ರಾಮನಗರ (ಸೆ.17): ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ತನ್ನ ಮೊಂಡಾಟವನ್ನು ಮುಂದುವರಿಸಿದರೆ ಈ ರಾಜ್ಯದೊಂದಿಗೆ ಎಲ್ಲಾ ರೀತಿಯ ಸಂಬಂಧಗಳನ್ನು ಕಡಿದುಕೊಂಡು ಗಡಿ ಬಂದ್‌ ಮಾಡಬೇಕು ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್‌ ನಾಗರಾಜ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಐಜೂರು ವೃತ್ತದಲ್ಲಿ ರಾಜ್ಯ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಫಲವಾಗಿದೆ ಎಂದು ಆರೋಪಿಸಿ ಮೈಸೂರು-ಬೆಂಗಳೂರು ಹೆದ್ದಾ​ರಿ​ಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕುಡಿಯುವ ನೀರಿನ ಯೋಜನೆ

ಹಳೆ ಮೈಸೂರು ಭಾಗದಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸುವ ಸಲುವಾಗಿ ಮೇಕೆದಾಟು ಯೋಜನೆಯನ್ನು ರೂಪಿಸಲಾಗಿದ್ದು, ಕುಡಿಯುವ ನೀರು ಯೋಜನೆಗೆ ಯಾರೂ ಅಡ್ಡಿಪಡಿಸುವಂತಿಲ್ಲ, ಪರಮೋಚ್ಚ ನ್ಯಾಯಾಲಯವೇ ತಿಳಿಸಿದೆ.

ರಮೇಶ್ ಜಾರಕಿಹೊಳಿ ಭೇಟಿ : ಮಹತ್ವ ಪಡೆದುಕೊಂಡ ಚರ್ಚೆ ...

ಆದರೆ, ಕರ್ನಾಟಕದ ವಿಚಾರದಲ್ಲಿ ಮೊದಲಿನಿಂದಲೂ ಮೊಂಡಾಟ ಹಾಗೂ ಪುಂಡಾಟಿಕೆಯನ್ನು ನಡೆಸಿಕೊಂಡು ಬಂದಿರುವ ತಮಿಳುನಾಡು ರಾಜ್ಯವು ಭವ್ಯ ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವ ರೀತಿಯಲ್ಲಿ ವರ್ತಿಸುತ್ತಿದೆ. ಮೇಕೆದಾಟು ವಿಚಾರದಲ್ಲಿಯೂ ಎಂದಿನಂತೆ ತನ್ನ ಕ್ಯಾತೆ ತೆಗೆದಿರುವುದನ್ನು ನಿವಾರಿಸಿಕೊಂಡು ಮೇಕೆದಾಟು ಯೋಜನೆಗೆ ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಬೇಕು ಎಂದು ಆಗ್ರಹಿಸಿದರು.

ಬಿಎಸ್‌ವೈ ಸರ್ಕಾರ ವಿಫಲ

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರಗಳಿದ್ದರೂ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಕೊರೋನಾ ಸೋಂಕು ತಡೆಯುವುದು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ತೀವ್ರ ವಿಫಲವಾಗಿದೆ.

ಬಿಜೆ​ಪಿ ಸರ್ಕಾರ ತನ್ನ ಹುಳುಕುಗಳನ್ನು ಮುಚ್ಚಿಕೊಳ್ಳಲು ಡ್ರಗ್ಸ್‌ ದಂಧೆಯನ್ನು ಮುನ್ನೆಲೆಗೆ ತಂದು ಕೊರೋನಾ ಸಂಬಂಧಿತ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಮಾಡಿರುವ ಕೋಟಿ ಕೋಟಿ ರುಪಾಯಿಗಳ ಲೂಟಿಯನ್ನು ಮರೆ ಮಾಚಲು ಈ ರೀತಿಯ ನಾಟಕ ಮಾಡುವ ಮೂಲಕ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುತ್ತಿದೆ ಎಂದು ವಾಟಾಳ್‌ ನಾಗರಾಜ್ ಆರೋಪಿಸಿದರು.

ಪ್ರತಿ​ಭ​ಟ​ನೆ​ಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್‌, ಜಿಲ್ಲಾಧ್ಯಕ್ಷ ಸಿ.ಎಸ್‌.ಜಯಕುಮಾರ್‌ , ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಬಾಯಿ, ದಲಿತ ಘಟಕದ ಜಿಲ್ಲಾಧ್ಯಕ್ಷ ಕೆ.ಜಯರಾಮು, ತಾಲೂಕು ಅಧ್ಯಕ್ಷ ತ್ಯಾಗರಾಜು, ಪದಾಧಿಕಾರಿಗಳಾದ ಚಂದ್ರಶೇಖರ್‌ , ಪಿ.ಸುರೇಶ್‌, ಲತಾ, ವರಲಕ್ಷ್ಮಿ, ಕುಸುಮ, ವಾಟಾಳ್‌ ಪಾರ್ಥಸಾರಥಿ, ಬಾಲಾಜಿ, ಕೃಷ್ಣಮೂರ್ತಿ ಮತ್ತಿತರರು ಭಾಗ​ವ​ಹಿ​ಸಿದ್ದರು.