ಧರ್ಮಸ್ಥಳ ಕ್ಷೇತ್ರದಿಂದ ಶ್ರೀರಾಮ ಮಂದಿರಕ್ಕೆ 25 ಲಕ್ಷ ನಿಧಿ: ವೀರೇಂದ್ರ ಹೆಗ್ಗಡೆ
ಕಾರ್ಪೋರೇಟ್ ಮಂದಿರವಾಗದೆ, ಜನತಾ ಮಂದಿರ ಆಗಬೇಕು ಎಂಬ ಉದ್ದೇಶದಿಂದ ಎಲ್ಲರಿಂದ ದೇಣಿಗೆ ಸ್ವೀಕಾರ ಮಾಡುತ್ತಿರುವುದು ಉತ್ತಮ ನಿರ್ಧಾರ| ನನಗೆ 1969ರಿಂದ ವಿಹಿಂಪನ ಸಂಪರ್ಕವಿದೆ| ಪೇಜಾವರ ವಿಶ್ವೇಶತೀರ್ಥರ ಸ್ಮರಣೆಯೊಂದಿಗೆ ಅವರ ಆಶಯ ಈಡೇರಿಸುವೆಡೆಗೆ ಕ್ಷೇತ್ರದಿಂದ 25 ಲಕ್ಷ ರು. ನೀಡಲಿದ್ದು, ಮುಂದಿನ ದಿನಗಳಲ್ಲೂ ಸಂಪೂರ್ಣ ಸಹಕಾರ ನೀಡಲಾಗುವುದು: ಹೆಗ್ಗಡೆ|
ಬೆಳ್ತಂಗಡಿ(ಜ.14): ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕ್ಷೇತ್ರದ ವತಿಯಿಂದ 25 ಲಕ್ಷ ರು. ನಿಧಿ ಸಮರ್ಪಿಸಲಾಗುವುದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಪ್ರಕಟಿಸಿದ್ದಾರೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಬುಧವಾರ ಧರ್ಮಸ್ಥಳದಲ್ಲಿ ಹಮ್ಮಿಕೊಂಡ ಶ್ರೀರಾಮ ಮಂದಿರ ನಿಧಿ ಸರ್ಮಪಣಾ ಅಭಿಯಾನದ ಗಣ್ಯರ ಸಭೆಯ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಮೊತ್ತ ಘೋಷಿಸಿದ್ದಾರೆ.
ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಾನದಲ್ಲಿ ರಾಮನಾಮ ಸ್ಮರಣೆಯಾಗುತ್ತಿರುವುದು ಯಥಾಯೋಗ್ಯವಾಗಿದೆ. ಎಲ್ಲರ ದೃಷ್ಟಿರಾಮಜನ್ಮಭೂಮಿ ಮೇಲಿದೆ. ಹಲವು ವರ್ಷಗಳ ವ್ಯಾಜ್ಯ ಇತ್ಯರ್ಥಗೊಂಡು ಸಂಶಯ ಸಂದೇಹವಿಲ್ಲದೆ ಈ ಬಾರಿ ರಾಮಮಂದಿರ ನಿರ್ಮಾಣವಾಗಲಿದೆ.
ಕಾರ್ಪೋರೇಟ್ ಮಂದಿರವಾಗದೆ, ಜನತಾ ಮಂದಿರ ಆಗಬೇಕು ಎಂಬ ಉದ್ದೇಶದಿಂದ ಎಲ್ಲರಿಂದ ದೇಣಿಗೆ ಸ್ವೀಕಾರ ಮಾಡುತ್ತಿರುವುದು ಉತ್ತಮ ನಿರ್ಧಾರವಾಗಿದೆ. ನನಗೆ 1969ರಿಂದ ವಿಹಿಂಪನ ಸಂಪರ್ಕವಿದೆ. ಪೇಜಾವರ ವಿಶ್ವೇಶತೀರ್ಥರ ಸ್ಮರಣೆಯೊಂದಿಗೆ ಅವರ ಆಶಯ ಈಡೇರಿಸುವೆಡೆಗೆ ಕ್ಷೇತ್ರದಿಂದ 25 ಲಕ್ಷ ರು. ನೀಡಲಿದ್ದು, ಮುಂದಿನ ದಿನಗಳಲ್ಲೂ ಸಂಪೂರ್ಣ ಸಹಕಾರ ನೀಡಲಾಗುವುದು. ಜನತೆ ಸಹಕಾರದೊಂದಿಗೆ ಜಗತ್ತೇ ವಿಸ್ಮಯಗೊಳಿಸುವಂತಹ ರಾಮ ಸಾನ್ನಿಧ್ಯ ತೇಜಸ್ಸಿನಿಂದ ಎದ್ದು ನಿಲ್ಲಬೇಕು. ಧರ್ಮಸ್ಥಳದಿಂದ ಪ್ರತಿ ವರ್ಷ ಸುಮಾರು 1, 500 ದೇವಸ್ಥಾನಗಳಿಗೆ ಆರ್ಥಿಕ ಸಹಾಯ ನೀಡಲಾಗುತ್ತದೆ. ಅಯೋಧ್ಯೆಯಲ್ಲಿ ಬೃಹತ್ ದೇವಾಲಯ ಆಗಬೇಕು. ಪೇಜಾವರ ಶ್ರೀಗಳು ಟ್ರಸ್ಟ್ ಸದಸ್ಯರಾಗಿರುವುದು ಹೆಮ್ಮೆಯ ವಿಚಾರ ಎಂದರು.
ದೇಗುಲಗಳಿಗೆ ಧರ್ಮಸ್ಥಳದಿಂದ 14 ಕೋಟಿ ರು.: ಡಾ.ಹೆಗ್ಗಡೆ
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಟ್ರಸ್ಟಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಶತ ಶತಮಾನಗಳಿಂದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರವಾಗಬೇಕೆಂಬ ಕನಸು ಇಂದು ನನಸಾಗುವುದು ಸುದೈವ. ಮಂದಿರ ನಿರ್ಮಾಣ ಒಬ್ಬಿಬ್ಬರಿಂದ ಆಗಬಾರದು. ಸರ್ವ ರಾಮ ಭಕ್ತರ ಸಹಭಾಗಿತ್ವದಲ್ಲಿ ಧನ ಸಮರ್ಪಣೆಯಾಗುವುದರೊಂದಿಗೆ ರಾಮ ರಾಜ್ಯವಾಗಿಸುವ ಸಂಕಲ್ಪ ನಮ್ಮದು ಎಂದು ತಿಳಿಸಿದರು.
ಇದಕ್ಕಾಗಿ ಪ್ರಪಂಚದಾದ್ಯಂತ ಕಾರ್ಯಪಡೆ ಹೊಂದಿರುವ ವಿಹಿಂಪಕ್ಕೆ ನಿಧಿ ಸಂಗ್ರಹ ಜವಾಬ್ದಾರಿ ನೀಡಿದೆ. ಪ್ರತಿ ಹಳ್ಳಿ ಹಳ್ಳಿಗೆ ಕಾರ್ಯಕರ್ತರು ತೆರಳಿ ಪ್ರಭು ಶ್ರೀರಾಮನ ಮಂದಿರ ನಿರ್ಮಾಣದ ಧನಸಂಗ್ರಹದಲ್ಲಿ ತೊಡಗಲಿದ್ದಾರೆ ಎಂದು ಹೇಳಿದರು.
ವಿಹಿಂಪ ಪ್ರಾಂತ್ಯ ಕಾರ್ಯಾಧ್ಯಕ್ಷ ಎಂ. ಬಿ. ಪುರಾಣಿಕ್, ಅಭಿಯಾನದ ರಾಜ್ಯ ಸಮಿತಿ ಸದಸ್ಯ ವಿವೇಕ್ ಆಳ್ವ, ವಿಹಿಂಪ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್, ತಾಲೂಕು ಸಂಘ ಚಾಲಕರಾದ ವಿನಯಚಂದ್ರ, ಕಾಂತಾಜೆ ಗಣೇಶ್ ಭಟ್ ಉಪಸ್ಥಿತರಿದ್ದರು. ಇದೇ ವೇಳೆ ಅಭಿಯಾನದ ನಿವೇದನೆ ಎಂಬ ಪತ್ರಕವನ್ನು ಶ್ರೀಗಳು ಬಿಡುಗಡೆಗೊಳಿಸಿದರು. ಇದಕ್ಕೂ ಮುನ್ನ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾದರು. ಕ್ಷೇತ್ರದ ವತಿಯಿಂದ ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು.