ರಾಜ್ಯದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಾಕಷ್ಟು ಸದ್ದಾಗಿದ್ದು ಇದೀಗ ದಿನದಿನಕ್ಕೂ ಈ ಕೇಸ್ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೇ ಬೆನ್ನಲ್ಲೇ ಮತ್ತೆ ಆರು ಸಚಿವರ ವಜಾಗೂ ಆಗ್ರಹ ಕೇಳಿ ಬಂದಿದೆ. 

ಮೈಸೂರು (ಮಾ.11):  ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪಗೆ ಗೂಂಡಾಗಿರಿ ಮಾಡಲು ಬರುತ್ತದೆಯೇ ಹೊರತು ಸರ್ಕಾರ ನಡೆಸಲು ಬರುವುದಿಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಕಿಡಿಕಾರಿದರು.

ನಗರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಟಾಂಗ ಏರಿ ಪ್ರತಿಭಟಿಸಿದ ಅವರು, ಯಡಿಯೂರಪ್ಪಗೆ ಸರ್ಕಾರ ನಡೆಸಲು ಬರಲ್ಲ. ಕೀಳುಮಟ್ಟದ ಸರ್ಕಾರವನ್ನು ನಾನು ನೋಡಿಲ್ಲ. ನಮ್ಮದು ಕರ್ನಾಟಕ ರಾಜ್ಯ, ಇದು ಜಾತಿಯ ರಾಜ್ಯವಲ್ಲ. ಜಾತಿಗೊಂದು ಪ್ರಾಧಿಕಾರ ಮಾಡಿ ಎಲ್ಲರೂ ದುಡ್ಡು ಹಂಚುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ. ಇನ್ನು ನೂರಾರು ಜಾತಿಯವರು ಮುಂದೆ ಪ್ರಾಧಿಕಾರ ಕೇಳುತ್ತಾರೆ. ಯಡಿಯೂರಪ್ಪ ಅವರ ಬಜೆಟ್‌ ಜಾತಿಯ ಬಜೆಟ್‌ ಯಡಿಯೂರಪ್ಪಗೆ ಬಜೆಟ್‌ ಮಂಡನೆ ಮಾಡುವ ನೈತಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ನಾನು ಗಂಡ್ಸು ಅಂತ ಪಾಸಿಟಿವ್ ಆಗಿ ತಗೊಳ್ಳಿ: ರಮೇಶ್ ಜಾರಕಿಹೊಳಿ‌ ಪರ ಸ್ವಾಮೀಜಿ ಬ್ಯಾಟಿಂಗ್‌

ಕ್ಯಾಬಿನೆಟ್‌ನಲ್ಲಿರುವ 6 ಸಚಿವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಅವರು ನ್ಯಾಯಾಲಯಕ್ಕೆ ಹೋಗಿದ್ದ ಮೇಲೆ ಅವರ ಮೇಲೆ ಆಪಾದನೆ ಇದೆ ಎಂದರ್ಥ. ಅವರನ್ನು ತಕ್ಷಣ ಕ್ಯಾಬಿನೆಟ್‌ ನಿಂದ ವಜಾ ಮಾಡಬೇಕು. ಇವರು ಕ್ಯಾಬಿನೆಟ್‌ ನಲ್ಲಿ ಉಳಿಯಲು ಅರ್ಹರಲ್ಲ. ರಮೇಶ್‌ ಜಾರಕಿಹೊಳಿ ಮೇಲೆ ಸಿಡಿ ಪ್ರಕರಣ ಇದೆ. ಅಸಲಿ ಅಥವ ನಕಲಿ ಏನೇಯಾದ್ರೂ ತನಿಖೆಯಾಗಬೇಕು.

 ಇದನ್ನು ಸಿಬಿಐ ತನಿಖೆ ಮಾಡಬೇಕು. ಇವರೇ ತನಿಖೆ ಮಾಡಬಾರದು. ಒಬ್ಬೊಬ್ಬರು ಒಂದೊಂದು ಅರ್ಥ ಹೇಳುತ್ತಿದ್ದಾರೆ. 2-3-4 ಅಂತ ಹೇಳುತ್ತಿದ್ದಾರೆ. ನಾನು 5-6-7 ಅಂದ್ರೆ ಆಗುತ್ತಾ. ಅದರ ಬಗ್ಗೆ ತನಿಖೆಯಾಗಬೇಕು. ದಿನೇಶ್‌ ಕಲ್ಲಹಳ್ಳಿ ದೂರು ಹಿಂಪಡೆದ ಬಗ್ಗೆ ಪತ್ತೆ ಮಾಡಬೇಕು. ಈ ಕೆಲಸವನ್ನು ಪೊಲೀಸರು ಮಾಡಬೇಕು. ಕರ್ನಾಟಕ ಪೊಲೀಸರಿಗೆ ಒಳ್ಳೆ ಹೆಸರಿದೆ. ಯಡಿಯೂರಪ್ಪರಿಂದ ಕೆಟ್ಟವರಾಗಬೇಡಿ. ನಿಮ್ಮನ್ನ ಯಡಿಯೂರಪ್ಪ ಸರ್ವೆಂಟ್‌ ಮಾಡಿಕೊಳ್ಳುತ್ತಾರೆ. ಪೊಲೀಸರು ಎಚ್ಚೆತ್ತುಕೊಳ್ಳಬೇಕು ಎಂದು ವಾಟಾಳ್‌ ನಾಗರಾಜ್‌ ಹೇಳಿದರು.

ದೀದಿ ಕಿತ್ತೂರು ರಾಣಿ ಚೆನ್ನಮ್ಮರಷ್ಟೆಜೋರು. ಮೋದಿಯನ್ನು ಎದರಿಸುವುದಕ್ಕೆ ದೀದಿ ಸಮರ್ಥವಾಗಿದ್ದಾರೆ. ಪಶ್ವಿಮ ಬಂಗಾಳದಲ್ಲಿ ನಡೆಯುತ್ತಿರುವ ಘಟನೆ ಅಮಾನವೀಯ. ಪಶ್ಚಿಮ ಬಂಗಾಳದಲ್ಲಿ ದೀದಿ ಗೆಲ್ಲಬೇಕು. ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ವಾಟಾಳ್‌ ನಾಗರಾಜ್‌ ಅಭಿಪ್ರಾಯಪಟ್ಟರು.