ರಮೇಶ್ ಜಾರಕಿಹೊಳಿ ಭೇಟಿ : ಮಹತ್ವ ಪಡೆದುಕೊಂಡ ಚರ್ಚೆ
ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಬಾರಿ ಚರ್ಚೆಗೆ ಒಳಗಾದ ವಿಚಾರದ ಬಗ್ಗೆ ಇದೀಗ ಸಚಿವ ರಮೇಶ್ ಜಾರಕಿಹೊಳಿ ಚರ್ಚೆ ನಡೆಸಿದ್ದಾರೆ. ಶೀಘ್ರದಲ್ಲೇ ಮೇಕೆದಾಟು ಡ್ಯಾಂ ನಿರ್ಮಾಣದ ಬಗ್ಗೆ ಮಹತ್ವದ ತೀರ್ಮಾನ ಹೊರಬೀಳುವ ಸಾದ್ಯತೆ ಇದೆ.
ಎಂ.ಅಫ್ರೋಜ್ ಖಾನ್
ರಾಮನಗರ (ಸೆ.13): ದಶಕಗಳಷ್ಟುಹಳೆಯದಾದ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಮೇಕೆದಾಟು ಯೋಜನೆಯ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸೆ. 14ರಂದು ಮೇಕೆದಾಟು ಸಮತೋಲನಾ ಜಲಾಶಯ ನಿರ್ಮಿಸಲು ಉದ್ದೇಶಿಸಿರುವ ಪ್ರದೇಶವನ್ನು ವೀಕ್ಷಿಸಿ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು.
ಈ ಯೋಜನೆಗೆ ಕೇಂದ್ರ ಜಲಶಕ್ತಿ ಇಲಾಖೆಯಿಂದ ಒಪ್ಪಿಗೆ ದೊರಕಿದ್ದು, ಕೇಂದ್ರ ಅರಣ್ಯ ಇಲಾಖೆಯ ಅನುಮತಿಯಷ್ಟೇ ಬಾಕಿ ಉಳಿದಿದೆ. ಹೀಗಾಗಿ ಸಚಿವ ರಮೇಶ್ ಜಾರಕಿ ಹೊಳಿರವರ ಭೇಟಿ ಮಹತ್ವ ಪಡೆದುಕೊಂಡಿದೆ.
ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸಾಕಷ್ಟುಕಸರತ್ತು ನಡೆಸಿದ್ದ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್, 2019ರಲ್ಲಿ ಯೋಜನಗೆ ಚಾಲನೆ ನೀಡಲು ಪ್ರಯತ್ನಿಸಿದ್ದರು. ಆದರೆ, ದೋಸ್ತಿ ಸರ್ಕಾರ ಪತನಗೊಂಡ ತರುವಾಯ ಯೋಜನೆ ಚರ್ಚೆ ತಣ್ಣಗಾಗಿತ್ತು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕೇಂದ್ರ ಸರ್ಕಾರ ತಮಿಳುನಾಡಿನ ಆಕ್ಷೇಪಣೆ ಹಿನ್ನೆಲೆಯಲ್ಲಿ ಯೋಜನೆಯನ್ನು ಮರು ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಕೇಂದ್ರ ಜಲಶಕ್ತಿ ಇಲಾಖೆ ರಾಜ್ಯ ಸರ್ಕಾರ ಸಲ್ಲಿಸಿದ ಮನವಿಗೆ ಸ್ಪಂದಿಸಿ ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಿದೆ.
ರಾಯಣ್ಣ ಪ್ರತಿಮೆ ವಿವಾದ ಇತ್ಯರ್ಥಗೊಳ್ಳುತ್ತಿದ್ದಂತೆಯೇ ಬೆಳಗಾವಿಗೆ ಮಂತ್ರಿಗಳ ದಂಡು
ಕೇಂದ್ರ ಅರಣ್ಯಇಲಾಖೆಯಿಂದ ಹಿಂದೇಟು ಏಕೆ?
ಮೇಕೆದಾಟು ಯೋಜನೆಯಿಂದ 3,181 ಹೆಕ್ಟೇರ್ ವನ್ಯಜೀವಿ ಸಂರಕ್ಷಿತ ಅರಣ್ಯ ಸೇರಿದಂತೆ 5,051 ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ. ಇದರಲ್ಲಿ ಶೇಕಡ 90 ರಷ್ಟುಅರಣ್ಯ ಭೂಮಿ ಮತ್ತು ಉಳಿದ ಕಂದಾಯ ಭೂಮಿ ಸೇರಿದೆ. ಆನೆ, ಜಿಂಕೆ ಸೇರಿದಂತೆ ಇನ್ನಿತರ ವನ್ಯ ಸಂಕುಲ ನೆಲೆ ಕಳೆದುಕೊಳ್ಳಲಿವೆ.
ಸಂಗಮ ಅರಣ್ಯ ಪ್ರದೇಶದಲ್ಲಿನ ಆನೆ ಕಾರಿಡಾರ್ ಕರ್ನಾಟಕ ಮತ್ತು ತಮಿಳುನಾಡುಗಳನ್ನು ಸಂಪರ್ಕ ಕಲ್ಪಿಸುತ್ತದೆ. ಈ ಅರಣ್ಯ ಪ್ರದೇಶದಳಲ್ಲಿ ಆನೆಗಳು ಹೆಚ್ಚಾಗಿದ್ದು, ಆನೆ ಕಾರಿಡಾರ್‌ಗೂ ಧಕ್ಕೆಯಾಗಲಿದೆ. ಭವಿಷ್ಯದಲ್ಲಿ ಮಾನವ -ಪ್ರಾಣಿ ಸಂಘರ್ಷ ಹೆಚ್ಚಳಕ್ಕೆ ಕಾರಣವಾಗಬಹುದು. ಹೀಗಾಗಿ ಕೇಂದ್ರ ಅರಣ್ಯಇಲಾಖೆ ಯೋಜನೆ ಅನುಷ್ಠಾನಕ್ಕೆ ಗ್ರೀನ್ ಸಿಗ್ನಲ್ ನೀಡಲು ಮೀನಾಮೇಷ ಎಣಿಸುತ್ತಿದೆ ಎನ್ನಲಾಗಿದೆ.
ಈ ಕಾರಣದಿಂದಾಗಿಯೇ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಖುದ್ದಾಗಿ ಮೇಕೆದಾಟು ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಬಳಿಕ ಯೋಜನೆ ಅನುಮತಿಗಾಗಿ ಕೇಂದ್ರದೊಂದಿಗೆ ಚರ್ಚಿಸಿ ಯೋಜನೆಗೆ ಒಪ್ಪಿಗೆ ಪಡೆಯಲು ನಿರ್ಧರಿಸಿದ್ದಾರೆ.
ಜಲಾಶಯ ಯೋಜನೆಯ ತಾಂತ್ರಿಕ ಮಾಹಿತಿ
ಮೇಕೆದಾಟು ಅಣೆಕಟ್ಟೆಯನ್ನು ಮುಗ್ಗೂರು ಅರಣ್ಯ ವಲಯದ ವಾಚಿಂಗ್ ಟವರ್ ಗುಡ್ಡೆಯಿಂದ ಹನೂರು ಅರಣ್ಯ ವಲಯದ ಗುಡ್ಡೆಯ ನಡುವಿನ ಒಂಟಿಗುಂಡು ಬಳಿ ನಿರ್ಮಿಸಲು ಸ್ಥಳ ಗುರುತಿಸಲಾಗಿದೆ.
ಅಣೆಕಟ್ಟೆಯ ಎತ್ತರ 441.20 ಮೀಟರ್, ಅಗಲ 674.5 ಮೀಟರ್ ಇರಲಿದೆ. ಹೊರ ಹರಿವಿಗಾಗಿ 15* 12 ಮೀಟರ್ ಎತ್ತರದಷ್ಟು17 ಗೇಟ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಒಟ್ಟು ನೀರಿನ ಶೇಖರಣಾ ಸಾಮರ್ಥ್ಯ 66.85 ಟಿಎಂಸಿ ನೀರು. 64 ಟಿಎಂಸಿ ನೀರು ತುಂಬಿದರೆ ಜಲಾಶಯ ಭರ್ತಿ ಎಂದರ್ಥ. ಅಣೆಕಟ್ಟಿನ 370.48 ಮೀಟರ್ ವರೆಗೆ 7.7 ಟಿಎಂಸಿ ನೀರು ಡೆಡ್ ಸ್ಟೋರೇಜ್‌ನಲ್ಲಿ ಸಂಗ್ರಹವಾಗಿರುತ್ತದೆ.
ಒಂಟಿಗುಂಡು ಸ್ಥಳದಿಂದ 1.5 ಕಿ.ಮೀ ದೂರದಲ್ಲಿ ಮೇಕೆದಾಟು ಸಿಗಲಿದೆ. ಅಲ್ಲಿ ಅಣೆಕಟ್ಟೆಯಿಂದ ಹೊರ ಬರುವ ನೀರನ್ನು ಬಳಸಿಕೊಂಡು 400 ರಿಂದ 440 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯದ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. 2018ರಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು 5,912 ಕೋಟಿ ರುಪಾಯಿ ವೆಚ್ಚ ತಗಲುವ ಅಂದಾಜಿತ್ತು. ಇದಕ್ಕಾಗಿ ಇಂಧನ ಇಲಾಖೆಯಿಂದ 2 ಸಾವಿರ ಕೋಟಿ ಹಾಗೂ ಜಲಸಂಪನ್ಮೂಲ ಇಲಾಖೆಯಿಂದ 3,912 ಕೋಟಿ ವಿನಿಯೋಗಿಸಲು ನಿರ್ಧರಿಸಲಾಗಿತ್ತು. ಆದರೀಗ ಯೋಜನೆ ವೆಚ್ಚ ಹೆಚ್ಚಾಗುವ ಸಾಧ್ಯತೆಗಳಿವೆ.