂಡೂರಿ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರ ಪರಿಸರ ಇಲಾಖೆ ನೀಡಿದ್ದ ಅನುಮತಿಯನ್ನು ಕೇಂದ್ರದ ಪರಿಸರ ಇಲಾಖೆ ಅಮಾನತ್ತಿನಲ್ಲಿ ಇಟ್ಟಿರುವುದಕ್ಕೆ ಮಹದಾಯಿ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಂಟಾಗಿರುವ ಸಮಸ್ಯೆಯನ್ನು ಶೀಘ್ರ ಬಗೆಹರಿಸದಿದ್ದಲ್ಲಿ ಸಂಸತ್ ಭವನದ ಎದುರಿಗೆ ಹೋರಾಟ ನಡೆಸಿ, ರಕ್ತ ಹರಿಸಿಯಾದರೂ ನಾವು ಮಹದಾಯಿ ನೀರನ್ನು ತಂದೇ ತರುತ್ತೇವೆ ಎಂದು ರೈತ ಸೇನಾ ರಾಜ್ಯ ಘಟಕದ ಆಧ್ಯಕ್ಷ ವೀರೇಶ ಸೊಬರದಮಠ ಎಚ್ಚರಿಕೆ ನೀಡಿದರು. 

ಬುಧವಾರ ಇಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮಹದಾಯಿ ನದಿಯಿಂದ ಕರ್ನಾಟಕಕ್ಕೆ ಕುಡಿಯುವ ನೀರಿಗಾಗಿ ಕಳಸಾ-ಬಂಡೂರಿ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರ ಪರಿಸರ ಇಲಾಖೆ ನೀಡಿದ್ದ ಅನುಮತಿಯನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ. ಈ ಮೂಲಕ ಮಹದಾಯಿ ವಿಷಯದಲ್ಲಿ ಕರ್ನಾಟಕಕ್ಕೆ ಮತ್ತೊಮ್ಮೆ ಮೋಸವಾಗಿದೆ. ಈ ಸಂಬಂಧ ಅಕ್ಟೋಬರ್ 17 ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಕಳಸಾ-ಬಂಡೂರಿ ಯೋಜನೆ ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ಪರಿಸರ ಪರಿಣಾಮ ಅಧ್ಯಯನ ಅಧಿಸೂಚನೆ 2006ರ ವ್ಯಾಪ್ತಿಯಲ್ಲಿ ಬರುವುದಿಲ್ಲ. ಹೀಗಾಗಿ, ಯೋಜನೆ ಅನುಷ್ಠಾನಕ್ಕೆ ತಕರಾರು ಇಲ್ಲ ಎಂದು ಹೇಳಿತ್ತು. 2015ರಲ್ಲಿ ಇದೇ ವಿಷಯವಾಗಿ ಕರ್ನಾಟಕದ ಸರ್ವಪಕ್ಷಗಳ, ಮಠಾಧೀಶರ ಮತ್ತು ರೈತರ ನಿಯೋಗ ಪ್ರಧಾನಮಂತ್ರಿಗಳ ಬಳಿ ಹೋದಾಗ ರಾಜಿ ಸಂಧಾನದ ಮೂಲಕ ಬಗೆಹರಿಸುವ ಎಲ್ಲ ಸಾಧ್ಯತೆಗಳಿದ್ದಾಗ್ಯೂ ಕೂಡ ಪ್ರಧಾನಿಗಳು ಇಚ್ಛಾಶಕ್ತಿ ತೋರಿರಲಿಲ್ಲ. ಮಹಾದಾ ಯಿಗಾಗಿ ಕಳೆದ ಐದು ವರ್ಷಗಳಿಂದ ನಿರಂತರ ಹೋರಾಟ ನಡೆದು ಹತ್ತಾರು ಜನರು ಹೋರಾಟದಲ್ಲಿ ಪ್ರಾಣ ಕಳೆದುಕೊಂಡರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸ್ಪಂದಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಮಹಾದಾಯಿ ನ್ಯಾಯಮಂಡಳಿ 2018ರ ಅಗಸ್ಟ್‌ನಲ್ಲಿ ಕರ್ನಾಟಕದ ಪಾಲು13.5 ಟಿಎಂಸಿ ಅಡಿ ಎಂದು ಆದೇಶ ನೀಡಿದೆ. ನ್ಯಾಯಮಂಡಳಿ ಆದೇಶದ ನಂತರವೂ ಕೇಂದ್ರ ಸರ್ಕಾರ ಗೋವಾ ರಾಜ್ಯದ ಪರ ಒಲವು ತೋರುತ್ತಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿರುವ ಅವರು, ಈ ದೇಶದ ಪ್ರಧಾನಿ ಇಡೀ ದೇಶಕ್ಕೆ ಪ್ರಧಾನಿಗಳೋ? ಅಥವಾ ಗೋವಾ ರಾಜ್ಯಕ್ಕೆ ಮಾತ್ರ ಪ್ರಧಾನಿಗಳಾ? ಎಂಬ ಸಂದೇಹ ಎಲ್ಲರಲ್ಲೂ ಮೂಡುತ್ತಿದೆ ಎಂದಿದ್ದಾರೆ. 

ಮಹದಾಯಿ: ಮತ್ತೆ ಉತ್ತರ ಕರ್ನಾಟಕಕ್ಕೆ ನೀರು ಕುಡಿಸಿದ ಪರಿಸರ ಇಲಾಖೆ

ಕೇಂದ್ರದಲ್ಲಿ ಸಂಸದೀಯ ಖಾತೆ ನಿಭಾಯಿಸುತ್ತಿರುವ ಪ್ರಹ್ಲಾದ ಜೋಶಿ ಏನು ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಜೋಶಿ ಅವರು ಈ ಹೋರಾಟದ ಉಪ್ಪು ಉಂಡಿದ್ದು, ಅವರು ಮನಸ್ಸು ಮಾಡಿದ್ದರೆ 5 ನಿಮಿಷದಲ್ಲಿ ಕೆಲಸ ಮುಗಿಯುತ್ತದೆ. ಆದರೆ, ಈ ಭಾಗದ ರಾಜಕಾರಣಿಗಳಿಗೆ ಉತ್ತರ ಕರ್ನಾಟಕದ ಜನರ ಬಗ್ಗೆ ಕಾಳಜಿಯಿಲ್ಲ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಕರ್ನಾಟಕದಲ್ಲಿ ಆಟ ಆಡುತ್ತಿವೆ. ಜನರಿಂದ ಆಯ್ಕೆಯಾಗಿ ಹೋಗಿರುವ ಇವರಿಗೆ ಜನತೆ ತಕ್ಕ ಪಾಠ ಕಲಿಸಬೇಕಿದೆ. ತಡೆಯಾಜ್ಞೆಯ ಹಿಂದೆ ರಾಜಕೀಯ ಕೈವಾಡವಿದ್ದು, ಗೋವಾ ಕುತಂತ್ರ ಇದರ ಹಿಂದಿದೆ ಎಂದು ಹೋರಾಟಗಾರ ವಿಜಯ ಕುಲಕರ್ಣಿ ದೂರಿದ್ದಾರೆ.

Follow Us:
Download App:
  • android
  • ios