ನರಗುಂದ(ಜ.12): ಬಂಡಾಯ ನೆಲದ ರೈತರು ಮಹದಾಯಿ ನೀರಿಗಾಗಿ ಎಲ್ಲ ರೀತಿಯ ಹೋರಾಟಕ್ಕೆ ಸಿದ್ಧರಿದ್ದೇವೆ. ಅವಶ್ಯಬಿದ್ದರೆ ನಾವು 3ನೇ ರೈತ ಬಂಡಾಯ ಮಾಡಲು ಸಿದ್ಧ ಎಂದು ರೈತ​ಸೇ​ನಾದ ರಾಜ್ಯಾ​ಧ್ಯಕ್ಷ ವೀರೇಶ ಸೊಬ​ರ​ದ​ಮಠ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

1640ನೇ ದಿನದ ನಿರಂತರ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಹೋರಾಟ ವೇದಿಕೆಯಲ್ಲಿ ಮಾತನಾಡಿದ​ರು. ಕಳೆದ 5 ವರ್ಷ​ಗ​ಳಿಂದ ನಮ್ಮ ನೆಲದಲ್ಲಿ ಹರಿಯುವ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರನ್ನು ನಾವು ಬಳಕೆ ಮಾಡಿಕೊಳ್ಳಬೇಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಈ ಯೋಜನೆ ಜಾರಿ ಮಾಡಬೇಕೆಂದು ನಾವು ಹೋರಾಟ ಮಾಡಿದರೂ ಕೂಡ ಆಳುವ ಸರ್ಕಾರಗಳು ತಮ್ಮ ಸ್ವಾರ್ಥಕ್ಕೆ ಈ ಯೋಜನೆ ಉಪಯೋಗಿಸಿಕೊಂಡು ಈ ಯೋಜನೆ ಜಾರಿ ಮಾಡದೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮೋಸ ಮಾಡಿದೆ. ಮೇಲಾಗಿ ನಾವು ಮಹದಾಯಿ ಹೋರಾಟದಲ್ಲಿ ಈಗಾಗಲೇ 12 ಮಹದಾಯಿ ಹೋರಾಟಗಾರರನ್ನು ಕಳೆದುಕೊಂಡ ನೋವು ನಮ​ಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆದ್ದರಿಂದ ಸರ್ಕಾರಕ್ಕೆ ಇನ್ನೂ ಕಾಲ ಮಿಂಚಿಲ್ಲ ಬೇಗ ನ್ಯಾಯಾಧಿಕರಣದ ನ್ಯಾಯಾಧೀಶರು ರಾಜ್ಯಕ್ಕೆ ನೀಡಿರುವ 13.43 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಲು ಮುಂದಾಗಬೇಕು. ಇನ್ನು ರಾಜ್ಯ ಸರ್ಕಾರ ಬೇಗ ಮಹದಾಯಿ ನದಿಯಲ್ಲಿ ಹರಿಯುವ ಹೆಚ್ಚುವರಿ ನೀರು ಪಡೆದುಕೊಳ್ಳಲು ಸರ್ವ ಪಕ್ಷ ಸಭೆ ಕರೆದು ಚರ್ಚೆ ಮಾಡಿ ಸುಪ್ರಿಂಕೋ​ರ್ಟ್‌​ನಲ್ಲಿ ಕಾನೂನು ಹೋರಾಟ ಮಾಡಿ ನಮ್ಮ ಪಾಲಿನ ನೀರು ಪಡೆದುಕೊಳ್ಳಲು ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂ​ರಪ್ಪ ಮುಂದಾ​ಗ​ಬೇಕು.

ಈ ಹಿಂದೆ ಯಡಿಯೂ​ರಪ್ಪ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕೇವಲ 24 ಗಂಟೆಯಲ್ಲಿ ಈ ಮಹದಾಯಿ ಹಾಗೂ ಕಳಸಾ ಬಂಡೂರ ನಾಲಾ ಯೋಜನೆ ಜಾರಿ ಮಾಡುವುದಾಗಿ ಹೇಳಿದ ಮಾತು ಉಳಿಸಿಕೊಳ್ಳಬೇಕು. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಸಂದರ್ಭದಲ್ಲಿ ದೇಶದಲ್ಲಿ ಹರಿಯುವ ನದಿಗಳ ನೀರನ್ನು ತಂದು ಕೃಷಿ ಭೂಮಿಗೆ ನೀಡಿ ಹಸಿರು ಕ್ರಾಂತಿ ಮಾಡುವುದಾಗಿ ಹೇಳಿಕೆ ನೀಡಿ​ದ​ವರು ಏಕೆ ಇಂದಿಗೂ ನದಿ ಜೋಡಣೆ ಯೋಜನೆಯನ್ನು ಕೈಗೆತ್ತಿಕೊಂಡಿಲ್ಲ ಎಂದು ಪ್ರಶ್ನಿ​ಸಿ​ದ​ರು.

ಈಗಾಗಲೇ ಮಹದಾಯಿ ಹೋರಾಟಗಾರರು ಎಲ್ಲ ರೀತಿಯ ಹೋರಾಟ ಮಾಡಿ ಸಾಕಾಗಿದೆ, ಸರ್ಕಾರ ಬೇಗ ಮಹದಾಯಿ ಯೋಜನೆ ಜಾರಿ ಮಾಡದಿದ್ದರೆ ನೀರಿಗಾಗಿ ನರಗುಂದದಲ್ಲಿ 3ನೇ ರೈತ ಬಂಡಾಯ ನಡೆ​ಸಲು ನಾವು ಎಲ್ಲ ರೀತಿಯಲ್ಲಿ ಸಜ್ಜಾಗಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಅಡಿಯಪ್ಪ ಕೋರಿ, ಎಸ್‌.ಬಿ. ಜೋಗಣ್ಣವರ, ಎ.ಪಿ. ಪಾಟೀಲ, ಯಲ್ಲಪ್ಪ ಚಲಬಣ್ಣವರ, ಬಸವರಾಜ ಐನಾಪೂರ, ಅರ್ಜುನ ಮಾನೆ, ಮಲ್ಲೇಶಪ್ಪ ಅಣ್ಣಿಗೇರಿ, ಸುಭಾಸ ಗಿರಿಯಣ್ಣವರ, ಸಂಗಪ್ಪ ಶಾನವಾಡ, ವೆಂಕಪ್ಪ ಹುಜರತ್ತಿ, ಹನಮಂತ ಸರನಾಯ್ಕರ, ವಾಸು ಚವ್ಹಾಣ, ಯಲ್ಲಪ್ಪ ಗುಡದೇರಿ, ಮಾರುತಿ ಬಡಿಗೇರ, ಬಸವ್ವ ಪೂಜಾರ, ಮಹಾದೇವಪ್ಪ ಐನಾಪೂರ, ಮಂಜುಳಾ ಸರನಾಯ್ಕರ, ಮಲ್ಲಪ್ಪ ಐನಾಪೂರ, ನಾಗರತ್ನ ಸವಳಬಾವಿ, ರಾಯವ್ವ ಕಟಿಗಿ, ಅನಸವ್ವ ಶಿಂದೆ, ಶಾಂತವ್ವ ಭೂಸರಡ್ಡಿ, ಈರಣ್ಣ ಗಡಗಿ, ಸೋಮಲಿಂಗಪ್ಪ ಆಯಿಟ್ಟಿಸೇರಿದಂತೆ ಮುಂತಾದವರು ಇದ್ದರು.