ಮದ್ಯ, ಮಾಂಸಪ್ರಿಯರಿಗೆ ಸುಗ್ಗಿಯೋ ಸುಗ್ಗಿ| ಕತ್ತಲು ರಾತ್ರಿಯೇ ಸೋಲು ಗೆಲುವಿಗೆ ನಿರ್ಧಾರ| ಸಸ್ಯಹಾರಿಗಳಿಗೆ ಪಲಾವ್, ವಗ್ಗರಣೆ, ಮಿರ್ಚಿ, ಕೇಸರಿಬಾತ್| ಮೊದಲ ಹಂತದಲ್ಲಿ ಬಳ್ಳಾರಿ, ಸಿರುಗುಪ್ಪ, ಕುರುಗೋಡು, ಕಂಪ್ಲಿ, ಹೊಸಪೇಟೆ ತಾಲೂಕಿನಲ್ಲಿ ಚುನಾವಣೆ|
ಕೆ.ಎಂ. ಮಂಜುನಾಥ್
ಬಳ್ಳಾರಿ(ಡಿ.21): ಒಂದು ವೋಟಿಗೆ 1 ಸಾವಿರಗಳಿಂದ 2 ಸಾವಿರ ನಗದು. ಜತೆಗೆ ಒಂದು ಕುಟುಂಬಕ್ಕೆ ಮಂಡಕ್ಕಿ ಚೀಲ, ಮಹಿಳೆಯರಿಗೆ ಸೀರೆ, ಮಾಂಸಹಾರಿಗಳಾದರೆ 3 ರಿಂದ 5 ಜನರಿರುವ ಕುಟುಂಬಕ್ಕೆ ಐದು ಕೆಜಿ ಮಾಂಸ, ಜತೆಗೆ ಕುಡಿಯಲು ಮದ್ಯ! ಗ್ರಾಮ ಪಂಚಾಯಿತಿ ಚುನಾವಣೆಗೆ ಅಭ್ಯರ್ಥಿಗಳು ಮತದಾರ ಮಹಾಪ್ರಭುಗಳಿಗೆ ಹಂಚಿಕೆ ಮಾಡಲು ಸಿದ್ಧ ಮಾಡಿಕೊಂಡಿರುವ ಸರಕುಗಳಿವು.
ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಪ್ರಕ್ರಿಯೆಗೆ ಒಂದೇ ದಿನ ಬಾಕಿ ಇರುವಾಗಲೇ ಮನೆಮನೆ ಸುತ್ತುತ್ತಿರುವ ಅಭ್ಯರ್ಥಿಗಳು, ಮತದಾರರಿಗೆ ಮುಂಗಡವಾಗಿಯೇ ಮದ್ಯ, ಮಾಂಸ, ಮಂಡಕ್ಕಿ, ಸೀರೆಗಳನ್ನು ವಿತರಣೆ ಮಾಡಲಾರಂಭಿಸಿದ್ದಾರೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಅಭ್ಯರ್ಥಿಯಾಗುವ ನಿರೀಕ್ಷೆ ಹೊತ್ತು ಕುಳಿತಿದ್ದವರು ಮದ್ಯಾರಾಧನೆ ಶುರು ಮಾಡಿಕೊಂಡಿದ್ದರು. ಇದೀಗ ಮತದಾರರಿಗೆ ಮದ್ಯ, ಮಾಂಸದ ಆಸೆ ತೋರಿಸಿ ಮತದಾನಕ್ಕಾಗಿ ಮೊರೆ ಹೋಗುತ್ತಿದ್ದಾರೆ.
ಆ್ಯಂಬುಲೆನ್ಸ್‌ನಲ್ಲೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ
ಮೊದಲ ಹಂತದಲ್ಲಿ ಬಳ್ಳಾರಿ, ಸಿರುಗುಪ್ಪ, ಕುರುಗೋಡು, ಕಂಪ್ಲಿ, ಹೊಸಪೇಟೆ ತಾಲೂಕಿನಲ್ಲಿ ಚುನಾವಣೆ ನಡೆಯುತ್ತಿದ್ದು, ಬಹುತೇಕ ಕಡೆಗಳಲ್ಲಿ ಜಿದ್ದಾಜಿದ್ದಿ ಶುರುವಾಗಿದೆ. ಇದು ಅಭ್ಯರ್ಥಿಗಳ ಚುನಾವಣೆ ವೆಚ್ಚವನ್ನು ಹೆಚ್ಚುವಂತೆ ಮಾಡಿದೆ. ಇದೇ ಮೊದಲ ಬಾರಿಗೆ ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಚುನಾಯಿಸಿಕೊಳ್ಳಲು ಶತಾಯಗತಾಯ ಪ್ರಯತ್ನದಲ್ಲಿದ್ದು, ಒಂದೊಂದು ಮತಕ್ಕೂ ಹೆಚ್ಚಿನ ಮೌಲ್ಯ ಬಂದಿದೆ. ಅಭ್ಯರ್ಥಿಗಳು ಗೆಲುವಿಗಾಗಿನ ಖರ್ಚಿನ ಹಿಂದೆ ಸ್ಥಳೀಯ ರಾಜಕೀಯ ನಾಯಕರ ಬಲವಿದೆ ಎಂದು ಹೇಳಲಾಗುತ್ತಿದ್ದು, ಇದು ಹಳ್ಳಿ ರಾಜಕೀಯದ ಜಿದ್ದಿನ ಹಾಗೂ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಚುನಾವಣೆ ಎರಡು ದಿನ ಮುನ್ನವೇ ಮತದಾರರಿಗೆ ಆಮಿಷವೊಡ್ಡುವ ಪ್ರಕ್ರಿಯೆಗಳು ರಾಜಾರೋಷವಾಗಿ ನಡೆಯುತ್ತಿವೆ. ಬೆಳಗ್ಗೆಯಿಂದಲೇ ಮತದಾರರನ್ನು ಭೇಟಿ ಮಾಡುವ ಪ್ರಕ್ರಿಯೆಯಲ್ಲಿರುವ ಅಭ್ಯರ್ಥಿಗಳು ನಗದು, ಸೀರೆ, ಕುಪ್ಪಸ ವಿತರಣೆ ಕಾರ್ಯ ಶುರುವಿಟ್ಟುಕೊಂಡಿದ್ದಾರೆ. ಚುನಾವಣೆ ದಿನ ಮದ್ಯ, ಮಾಂಸ ವಿತರಿಸುವ ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ. ಇನ್ನು ಹಳ್ಳಿ ರಾಜಕೀಯ ಜಿದ್ದು ತಾರಕಕ್ಕೇರುತ್ತಿರುವಂತೆಯೇ ‘ಮತಮೌಲ್ಯ’ವೂ ಹೆಚ್ಚಳವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಆಯಾ ವಾರ್ಡ್‌ನಲ್ಲಿ ಎಷ್ಟು ಜನ ಸ್ಪರ್ಧಿಸಿದ್ದಾರೆ ಎಂಬುದರ ಮೇಲೆ ಹಣದ ಹೊಳೆ ಹರಿಯುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇನ್ನು ಚುನಾವಣೆ ದಿನಗಣನೆ ಶುರುವಾಗುತ್ತಿದ್ದಂತೆಯೇ ಮತದಾರರನ್ನು ಹುಡುಕಾಡಿ ಮತದಾನ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ನೇರ ಮನೆಗೆ ಬರುತ್ತಿದೆ ಮಾಂಸ-ಸ್ವೀಟ್
ಗ್ರಾಮ ಪಂಚಾಯಿತಿ ಚುನಾವಣೆ ಮಾಂಸ-ಮದ್ಯಪ್ರಿಯರಿಗೆ ಸುಗ್ಗಿ. ಕಳೆದ ನಾಲ್ಕು ದಿನಗಳಿಂದ ಕೆಲವು ಹಳ್ಳಿಗಳಲ್ಲಿ ಮಾಂಸಪ್ರಿಯರಿಗೆ ನೇರವಾಗಿ ಕುರಿ, ಕೋಳಿ ಮಾಂಸ ಮನೆಗೆ ಬರುತ್ತಿದೆ. ಸಸ್ಯಹಾರಿಗಳಿಗೆ ಪಲಾವ್ ಹಾಗೂ ಕೇಸರಿಬಾತ್ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಅಭ್ಯರ್ಥಿಗಳು ಮಾಡಿಕೊಂಡಿದ್ದಾರೆ. ಎರಡು ಅಭ್ಯರ್ಥಿಗಳು ಪೈಪೋಟಿಯಲ್ಲಿ ಮಾಂಸ, ಮದ್ಯವನ್ನು ಪೂರೈಕೆ ಮಾಡುತ್ತಿದ್ದಾರೆ. ಸಸ್ಯಹಾರಿಗಳಿಗೆ ಪಲಾವ್, ವಗ್ಗರಣೆ, ಮಿರ್ಚಿ, ಕೇಸರಿಬಾತ್ ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಿ ನೇರವಾಗಿ ಮನೆಗೆ ಕಳುಹಿಸಿಕೊಡಲಾಗುತ್ತಿದೆ. ಕೆಲವು ಅಭ್ಯರ್ಥಿಗಳು ತಮ್ಮ ಚುನಾವಣೆ ಗುರುತಿನ ಕುಕ್ಕರ್, ಟಾರ್ಚ್, ಲಾಟೀನ್‌ಗಳನ್ನು ನೀಡಿ ಮತವೊಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಕತ್ತಲು ರಾತ್ರಿಯೇ ಸೋಲು ಗೆಲುವಿಗೆ ನಿರ್ಧಾರ...
ಚುನಾವಣೆ ಮುನ್ನ ದಿನ ರಾತ್ರಿ ನಡೆಯುವ ಕತ್ತಲುರಾತ್ರಿಯೇ ಅಭ್ಯರ್ಥಿಗಳನ್ನು ಸೋಲು-ಗೆಲುವನ್ನು ನಿರ್ಧರಿಸುತ್ತದೆ ಎಂಬ ಮಾತು ಗ್ರಾಮೀಣ ಭಾಗಗಳಲ್ಲಿ ಕೇಳಿ ಬರುತ್ತಿದೆ. ಈ ವರೆಗೆ ಎಷ್ಟೇ ಮದ್ಯ, ಮಾಂಸ ನೀಡಿರಲಿ, ಡಿ. 21ರ ರಾತ್ರಿ ನೀಡುವ ಹಣವೇ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಈ ವರೆಗೆ ಚುನಾವಣೆಗಳನ್ನು ನೋಡಿಕೊಂಡು ಬಂದಿರುವ ಹಿರಿಯರ ಅಂಬೋಣ. ಎದುರಾಳಿ ಎಷ್ಟು ಹಣ ನೀಡಿದ್ದಾರೆ ಎಂಬುದರ ಮೇಲೆಯೇ ಹಣದ ಹರಿವು ಪ್ರಮುಖವಾಗಲಿದೆ ಎಂದು ಹೇಳಲಾಗುತ್ತಿದೆ.
ಚುನಾವಣೆಯಲ್ಲಿ ಹಣ, ಹೆಂಡ ಹಂಚಿಕೆಯನ್ನು ತಡೆಯುವಂತಾಗಬೇಕು. ಮತದಾರರಿಗೆ ಮತದ ಮೌಲ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಹಣ, ಹೆಂಡ, ಮದ್ಯ ಹಂಚಿಕೆ ಮಾಡುವುದು ಪ್ರಜಾಪ್ರಭುತ್ವ ಮೌಲ್ಯಕ್ಕೆ ಅಪಮಾನ ಮಾಡಿದಂತೆ ಎಂದು ಸಿರುಗುಪ್ಪದ ಪ್ರಗತಿಪರ ಹೋರಾಟಗಾರ ಜೆ.ವಿ.ಎಸ್. ಶಿವರಾಜ್ ಹೇಳಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 21, 2020, 12:25 PM IST