'ನಮ್ಮ ರಾಜಕಾರಣಿಗಳ ಬೆಂಬಲದಿಂದ ಗೋವಾ ಸಿಎಂ ಮಹದಾಯಿ ಬಗ್ಗೆ ಕ್ಯಾತೆ'

ಮಹಾರಾಷ್ಟ್ರ ಸಿಎಂ ಹೇಳಿಕೆ ಹಿಂದೆ ರಾಜ್ಯದ ರಾಜಕಾರಣಿಗಳು| ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆ ವಿವಾದ ಮುಗಿದ ಅಧ್ಯಾಯ| ನಮ್ಮ ರಾಜಕಾರಣಿಗಳ ಬೆಂಬಲದಿಂದ ಗೋವಾ ಸಿಎಂ ಮಹದಾಯಿ ಬಗ್ಗೆ ಕ್ಯಾತೆ| ಈಗಾಗಲೇ ಕಾನೂನು ಹೋರಾಟದಲ್ಲಿ ನಮಗೆ ನ್ಯಾಯ ದೊರೆತಿದ್ದು, ಮುಂದಿನ ದಿನಮಾನಗಳಲ್ಲಿ ಡ್ಯಾಂ ಕಟ್ಟಿಸುತ್ತೇವೆ| 

Veeresh Sobaradamath Reats on Goa CM Pramod Sawant Statement grg

ಗದಗ/ನರಗುಂದ(ಜ.31): ಕರ್ನಾಟಕದಲ್ಲಿ ಉಗಮವಾಗುವ ಮಹದಾಯಿ ನಮಗೂ ತಾಯಿಯಾಗಿದ್ದು, ನಾವೂ ನಮ್ಮ ತಾಯಿಯನ್ನು ಬಿಟ್ಟು ಕೊಡುವುದಿಲ್ಲ ಎಂದು ರೈತಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದ್ದಾರೆ. 

ಅವರು ಶನಿವಾರ ಜಿಲ್ಲೆಯ ನರಗುಂದ ಪಟ್ಟಣದ 2024ನೇ ದಿನದ ಮಹದಾಯಿ ಹಾಗೂ ಕಳಸಾ-ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ನಾಲ್ಕು ಜಿಲ್ಲೆ ಹನ್ನೊಂದು ತಾಲೂಕಿನ ಸಮನ್ವಯ ಸಮಿತಿಯ ಸಭೆ ನಂತರ ಮಾತನಾಡಿದರು.

ಗೋವಾ ಮುಖ್ಯ​ಮಂತ್ರಿ ಪ್ರಮೋದ ಸಾವಂತ್‌ ಮಹದಾಯಿ ನಮ್ಮ ತಾಯಿ ಇದ್ದಂತೆ ಎಂದು ನೀಡಿದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆ ವಿವಾದ ಮುಗಿದ ಅಧ್ಯಾಯ. ಆದರೆ ನಮ್ಮ ರಾಜಕಾರಣಿಗಳ ಬೆಂಬಲದಿಂದ ಗೋವಾದ ಮುಖ್ಯಮಂತ್ರಿ ಮಹದಾಯಿ ಬಗ್ಗೆ ಕ್ಯಾತೆ ತೆಗೆಯುತ್ತಿದ್ದಾರೆ. ಈಗಾಗಲೇ ಕಾನೂನು ಹೋರಾಟದಲ್ಲಿ ನಮಗೆ ನ್ಯಾಯ ದೊರೆತಿದ್ದು, ಮುಂದಿನ ದಿನಮಾನಗಳಲ್ಲಿ ಡ್ಯಾಂ ಕಟ್ಟಿಸುತ್ತೇವೆ. ಉತ್ತರ ಕರ್ನಾಟಕದ ಭಾಗದ ಬಹುದಿನದ ಬೇಡಿಕೆ ಈಡೇರಿಸಲು ಹೋರಾಟ ಮಾಡುತ್ತೇವೆ ಎಂದರು.

ಕರ್ನಾಟಕದ ವಿರುದ್ಧ ತಿರುಗಿ ಬಿದ್ದ ನೆರೆ ರಾಜ್ಯಗಳು: ಠಾಕ್ರೆ ಬಳಿಕ ಗೋವಾ ಸಿಎಂ ಉದ್ಧಟತನದ ಹೇಳಿಕೆ

ಮಹಾದಾಯಿ ಜಲ ವಿವಾದಕ್ಕೆ ನೇಮಕವಾದ ನ್ಯಾಯಾಧಿಕರಣ 13.42 ಟಿಎಂಸಿ ನೀರು ಕರ್ನಾ​ಟಕ ರಾಜ್ಯ ಬಳಕೆಗೆ ಅವಕಾಶ ನೀಡಿ ತೀರ್ಪು ಪ್ರಕಟಿಸಿದೆ. ಮೇಲಾಗಿ ಕೇಂದ್ರ ಸರ್ಕಾರ ಈ ನೀರು ಬಳಕೆ ಮಾಡಿಕೊಳ್ಳಲು ಗೆಜೆಟ್‌ ನೋಟಿಫಿಕೇಶನ್‌ ಸಹ ಹೊರಡಿಸಿದ್ದು, ರಾಜ್ಯ ಸರ್ಕಾರ ಕಳೆದ ವರ್ಷದ ಬಜೆಟ್‌ನಲ್ಲಿ ಈ ಯೋಜನೆ ಕಾಮಗಾರಿಗಾಗಿ . 500 ಕೋಟಿ ಮೀಸಲಿಟ್ಟಿದೆ. ಆದರೆ ಕೋವಿಡ್‌-19 ನೆಪ ಹೇಳಿ ಕಾಮಗಾರಿ ಪ್ರಾರಂಭ ಮಾಡದೆ ಇರುವುದು ಅನ್ಯಾಯ. ಈ ಯೋಜನೆ ಬಗ್ಗೆ ಕಾನೂನು ತೊಡಕು ಇದ್ದು, ಗೋವಾ ನ್ಯಾಯಾಧಿಕರಣದ ತೀರ್ಪು ಪ್ರಶ್ನಿಸಿ ಕೋರ್ಟಿಗೆ ಹೋಗಿದೆ ಎಂದು ಸುಳ್ಳು ಹೇಳಿ ಸರ್ಕಾರ ರೈತರನ್ನು ದಾರಿ ತಪ್ಪಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಕೆಲವು ರಾಜಕಾರಣಿಗಳೇ ಗೋವಾ ಮುಖ್ಯಮಂತ್ರಿಗೆ, ಈ ವಿವಾದವನ್ನು ಮುಂದುವ​ರಿ​ಸ​ಬೇ​ಕೆಂದು ಹೇಳಿದ್ದರಿಂದ ಈ ಯೋಜನೆ ಬಗ್ಗೆ ವಿವಿಧ ರೀತಿ ಹೇಳಿಕೆ ನೀಡುತ್ತಿದ್ದಾರೆ. ಮುಂಬರುವ ಚುನಾವಣೆ ವರೆಗೆ ಈ ವಿವಾದ ಜೀವಂತ ಇಡಲು ಯತ್ನಿಸುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಇನ್ನೂ ಕಾಲ ಮಿಂಚಿಲ್ಲ. 1 ತಿಂಗಳಲ್ಲಿ ಈ ಕಾಮಗಾರಿಗೆ ಬೇಕಾದ ಅನುದಾನ ಬಿಡುಗಡೆ ಮಾಡಬೇಕು. ಇಲ್ಲ​ದಿ​ದ್ದರೆ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚ​ರಿ​ಸಿ​ದ​ರು.

ಇನ್ನು ರಾಜ್ಯದ ಗಡಿ ವಿಷಯದಲ್ಲಿ ಅವಿವೇಕಿತನದ ಹೇಳಿಕೆ ನೀಡುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ನಡೆ ಖಂಡನೀಯ. ನಮ್ಮ ಭಾಗದಲ್ಲಿರುವ ಚೂರು ಜಾಗವನ್ನು ನಾವು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ರಾಜಕೀಯಕ್ಕಾಗಿ ಕನ್ನಡಿಗರನ್ನು ಕೆಣಕುತ್ತಿರುವುದು ಸೂಕ್ತವಲ್ಲ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ, ಸಂಸದರು ಸರಿಯಾದ ಉತ್ತರ ನೀಡಬೇಕು. ಈಗಾಗಲೇ ನದಿ ಮತ್ತು ಗಡಿ ಆಯೋಗದ ಅಧ್ಯಕ್ಷ ಕೆ.ಎಲ್‌. ಮಂಜುನಾಥ ಅವರು ಕರ್ನಾಟಕ ಗಡಿ ಹಾಗೂ ಮಹದಾಯಿ ಕುರಿತು ಕೇಂದ್ರ ಸರ್ಕಾರಕ್ಕೆ, ಸುಪ್ರಿಂ ಕೋರ್ಟ್‌ಗೂ ವರದಿ ನೀಡಿದ್ದಾರೆ. ಹೀಗಿದ್ದರು ವಿನಾಕಾರಣ ರಾಜಕೀಯ ಹಿತಾಸಕ್ತಿಗೆ ಅನಗತ್ಯ ಹೇಳಿಕೆ ನೀಡಿ ಕನ್ನಡಿಗರನ್ನು ಕೆರಳಿಸುತ್ತಿರುವ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಶಿವಪ್ಪ ಹೊರಕೇರಿ, ಗುರು ರಾಯನಗೌಡ್ರ, ಮಲ್ಲಪ್ಪ ಅಲೇಕಾರ, ಅಶೋಕ ಸಾತಣ್ಣವರ, ವೀರಬಸಪ್ಪ ಹೂಗಾರ, ಎಸ್‌.ಬಿ. ಜೋಗಣ್ಣವರ, ರಾಘವೇಂದ್ರ ಗುಜಮಾಗಡಿ, ಯಾಸೀನಸಾಬ್‌ ಜವಳಿ, ಮಹೇಶ ನಾವಳ್ಳಿ, ಬಸು ಗೊಂದಿ, ರಾಮಚಂದ್ರ ಸಾಬಳೆ, ಶಿವಪ್ಪ ಸಾತಣ್ಣವರ, ವಾಸು ಚವ್ಹಾಣ, ಮಲ್ಲೇಶ ಅಣ್ಣಿಗೇರಿ, ವೆಂಕಪ್ಪ ಹುಜರತ್ತಿ, ಅರ್ಜುನ ಮಾನೆ, ವಿಜಯಕುಮಾರ ಹೂಗಾರ ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios