SSLC ಪರೀಕ್ಷೆ: ರಾಜ್ಯ ಸರ್ಕಾರದ ಕ್ರಮ ಖಂಡಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ
ಎಸ್ಎಸ್ಎಲ್‌ಸಿ ಪರೀಕ್ಷೆ ವಿರುದ್ಧ ವಾಟಾಳ್ ನಾಗರಾಜ್ ಪ್ರತಿಭಟನೆ| ಕುದುರೆಗಾಡಿಯಲ್ಲಿ ಸಂಚಾರ ಮಾಡುವ ಮೂಲಕ ಅವರು ವಿನೂತನವಾಗಿ ಪ್ರತಿಭಟಿಸಿದ ವಾಟಾಳ್ ನಾಗರಾಜ್| ಸಿಬಿಎಸ್ಇ ಪರೀಕ್ಷೆಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸಿ, ವಿದ್ಯಾರ್ಥಿಗಳನ್ನು ಪಾಸ್ ಮಾಡಿದೆ| ವಿವಿಧ ರಾಜ್ಯ ಸರ್ಕಾರಗಳು ಸಹ ಇದೇ ಮಾದರಿ ಅನುಸರಿಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಿವೆ|
ಮೈಸೂರು(ಜೂ.29): ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90 ರಷ್ಟು ವಿದ್ಯಾರ್ಥಿಗಳು ಫೇಲ್ಆಗಲಿದ್ದು, ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜೀನಾಮೆ ನೀಡುವ ಪರಿಸ್ಥಿತಿ ಬರುತ್ತದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಭವಿಷ್ಯ ನುಡಿದಿದ್ದಾರೆ.
ಕೊರೋನಾ ಹಾವಳಿ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಮೈಸೂರಿನಲ್ಲಿ ಭಾನುವಾರ ಕುದುರೆಗಾಡಿಯಲ್ಲಿ ಸಂಚಾರ ಮಾಡುವ ಮೂಲಕ ಅವರು ವಿನೂತನವಾಗಿ ಪ್ರತಿಭಟಿಸಿದ ಬಳಿಕ ಮಾತನಾಡಿದರು.
'ಈ ನಾಡಿನಲ್ಲಿ ನಾಲಿಗೆ ಮೇಲೆ ನಿಂತ ನಾಯಕ ಅಂದ್ರೆ ಅದು ಯಡಿಯೂರಪ್ಪ ಮಾತ್ರ'
ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು ಎಂದು ಹೇಳಿದ್ದೆ, ಹಾಗಿದ್ದರೂ, ರಾಜ್ಯ ಸರ್ಕಾರ ಪರೀಕ್ಷೆ ನಡೆಸುತ್ತಿದೆ. ಸಚಿವ ಸುರೇಶ್ ಕುಮಾರ್ ತಮ್ಮದೇ ನಿಲುವಲ್ಲಿ ಪರೀಕ್ಷೆ ನಡೆಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಈಗಾಗಲೇ ಸಿಬಿಎಸ್ಇ ಪರೀಕ್ಷೆಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸಿ, ವಿದ್ಯಾರ್ಥಿಗಳನ್ನು ಪಾಸ್ಮಾಡಿದೆ. ವಿವಿಧ ರಾಜ್ಯ ಸರ್ಕಾರಗಳು ಸಹ ಇದೇ ಮಾದರಿ ಅನುಸರಿಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಿವೆ. ಆದರೆ, ಕರ್ನಾಟಕ ಸರ್ಕಾರ ಪರೀಕ್ಷೆ ನಡೆಸುತ್ತಿದೆ. ಈ ಪರೀಕ್ಷೆ ಫಲಿತಾಂಶದಲ್ಲಿ ಶೇ.90 ರಷ್ಟು ವಿದ್ಯಾರ್ಥಿಗಳು ಫೇಲ್ ಆಗಲಿದ್ದು, ಆಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜೀನಾಮೆ ನೀಡುವ ಪರಿಸ್ಥಿತಿ ಎದುರುತಾಗುತ್ತದೆ ಎಂದು ಅವರು ಹೇಳಿದರು.