ಯಲ್ಲಾಪುರ ತಾಲೂಕಿನ ವ್ಯಕ್ತಿಯೊಬ್ಬರು ಇನಫ್ಲೂಯೆಂಜಾ ಎ (H1N1) ವೈರಲ್ ಜ್ವರದಿಂದ ಮೃತಪಟ್ಟಿದ್ದಾರೆ. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಸಾವನ್ನಪ್ಪಿದ್ದು, ವೈದ್ಯರು ಜ್ವರದ ತೀವ್ರ ಲಕ್ಷಣಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಯಲ್ಲಾಪುರ (ಉತ್ತರ ಕನ್ನಡ); ಹಂದಿ ಅಥವಾ ಹಕ್ಕಿಯಿಂದ ಬರಬಹುದಾದ ಇನಫ್ಲೂಯೆಂಜಾ ಎ ವೈರಲ್ ಜ್ವರ, ಶೀತ ಜ್ವರ ಫ್ಲೂ (ಎಚ್1ಎನ್ 1, ಹಂದಿಜ್ವರ) ಎಂದು ಖಚಿತ ಪಟ್ಟು ಚಿಕಿತ್ಸೆ ಫಲಿಸದೆ ವ್ಯಕ್ತಿಯೊಬ್ಬರು ಭಾನುವಾರ ಮೃತಪಟ್ಟಿದ್ದಾರೆ. ಯಲ್ಲಾಪುರ ತಾಲೂಕಿನ ಚವತ್ತಿ ಗ್ರಾಮದ ರಾಜು ಮಂಜಾ ಗೌಡ (41) ಮೃತರು.
ಇನಫ್ಲೂಯೆಂಜಾ ಎ ವೈರಲ್ ಜ್ವರ ಸೋಂಕು ದೃಢ
ಜೂ.10ರಂದು ಜ್ವರ ಕಾಣಿಸಿಕೊಂಡ ಹಿನ್ನೆಲೆ ಉಮ್ಮಚಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಮತ್ತೆ ಜೂ.12ಕ್ಕೆ ಜ್ವರ ಕಾಣಿಸಿಕೊಂಡ ಕಾರಣ ಮಂಚಿಕೇರಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದಾರೆ. ಜೂ.16ರಂದು ಜ್ವರ ಸುಸ್ತು ಇತ್ಯಾದಿ ಲಕ್ಷಣಗಳು ಕಂಡು ಬಂದ ಕಾರಣ ಶಿರಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ನಂತರ ವೈದ್ಯರ ಸಲಹೆ ಮೇರೆಗೆ ಜೂ.17ರಂದು ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಇನಫ್ಲೂಯೆಂಜಾ ಎ ವೈರಲ್ ಜ್ವರ ಸೋಂಕು ದೃಢವಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜೂ.21ರಂದು ಅವರು ಸಾವನ್ನಪ್ಪಿದ್ದಾರೆ.
ತೀವ್ರ ಉಸಿರಾಟದ ತೊಂದರೆ, ಎದೆನೋವು, ನಿರ್ಜಲೀಕರಣ, ಸುಸ್ತು, ಗೊಂದಲ ಕಂಡು ಬಂದಲ್ಲಿ ಹೆಚ್ಚಿನ ತುರ್ತು ಚಿಕಿತ್ಸೆ ಅವಶ್ಯಕತೆ ಇರುತ್ತದೆ. ಇಂತಹ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆ/ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡಯಬೇಕೆಂದು ವೈದ್ಯರು ತಿಳಿಸಿದ್ದಾರೆ.


