ಸಿಲಿಕಾನ್ ಸಿಟಿ, ಐಟಿ-ಬಿಟಿ ನಗರ ಎಂದು ಪ್ರಖ್ಯಾತಿ ಹೊಂದಿರುವ ರಾಜಧಾನಿಯಲ್ಲಿ ತಂತ್ರಜ್ಞಾನ ಬಳಕೆಯ ಮಟ್ಟವೂ ಅಧಿಕ
ಬೆಂಗಳೂರು(ಜು.30): ರಾಜಧಾನಿ ಬೆಂಗಳೂರಿನ 1.45 ಕೋಟಿ ಜನರಿಗೆ ಮೂಲಸೌಕರ್ಯ ಒದಗಿಸುವ ಬಿಬಿಎಂಪಿಯ ಅಧಿಕೃತ ಹೊಸ ವೆಬ್‌ಸೈಟ್ (bbmp.gov.in) ಅಸ್ಪಷ್ಟ ಮಾಹಿತಿ ಒಳಗೊಂಡಿದ್ದು, ಸಮರ್ಪಕವಾಗಿ ಉಪಯೋಗಕ್ಕೆ ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿದೆ. ರಾಜ್ಯ ಸರ್ಕಾರ ‘ಬೆಂಗಳೂರು ಮಿಷನ್-2022’ ಹಲವು ಯೋಜನೆ ಘೋಷಿಸಿತ್ತು. ಸಿಲಿಕಾನ್ ಸಿಟಿ, ಐಟಿ-ಬಿಟಿ ನಗರ ಎಂದು ಪ್ರಖ್ಯಾತಿ ಹೊಂದಿರುವ ರಾಜಧಾನಿಯಲ್ಲಿ ತಂತ್ರಜ್ಞಾನ ಬಳಕೆಯ ಮಟ್ಟವೂ ಅಧಿಕವಾಗಿದೆ. ಹೀಗಾಗಿ, ಸಾರ್ವಜನಿಕರು ಕುಳಿತಲ್ಲಿ ಬೆರಳ ತುದಿಯಲ್ಲಿ ಪಾಲಿಕೆಯ ವಿವಿಧ ಇಲಾಖೆಗಳ ಪ್ರತಿ ದಿನದ ಮಾಹಿತಿ, ಬೆಳವಣಿಗೆಗಳು ಹಾಗೂ ಸೇವೆಗಳನ್ನು ಪಡೆಯಲು ಅನುಕೂಲ ಆಗುವಂತೆ ಇದರಲ್ಲಿ ಯೂನಿಫೈಡ್ ಸಿಟಿಜನ್ ಕನೆಕ್ಟ್ (ಯುಸಿಸಿ) ಮಾದರಿಯಲ್ಲಿ ಹೊಸ ವೆಬ್‌ಸೈಟ್ ಪೋರ್ಟಲ್ ಆರಂಭಿಸಲು ಮುಂದಾಗಿತ್ತು.
ಕೆಲವೇ ತಿಂಗಳಲ್ಲಿ ವೆಬ್‌ಸೈಟ್ ರಚಿಸಿ 2020ರ ಅ.1ರಿಂದ ಪ್ರಾಯೋಗಿಕ ಬಳಕೆಗೆ ಮುಕ್ತಗೊಳಿಸಲಾಯಿತು. ನಂತರ ಕೆಲವೊಂದು ತಿದ್ದುಪಡಿ ಮಾಡುವುದಾಗಿ ಹೇಳುತ್ತಿರುವ ಬಿಬಿಎಂಪಿ ಒಂದೂವರೆ ವರ್ಷವಾದರೂ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರಿಗೆ ಬೇಕಾದ ಮಾಹಿತಿ ಲಭ್ಯವಾಗುತ್ತಿಲ್ಲ.
ಖಾಸಗಿ ವಾಹನಗಳಲ್ಲಿ ‘ಬಿಬಿಎಂಪಿ’ ಸ್ಟೀಕರ್ ಬಳಕೆಗೆ ಪಾಲಿಕೆ ನಿಷೇಧ
ಬಿಬಿಎಂಪಿಯಲ್ಲಿ ಪ್ರಮುಖ ಇಲಾಖೆಗಳಿದ್ದು, ಪ್ರತಿಯೊಂದು ವಿಭಾಗ ನಿರ್ವಹಣೆ ಮಾಡಲು ಪ್ರತ್ಯೇಕ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಆದರೆ, ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಇಲಾಖಾ ಪುಟಗಳನ್ನು ತೆರೆದು ನೋಡಿದಲ್ಲಿ ಯಾವುದೇ ಸರಿಯಾದ ಮಾಹಿತಿ ಇಲ್ಲ. ಎಲ್ಲದಕ್ಕೂ ಶೀಘ್ರದಲ್ಲೇ ಬರಲಿದೆ ಎಂಬ ಸೂಚನೆ ಕಣ್ಣಿಗೆ ಕಾಣುತ್ತದೆ.
ಅಧಿಕಾರಿಗಳ ಮಾಹಿತಿಯೇ ಡಿಲೀಟ್
ಪ್ರಾಯೋಗಿಕ ಅವಧಿಯಲ್ಲಿ ‘ನಿಮ್ಮ ವಾರ್ಡ್ ತಿಳಿಯಿರಿ’ ಎಂಬ ಆಯ್ಕೆಯ ಮೇಲೆ ಒತ್ತಿದಲ್ಲಿ ಆ ಸ್ಥಳದ ಮಾಹಿತಿ, ವಾರ್ಡ್, ವಿಧಾನಸಭಾ ಕ್ಷೇತ್ರ, ಬಿಬಿಎಂಪಿ ವಲಯ, ಹತ್ತಿರದ ಪಾಲಿಕೆ ಕಚೇರಿ, ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಆಯಾ ಸ್ಥಳಕ್ಕೆ ಸಂಬಂಧಿಸಿದಂತೆ ಮಾಹಿತಿ ಲಭ್ಯವಾಗುತ್ತಿತ್ತು. ಜತೆಗೆ, ವಾರ್ಡ್‌ಗಳ ಎಲ್ಲ ಇಲಾಖೆಗಳ ಅಧಿಕಾರಿಗಳ ಹೆಸರು ಮತ್ತು ಸಂಪರ್ಕ ಸಂಖ್ಯೆ ಪ್ರಕಟ ಆಗುತ್ತಿತ್ತು. ಆದರೆ, ಈಗ ಎಲ್ಲ ಮಾಹಿತಿಯನ್ನು ತೆಗೆದು ಹಾಕಲಾಗಿದೆ ಎಂದು ದೂರುಗಳು ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಪರಿಷ್ಕರಣೆಗೆ 3 ವಾರ: ಸೂರ‍್ಯಸೇನ್
ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕ ಸೂರ್ಯಸೆನ್, ಈಗಾಗಲೇ ಪಾಲಿಕೆ ವೆಬ್‌ಸೈಟನ್ನು ಬಹುತೇಕ ಅಪ್‌ಡೇಟ್ ಮಾಡಲಾಗಿದ್ದು, ಪೂರ್ಣ ಪ್ರಮಾಣದಲ್ಲಿ ಅಪ್‌ಡೇಟ್‌ಗೆ ಸ್ಮಾರ್ಟ್ ಸಿಟಿ ಅವರು ಮೂರು ವಾರ ಸಮಯ ಕೇಳಿದ್ದಾರೆ. ಇನ್ನು ಪಾಲಿಕೆಗೆ ಸಂಬಂಧಿಸಿದ ಆದೇಶ, ಸುತ್ತೋಲೆಗಳು ಸೇರಿದಂತೆ ಮೊದಲಾದ ಮಾಹಿತಿ ಸಂಬಂಧಪಟ್ಟ ಇಲಾಖೆಯು ಮಾಹಿತಿ ತಂತ್ರಜ್ಞಾನ ವಿಭಾಗಕ್ಕೆ ಕಳುಹಿಸಿಕೊಟ್ಟರೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಬಹುದು. ಆದರೆ, ಎಲ್ಲ ವಿಭಾಗಗಳಿಂದ ಮಾಹಿತಿ ಬರುತ್ತಿಲ್ಲ. ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
