Asianet Suvarna News Asianet Suvarna News

UttaraKannada: ಮೂಲಭೂತ ಸೌಕರ್ಯಕ್ಕಾಗಿ ಜೊಯಿಡಾ ತಾಲೂಕಿನಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ!

ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು,  ಇಲ್ಲಿನ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕದಂತಹ ಮೂಲಭೂತ ಸೌಕರ್ಯ ಇಂದಿಗೂ ಮರೀಚಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮೂರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಿಕೊಡಲು ಆಗ್ರಹಿಸಿರುವ ಗ್ರಾಮಸ್ಥರು ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.

Uttara Kannada Joida taluk warns of election boycott for basic infrastructure gow
Author
First Published Feb 3, 2023, 8:19 PM IST

ವರದಿ: ಭರತ್‌ರಾಜ್ ಕಲ್ಲಡ್ಕ  ಏಷಿಯಾನೆಟ್ ಸುವರ್ಣ ನ್ಯೂಸ್ 

ಉತ್ತರಕನ್ನಡ (ಜ.3): ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು,  ಇಲ್ಲಿನ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕದಂತಹ ಮೂಲಭೂತ ಸೌಕರ್ಯ ಇಂದಿಗೂ ಮರೀಚಿಕೆಯಾಗಿದೆ. ಚುನಾವಣೆ ಸಂದರ್ಭದಲ್ಲಿ ಅತ್ಯಂತ ಪ್ರಮುಖ ಮತಕ್ಷೇತ್ರವಾಗಿ ಗುರುತಿಸಿಕೊಳ್ಳುವ ಜೊಯಿಡಾದಲ್ಲಿ ಕನಿಷ್ಠ ರಸ್ತೆ ಸಂಪರ್ಕಗಳೂ ಇಲ್ಲದ ಕಾರಣ ತುರ್ತು ಸಂದರ್ಭದಲ್ಲೂ ಓಡಾಡಲಾಗದೆ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮೂರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಿಕೊಡಲು ಆಗ್ರಹಿಸಿರುವ ಗ್ರಾಮಸ್ಥರು ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದ್ರೂ ಜನರು ಇಂದಿಗೂ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ ಅಂದ್ರೆ ಅಚ್ಚರಿ ಆಗದಿರಲ್ಲ. ಇಂತಹದ್ದೊಂದು ದಯನೀಯ ಪರಿಸ್ಥಿತಿ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನಲ್ಲಿದ್ದು, ಜನರು ತಮಗೆ ಕನಿಷ್ಠ ಮೂಲಭೂತ ಸೌಲಭ್ಯವನ್ನಾದ್ರೂ ನೀಡಿ ಎಂದು ಬೀದಿಗಿಳಿಯುತ್ತಿದ್ದಾರೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದ್ರೂ ತಾಲೂಕಿನ ಬಜಾರಕುಣಂಗ್, ಕಾತೇಲಿ ಪಂಚಾಯತ್ ವ್ಯಾಪ್ತಿಯ ಜನರು ಮೂಲಭೂತ ಸೌಕರ್ಯದಿಂದ ವಂಚಿತರಾಗಿ ಬದುಕು ಸಾಗಿಸುತ್ತಿದ್ದಾರೆ.

ಈ ಹಿಂದೆ ಸಾಕಷ್ಟು ಬಾರಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಗ್ರಾಮಕ್ಕೆ ಸೂಕ್ತ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಕೂಡಾ ನಡೆಸಿದ್ದಾರೆ. ವಾರದೊಳಗೆ ತಮ್ಮೂರಿನ ಮಕ್ಕಳು ಶಾಲೆಗೆ ತೆರಳಲು ಬಸ್ ವ್ಯವಸ್ಥೆ ಹಾಗೂ ರಸ್ತೆ ಮಾಡಿಕೊಡುವಂತೆ ಆಗ್ರಹಿಸಿದ್ದು, ಬೇಡಿಕೆ ಈಡೇರದಿದ್ದರೆ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇನ್ನು ಜೋಯಿಡಾ ತಾಲ್ಲೂಕಿನ ಬಜಾರಕುಣಂಗ್, ಕಾತೇಲಿ ಪಂಚಾಯತ್ ವ್ಯಾಪ್ತಿಯಲ್ಲಿ 2 ಸಾವಿರಕ್ಕೂ ಅಧಿಕ ಜನ ಅರಣ್ಯವಾಸಿಗಳಿದ್ದಾರೆ. ಈ ಗ್ರಾಮಗಳು ತಾಲೂಕು ಕೇಂದ್ರ ಜೋಯಿಡಾದಿಂದ 40 ಕಿಮೀ ದೂರದಲ್ಲಿದ್ದು, ಡಿಗ್ಗಿ ಗ್ರಾಮದಿಂದ 5 ಕಿಮೀ ಮಾತ್ರ ಡಾಂಬರ್ ರಸ್ತೆಯಿದೆ. ಉಳಿದ 25 ಕಿಮೀ ನಷ್ಟು ಮಾರ್ಗ ಕಚ್ಚಾ ರಸ್ತೆಯಿಂದ ಕೂಡಿದ್ದು ವಾಹನಗಳ ಓಡಾಟ ಕಡಿಮೆಯಿದೆ. ಅಲ್ಲದೇ, ಈ ಗ್ರಾಮಗಳ ಜನರು ಪ್ರತಿನಿತ್ಯ ಅರಣ್ಯದ ನಡುವಿನ ಕಿರುಕಾಲು ಹಾದಿಯಲ್ಲೇ ನಡೆದುಕೊಂಡು ತೆರಳಬೇಕಿದೆ. ಶಾಲೆಗೆ ತೆರಳಲು ಮಕ್ಕಳಿಗೂ ಸೂಕ್ತ ವಾಹನ ವ್ಯವಸ್ಥೆಯಿಲ್ಲ. ಇಲ್ಲಿರುವ ಚಿಕ್ಕ ಶಾಲೆಗೆ ಸರ್ಕಾರದಿಂದ ನಿಯೋಜನೆಗೊಂಡ ಶಿಕ್ಷಕರಿಲ್ಲ‌ದ್ದರಿಂದ, ಊರಿನವರೇ ಅತಿಥಿ ಶಿಕ್ಷಕರಾಗಿ ಮಕ್ಕಳಿಗೆ ಪಾಠ ಮಾಡುತ್ತಾರೆ.

ಸದ್ದು ಗದ್ದಲವಿಲ್ಲದೆ ಶುರುವಾಗಿದೆ ಗಾಲಿ ರೆಡ್ಡಿ ಹವಾ, ಇತರ ಪಕ್ಷದಲ್ಲಿ ಬೇಸರಗೊಂಡವರೇ ಟಾರ್ಗೆಟ್!

ಇನ್ನು ಹೆಚ್ಚಿನ ಶಿಕ್ಷಣ ಪಡೆಯಲು ಹೊರ ಊರಿನಲ್ಲಿ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ಓದಬೇಕು. ಅಲ್ಲದೇ, ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ ಅವರನ್ನು ಜೋಲಿ ಮೂಲಕವೇ ಕೊಂಡೊಯ್ಯಬೇಕಾದ ಪರಿಸ್ಥಿತಿ ಇದೆ. ಮಳೆಗಾಲದಲ್ಲಂತೂ ಗ್ರಾಮಸ್ಥರ ಪಾಡು ನರಕ ಸದೃಶ. ಹೀಗಾಗಿ ಗ್ರಾಮಕ್ಕೆ ಸೂಕ್ತ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿಕೊಡಿ ಅನ್ನೋದು ಸ್ಥಳೀಯರ ಆಗ್ರಹ.

ಫೆಬ್ರವರಿ ಕೊನೆಯೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ: ಬಿ ಕೆ ಹರಿಪ್ರಸಾದ್

ಒಟ್ಟಿನಲ್ಲಿ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಇನ್ನೂ ಬಜಾರಕುಣಂಗ್‌, ಕಾತೇಲಿ ಗ್ರಾಮಗಳಿಗೆ ಮೂಲಭೂತ ರಸ್ತೆ ವ್ಯವಸ್ಥೆ ಸಿಗದಿರೋದು ನಿಜಕ್ಕೂ ದುರಂತ. ಇನ್ನಾದ್ರೂ ಸರ್ಕಾರ ಈ ಕಡೆ ಗಮನಹರಿಸಿ ಗ್ರಾಮಸ್ಥರಿಗೆ ಅಗತ್ಯ ಸೌಲಭ್ಯವನ್ನು ಒದಗಿಸಬೇಕಿದೆ.

Follow Us:
Download App:
  • android
  • ios