Asianet Suvarna News Asianet Suvarna News

ಕೊಪ್ಪಳ: ಕೃಷ್ಣಾ ಬಿ ಸ್ಕೀಂ ಯೋಜನೆ ಸಂಪೂರ್ಣ ಜಾರಿಯಾಗಬೇಕು, ಸೊಬರದಮಠ

ಕೃಷ್ಣಾ ಬಿ ಸ್ಕೀಂ ಯೋಜನೆ ಸಂಪೂರ್ಣವಾಗಿ ಜಾರಿಯಾಗಬೇಕು ಜತೆಗೆ ಯೋಜನೆಯಿಂದ ರೈತರಿಗೆ ಅನುಕೂಲವಾಗಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ: ರೈತ ಸೇನೆಯ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ

Veeresh Sobaradamath Talks Over Krishna B Scheme
Author
Bengaluru, First Published Mar 4, 2020, 11:17 AM IST
  • Facebook
  • Twitter
  • Whatsapp

ಕುಷ್ಟಗಿ(ಮಾ.04): ಜಿಲ್ಲೆಯ ರೈತರ ಬಹುದಿನಗಳ ಕನಸಾಗಿರುವ ಕೃಷ್ಣಾ ಬಿ ಸ್ಕೀಂ ಹನಿ ನೀರಾವರಿ ಯೋಜನೆಯ ಕಾಮಗಾರಿಯ ವಿಳಂಬ ನೀತಿ ಕೈಬಿಟ್ಟು ಯೋಜನೆಯನ್ನು ಸಂಪೂರ್ಣಗೊಳಿಸಬೇಕು ಎಂದು ರೈತ ಸೇನೆಯ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಒತ್ತಾಯಿಸಿದ್ದಾರೆ. 

ಮಂಗಳವಾರ ಇಲ್ಲಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘದಿಂದ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು. ಯೋಜನೆ ಸಂಪೂರ್ಣವಾಗಿ ಜಾರಿಯಾಗಬೇಕು. ಜತೆಗೆ ಯೋಜನೆಯಿಂದ ರೈತರಿಗೆ ಅನುಕೂಲವಾಗಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಹಾಗಾಗಿ ಸಂಬಂಧಿಸಿದ ಚುನಾಯಿತ ಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಕುರಿತು ಕೂಡಲೇ ಸಭೆ ನಡೆಸಿ ಅಂತಿಮ ನಿರ್ಧಾರ ಕುರಿತು ನಮಗೆ ಮೂರು ದಿನದ ಒಳಗಾಗಿ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. 

ಒಂದು ವೇಳೆ ಇಲ್ಲಿನ ತಹಸೀಲ್ದಾರರು ಚುನಾಯಿತ ಪ್ರತಿನಿಧಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಶಾಸಕ ಹಾಗೂ ಮಾಜಿ ಶಾಸಕರು ಸೇರಿದಂತೆ ಇತರೆ ಚುನಾಯಿತ ಪ್ರತಿನಿಧಿಗಳ ಸಭೆ ಕರೆದು ಯೋಜನೆ ವಿಳಂಬಕ್ಕೆ ಕಾರಣ ವೇನು? ಯಾವಾಗ ಕಾಮಗಾರಿ ಪೂರ್ಣಗೊಳಿಸಲಾಗುವುದು, ಯಾಕೇ ಈ ಯೋಜನೆ ಕಾಮಗಾರಿ ವಿಳಂಬ ವಾಗು ತ್ತಿದೆ ಎನ್ನುವುದರ ಕುರಿತು ಸಭೆಯಲ್ಲಿ ಚರ್ಚಿಸಿ ನಂತರ ಅಂತಿಮ ತೀರ್ಮಾನದ ಬಗ್ಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ತೀವ್ರ ಸ್ವರೂಪ ಗೊಳಿಸಬೇಕಾ ಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ರಾಜಕೀಯ ಬೇಡ: 

ಜಿಲ್ಲೆಯ ರೈತರ ಹಿತಾಸಕ್ತಿ ಕಾಯಬೇಕಾದ ಇಲ್ಲಿನ ಚುನಾಯಿತ ಪ್ರತಿನಿಧಿಗಳು ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಕೃಷ್ಣಾ ಬಿ. ಸ್ಕೀಂ ವಿಳಂಬವಾಗುತ್ತಿರುವುದರ ಕುರಿತು ಚರ್ಚಿಸುವುದರ ಬದ ಲಾಗಿ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳುವುದಕ್ಕಾಗಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಹಾಗಾಗಿ ಜಿಲ್ಲೆಯ ವಿವಿಧ ತಾಲೂಕುಗಳ ರಾಜಕೀಯ ಮುಖಂಡರು ನೀರಾವರಿ ಯೋಜನೆ ಜಾರಿ ವಿಷಯದಲ್ಲಿ ಯಾವುದೇ ರಾಜಕೀಯ ಮಾಡದೇ ಯೋಜನೆ ಜಾರಿಗಾಗಿ ಶ್ರಮೀಸಬೇಕು ಎಂದು ಒತ್ತಾಯಿಸಿದರು.

ಧರಣಿ ಕುರಿತು ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ. ಪುಟ್ಟಯ್ಯ ತಾವರಕೇರೆ ಮಾತನಾಡಿ, ಕೃಷ್ಣಾ ಬಿ ಸ್ಕೀಂ ಜಾರಿಗಾಗಿ ಸರ್ಕಾರ ಬಿಡುಗಡೆ ಮಾಡಿರುವ 11 ಕೋಟಿ ಅನುದಾನವು ಸಂಪೂರ್ಣವಾಗಿ ಯೋಜನೆಗಾಗಿ ಬಳಕೆ ಯಾಗಬೇಕು ವಿನಃ ಯಾವುದೇ ಚುನಾಯಿತ ಪ್ರತಿನಿಧಿ ಹಾಗೂ ಅಧಿಕಾರಿಯ ಪಾಲಾಗಬಾರದು ಎಂದು ಹೇಳಿದರು. 

ನಿರಂತರ ಧರಣಿ: 

ಯೋಜನೆಯೂ ಸಂಪೂರ್ಣವಾಗಿ ಜಾರಿಯಾಗುವುದರ ಜತೆಗೆ ಕೂಡಲೇ 3ನೇ ಹಂತದ ಕಾಮಗಾರಿ ಆರಂಭವಾಗಬೇಕು. ಜತೆಗೆ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಕಾಮಗಾರಿ ಸಂಪೂರ್ಣ ಮುಗಿದ ಬಳಿಕ ಪಕ್ಕದ ಯಲಬುರ್ಗಾ, ಕನಕಗಿರಿಗೆ ವಿಸ್ತರಿಸುವ ಕಾರ‌್ಯ ನಡೆಯಬೇಕು ವಿನಃ ನೆಪಕ್ಕೆ ಮಾತ್ರ ಅಲ್ಲಲ್ಲಿ ಕಾಮಗಾರಿ ನಡೆಸಿದರೆ ಸಾಲದು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ನಜೀರಸಾಬ್ ಮೂಲಿಮನಿ ಹೇಳಿದರು. ಇನ್ನು ಮೂರು ದಿನಗಳವರೆಗೆ ನಿರಂತರ ಧರಣಿ ನಡೆ ಯಲಿದ್ದು, ಇಷ್ಟರೊಳಗಾಗಿ ಯೋಜನೆಗೆ ಸಂಬಂಧಿಸಿದಂತೆ ಕಾಮಗಾರಿ ಆರಂಭವಾಗಬೇಕು. ಇಲ್ಲದಿದ್ದರೆ ಧರಣಿಯೂ ತೀವ್ರ ಸ್ವರೂಪ ಪಡೆದುಕೊಳ್ಳುವುದರಲ್ಲಿ ಎರಡನೇ ಮಾತಿಲ್ಲ ಎಂದು ಸಂಘಟನೆಗಳ ಕೆಲ ಮುಖಂಡರು ಎಚ್ಚರಿಕೆ ನೀಡಿದ್ದಾರೆ. 

ಮುಖಂಡರಾದ ಅಶೋಕ ಎಂ. ಬಶೆಟ್ಟಿಯವರ, ಮಲ್ಲಮ್ಮ ಹೆಬಸೂರ, ಸುವರ್ಣಾ ಸಾತಮ್ಮನವರ, ಶಮ್ಮಶಾದಬೇಗಂ, ಎಚ್. ಮಿನಾಕ್ಷಿ, ವಿಜಯ ಕುಲಕರ್ಣಿ, ಅಣ್ಣಪ್ಪಗೌಡ ಟಿ. ದೇಸಾಯಿ, ಪರಶುರಾಮ ಕೋನಾಪುರ, ನಿಂಗಪ್ಪ ಬೆಳವಣಿಕಿ, ಆರ್.ಕೆ. ದೇಸಾಯಿ ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಹಾಗೂ ರೈತ ಮಹಿಳೆಯರು ಧರಣಿಯಲ್ಲಿ ಭಾಗವಹಿಸಿದ್ದರು. ಇನ್ನು ಇದೇ ಸಂದರ್ಭದಲ್ಲಿ ಧರಣಿ ಸ್ಥಳಕ್ಕೆ ತಹಸೀಲ್ದಾರ್ ಸಿದ್ದೇಶ ಎಂ ಭೇಟಿ ನೀಡಿ ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
 

Follow Us:
Download App:
  • android
  • ios