ಭಟ್ಕಳ [ಜ.12]:  ತಾಲೂಕಿನ ಕಾಯ್ಕಿಣಿ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆ ಮುಂದೂಡಲ್ಪಟ್ಟಿದ್ದು, ಮುಂದಿನ ಬೆಳವಣಿಗೆ ತೀವ್ರ ಕುತೂಹಲಕ್ಕೆಡೆ ಮಾಡಿದೆ.

ಜ. 11ರಂದು ನಡೆಯಬೇಕಿದ್ದ ತಾಲೂಕಿನ ಕಾಯ್ಕಿಣಿ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯನ್ನು ಮುಂದೂಡಿರುವುದು ಕಾನೂನು ಬಾಹಿರವಾಗಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸುವುದಾಗಿ ಸಹಕಾರಿ ಸಂಘಗಳ ಉಪನಿಬಂಧಕ ಎನ್‌.ಎಸ್‌. ಕುಮ್ಮೂರು ತಿಳಿಸಿದ್ದಾರೆ.

ಶನಿವಾರ ಸಂಜೆ ಭಟ್ಕಳ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಯ್ಕಿಣಿ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಗೆ ಚುನಾವಣೆ ಪ್ರಾಧಿಕಾರ ಜ. 11ರಂದು ನಿಗದಿಪಡಿಸಿತ್ತು. ಆದರೆ ಚುನಾವಣೆ ನಡೆಸಬೇಕಾದ ಚುನಾವಣಾಧಿಕಾರಿ ಅನಾರೋಗ್ಯ ಮತ್ತಿತರ ಕಾರಣ ನೀಡಿ ದಿಢೀರ್‌ ಚುನಾವಣೆಯನ್ನು ಜ. 19ಕ್ಕೆ ಮುಂದೂಡಿ ನೋಟಿಸ್‌ ಅಂಟಿಸಿ ಹೋಗಿದ್ದಾರೆ. ನಿಗದಿಯಾದ ಚುನಾವಣೆ ಮುಂದೂಡುವ ಅಧಿಕಾರ ಚುನಾವಣಾಧಿಕಾರಿಗೆ ಇಲ್ಲ. 

ಮೇದಿನಿ ಎಂಬ ಸುಂದರ ಊರಲ್ಲಿ 2ಹಗಲು 1ರಾತ್ರಿ : ಇಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ!...

ಹೀಗೆ ಚುನಾವಣೆಯನ್ನು ಏಕಾಏಕಿ ಮುಂದೂಡುವುದು ಕಾನೂನಿಗೆ ವಿರುದ್ಧವಾಗಿದೆ ಎಂದ ಅವರು, ನನಗೆ ಈ ವಿಚಾರ ಗೊತ್ತಾಗಿ ಸಹಕಾರಿ ಸಂಘಕ್ಕೆ ಭೇಟಿ ನೀಡಿದಾಗ ಅಲ್ಲಿ ಯಾರೂ ಇರಲಿಲ್ಲ. ಒಮ್ಮೆ ಚುನಾವಣಾ ಪ್ರಾಧಿಕಾರ ಚುನಾವಣೆ ದಿನಾಂಕ ನಿಗದಿಪಡಿಸಿದಾಗ ಅದನ್ನು ಮಾಡುವುದು ಚುನಾವಣಾಧಿಕಾರಿಯಯವರ ಕೆಲಸವಾಗಿದೆ. ಆದರೆ ಇಲ್ಲಿ ಹಾಗಾಗಲಿಲ್ಲ. ಸಂಘದ ಮುಖ್ಯ ಕಾರ್ಯನಿರ್ವಾಹಕರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ ಚುನಾವಣಾಧಿಕಾರಿ ಮತ್ತು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಮೇಲೆ ಪ್ರಕರಣ ದಾಖಲಿಸಲಾಗುವುದು. ಚುನಾವಣೆ ಸಾಮಗ್ರಿಗಳನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗುವುದು. ಚುನಾವಣೆ ಮುಂದೂಡಿದ ಕುರಿತು ಸೂಕ್ತ ತನಿಖೆ ನಡೆಸಿ ಶೀಘ್ರ ನ್ಯಾಯಸಮ್ಮತ ಚುನಾವಣೆ ನಡೆಸಲಾಗುವುದು ಎಂದರು.

ಮೇದಿನಿ ಗ್ರಾಮಕ್ಕೆ ಹೆಣ್ಣು ಕೊಡೋಕೂ ಹೆದರ್ತಾರೆ ...

ಜ. 10ರಂದು ಸಂಘದ ಚುನಾವಣಾಧಿಕಾರಿ ಜಿ.ಕೆ. ಭಟ್ಟಅವರು ಉಚ್ಚ ನ್ಯಾಯಾಲಯ ಹೆಚ್ಚುವರಿಯಾಗಿ ಅರ್ಹ ಮತದಾರರ ಪಟ್ಟಿಗೆ ಮತದಾರರನ್ನು ಸೇರ್ಪಡಿಸುವ ನಿರ್ದೇಶನ ನೀಡಿರುವ ಹಿನ್ನೆಲೆ ತಾಂತ್ರಿಕ ಕಾರಣದಿಂದಾಗಿ ಮತ್ತು ನನ್ನ ಅನಾರೋಗ್ಯದ ಪ್ರಯುಕ್ತ ಜ. 11ರಂದು ನಿಗದಿಯಾಗಿದ್ದ ಸಂಘದ ಚುನಾವಣೆಯನ್ನು ಜ. 19ಕ್ಕೆ ನಡೆಸಲಾಗುವುದು ಎಂದು ಪ್ರಕಟಣೆ ಹೊರಡಿಸಿದ್ದರು. ಕಾಯ್ಕಿಣಿ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯನ್ನು ಹಾಲಿ ಮತ್ತು ಮಾಜಿ ಶಾಸಕರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಚುನಾವಣೆಯಲ್ಲಿ ಸಾಲಗಾರರಲ್ಲದ ಕ್ಷೇತ್ರಕ್ಕೆ ಮಾಜಿ ಶಾಸಕ ಮಂಕಾಳು ವೈದ್ಯ ಸ್ಪರ್ಧೆ ಮಾಡಿದ್ದರು. 

ಚುನಾವಣೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿತರು ಸ್ಪರ್ಧಿಸಿದ್ದು, ಹೀಗಾಗಿ ಜಿದ್ದಾಜಿದ್ದಿಯಾಗಿತ್ತು. ಮೂರು ವಾರ್ಷಿಕ ಸಭೆಗೆ ಪಾಲ್ಗೊಳ್ಳದವರನ್ನು ಮತದಾನದಿಂದ ಕೈಬಿಟ್ಟು ಮತದಾರರ ಪಟ್ಟಿಸಿದ್ಧಪಡಿಸಿದ್ದರಿಂದ ಕೆಲ ಷೇರುದಾರ ಸದಸ್ಯರು ಇದನ್ನು ಆಕ್ಷೇಪಿಸಿ ಈ ಕುರಿತು ಹೈಕೋರ್ಟ್‌ ಮೆಟ್ಟಿಲೇರಿದ್ದನ್ನೂ ಸ್ಮರಿಸಬಹುದಾಗಿದೆ. ಒಟ್ಟಾರೆ ಚುನಾವಣೆಯನ್ನು ರಿಟರ್ನಿಂಗ್‌ ಅಧಿಕಾರಿಯವರು ಮುಂದೂಡಿದ್ದರೆ, ಇದು ಕಾನೂನುಬಾಹಿರ ಎಂದು ಉಪನಿಬಂಧಕರು ತಿಳಿಸಿದ್ದು, ಮುಂದಿನ ಬೆಳವಣಿಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.