ಭ್ರಷ್ಟಾಚಾರ, ಲಂಚಾವತಾರ ವಿರೋಧಿಸಿ ವಾಟಾಳ್ ಕನ್ನಡ ಪಕ್ಷದ ವತಿಯಿಂದ ಯುವಜನರು, ರೈತರು, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಹೋರಾಟ ಆರಂಭಿಸಿದ್ದೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

ಮಂಡ್ಯ (ಮೇ.10): ಭ್ರಷ್ಟಾಚಾರ, ಲಂಚಾವತಾರ ವಿರೋಧಿಸಿ ವಾಟಾಳ್ ಕನ್ನಡ ಪಕ್ಷದ ವತಿಯಿಂದ ಯುವಜನರು, ರೈತರು, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಹೋರಾಟ ಆರಂಭಿಸಿದ್ದೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು. ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಈಡುಗಾಯಿ ಚಳವಳಿ ನಡೆಸಿ, ರಾಜ್ಯ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಅತಿಯಾದ ಭ್ರಷ್ಟಾಚಾರ, ಲಂಚಗುಳಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Add Asianetnews Kannada as a Preferred SourcegooglePreferred

ಈ ಭ್ರಷ್ಟ ವ್ಯವಸ್ಥೆ ವಿರುದ್ಧ ರಾಜ್ಯಾದ್ಯಂತ ವಾಟಾಳ್ ಪಕ್ಷದ ವತಿಯಿಂದ ಪ್ರವಾಸ ಮಾಡಿ ಯುವ ಜನರು, ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳನ್ನು ಸಂಘಟಿಸಿ ಹೊಸ ಚೈತನ್ಯ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆಗಾಗಿ ಅದ್ಭುತ ಕನ್ನಡ ಶಕ್ತಿ ಉದಯವಾಗಬೇಕು. ಆಗ ಮಾತ್ರ ಭ್ರಷ್ಟಾಚಾರ ತೊಲಗಲು ಸಾಧ್ಯ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದ ಎಲ್ಲರೂ ಭ್ರಷ್ಟಾಚಾರದಲ್ಲಿ ಪಾಲುದಾರರಾಗಿದ್ದಾರೆ. ಹೊಸ ಕನ್ನಡ ಶಕ್ತಿ ಉದಯವಾಗಿ ಪ್ರಾಮಾಣಿಕರು, ನಂಬಿಕಸ್ಥರು, ಪ್ರೀತಿವಂತರು ಬರಬೇಕು. ಭ್ರಷ್ಟಾಚಾರ ನಿಲ್ಲಿಸಬೇಕು. ಇದಕ್ಕಾಗಿ ತೀವ್ರ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 80ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಸ್ವಾತಂತ್ರ್ಯ ಬಂದಿರುವುದು ಭ್ರಷ್ಟಾಚಾರಕ್ಕಲ್ಲ.

ಮಹಾತ್ಮಾ ಗಾಂಧೀಜಿ ಈ ದೇಶಕ್ಕಾಗಿ ಪ್ರಾಮಾಣಿಕ ಹೋರಾಟ ಮಾಡಿದ್ದರು, ಅವರ ಜೀವನವೇ ದಿವ್ಯ ಸಂದೇಶ, ಆದರೆ, ಇಂದು ವ್ಯವಸ್ಥೆ ಅದಕ್ಕೆ ವಿರುದ್ಧವಾಗಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವಿಧಾನ ಸಭೆ, ಪರಿಷತ್, ಲೋಕಸಭೆ, ಜಿಲ್ಲಾಧಿಕಾರಿ ಕಚೇರಿ, ತಹಸೀಲ್ದಾರ್ ಕಚೇರಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ವ್ಯಾಪಕ ಭ್ರಷ್ಟಾಚಾರ ತಲೆದೋರಿದೆ. ವರ್ಗಾವಣೆ, ಉದ್ಯೋಗ ಎಲ್ಲದರಲ್ಲೂ ಲಂಚಾವತಾರ ಮನೆಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಆಗಿದ್ದಾಗ ಭಾರೀ ಭ್ರಷ್ಟಾಚಾರ

ಈಗ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಾನು ಶಾಸಕನಾಗಿದ್ದ ಅವಧಿಯಲ್ಲಿ ಕಂಡಿರಲಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಭಾರೀ ಭ್ರಷ್ಟಾಚಾರ ನಡೆಸಿದ್ದರು, ಶಾಸಕರನ್ನು ಕೋಟ್ಯಾಂತರ ರುಪಾಯಿಗಳಿಗೆ ಖರೀದಿಸಿದ್ದರು, ವಾಮಮಾರ್ಗದಿಂದ ಅಧಿಕಾರ ಹಿಡಿದಿದ್ದರು. ಅಂದಿನಿಂದ ರಾಜ್ಯದಲ್ಲಿ ಭ್ರಷ್ಟಾಚಾರ ಪ್ರಾರಂಭವಾಯಿತು, ಭ್ರಷ್ಟಾಚಾರದಿಂದ ಯಡಿಯೂರಪ್ಪನವರು ಜೈಲಿಗೆ ಹೋಗಿದ್ದರು, ಅಂತಹ ವ್ಯಕ್ತಿಯ ಬಗ್ಗೆ ಕೋಟ್ಯಾಂತರ ರುಪಾಯಿ ಖರ್ಚು ಮಾಡಿ ಅಭಿಮಾನೋತ್ಸವ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.