ಕಲಬುರಗಿ(ಅ.28): ಭೀಕರ ಮಳೆಯಿಂದ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಪೂರ್ಣ ಹಾನಿಯಾಗಿದೆ. ಕೇಂದ್ರ ಸರ್ಕಾರ ಕೂಡಲೇ 50 ಸಾವಿರ ಕೋಟಿ ಪರಿಹಾರ ಘೋಷಣೆ ಮಾಡಬೇಕೆಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್‌ ನಾಗರಾಜ್‌ ಒತ್ತಾಯಿಸಿದ್ದಾರೆ. 

ಕಲ್ಯಾಣ ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟ ಕಲಬುರಗಿ ಮತ್ತು ಕನ್ನಡ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಮುಂದೆ ಕನ್ನಡ ಪರ ಸಂಘಟನೆಗಳು ಜಂಟಿಯಾಗಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ, ಇತ್ತೀಚೆಗೆ ಸುರಿದ ಮಳೆ ಮತ್ತು ಪ್ರವಾಹದಿಂದಾಗಿ ಈ ಭಾಗದಲ್ಲಿ ಲಕ್ಷಾಂತರ ಎಕರೆ ಬೆಳೆ ಹಾಳಾಗಿದೆ. ಸಾವಿರಾರು ಜನ ಮನೆಮಠ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಆದರೆ ಸರ್ಕಾರ ಇಲ್ಲಿಯವರೆಗೆ ನೆರವಿಗೆ ಬಂದಿಲ್ಲ ಎಂದು ಅಪಾದಿಸಿದ್ದಾರೆ. 

ಕಲ್ಯಾಣ ಕರ್ನಾಟಕದಲ್ಲಿ ಜೆಡಿಎಸ್‌ ಕಟ್ಟುವ ಸಂಕಲ್ಪ: ವೈಎಸ್‌ವಿ ದತ್ತಾ

ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ಮಾಡುವ ಮೂಲಕ ಈ ಭಾಗದ ಸಂವಿಧಾನ 371(ಜೆ) ಕಲಂ ತಿದ್ದುಪಡಿವಾದರೂ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಈ ಭಾಗದ ಅಭಿವೃದ್ಧಿ ಬಗ್ಗೆ ಕಾಳಜಿ ಮಾಡುತ್ತಿಲ್ಲ. ಅದಕ್ಕಾಗಿ ಕಲಬುರಗಿಯಲ್ಲಿ 2 ತಿಂಗಳಿಗೊಮ್ಮೆ ಸಚಿವ ಸಂಪುಟದ ಸಭೆ ಮಾಡಬೇಕು ಎಂದು ಆಗ್ರಹಿಸಿದರು.

ನವೆಂಬರ್‌ನಲ್ಲಿ ಬೀದರ್‌ದಿಂದ ರಾಜಧಾನಿವರೆಗೆ ಕನ್ನಡ ಕಡ್ಡಾಯಕ್ಕಾಗಿ ಜಾಥಾ ಹಮ್ಮಿಕೊಂಡಿದೆ. ಈ ಜಾಥಾದಲ್ಲಿ ಈ ಭಾಗದ ಕನ್ನಡಪರ ಸಂಘಟನೆಗಳು ಕೂಡ ಭಾಗವಹಿಸಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ ನಾಲವಾರಕರ್‌, ಜಿಲ್ಲಾಧ್ಯಕ್ಷ ಸಚಿನ ಫರಹತಾಬಾದ, ರವಿ,ದೇಗಾಂವ ಸೋಮನಾಥ ಕಟ್ಟಿಮನಿ ಇದ್ದರು.