8 ವರ್ಷ ಪ್ರೀತಿಸಿ, ಮದುವೆಗೆ 3 ತಿಂಗಳ ಮುನ್ನ ಬ್ರೇಕಪ್ ಹೇಳಿದ ಹುಡುಗಿ; ಅಮ್ಮನಿಗೆ ಸಾರಿ ಕೇಳಿದ ಯುವಕ!
ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ಮದುವೆಯಾಗಲು ನಿರಾಕರಿಸಿದ್ದರಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಬೆಳಸೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಯುವಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕಾರವಾರ, ಉತ್ತರಕನ್ನಡ (ಫೆ.19): ಕಳೆದ ಎಂಟು ವರ್ಷಗಳಿಂದ ನಾನು ಪ್ರೀತಿ ಮಾಡಿದ್ದೇನೆ. ನನ್ನ ಸ್ನೇಹಿತರು, ಗ್ರಾಮದವರು ಹಾಗೂ ನಮ್ಮ ಮನೆಯವರಿಗೂ ಅವಳನ್ನೇ ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದೇನೆ. ಇದೀಗ ಪ್ರೀತಿಸಿದ ಹುಡುಗಿ ನಿನ್ನ ಮದುವೆಯಾಗೊಲ್ಲ ಎಂದು ಬ್ರೇಕಪ್ ಹೇಳಿದ್ದಾಳೆ. ಇದರಿಂದ ಮನನೊಂದ ಯುವಕ ಅಮ್ಮನಿಗೆ ಸಾರಿ ಹೇಳಿ ತನ್ನ ಜೀವವನ್ನೇ ಬಿಟ್ಟಿದ್ದಾನೆ.
ಹೌದು, ಕಳೆದ ಎಂಟು ವರ್ಷಗಳಿಂದ ಪ್ರೀತಿ ಮಾಡಿದ ಹುಡುಗಿ ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಕ್ಕೆ ಯುವಕ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಈ ಘಟನೆ ಉತ್ತರಕನ್ನಡ ಅಂಕೋಲಾ ತಾಲ್ಲೂಕಿನ ಬೆಳಸೆ ಗ್ರಾಮದಲ್ಲಿ ನಡೆದಿದೆ. ವಾಸರಕುದ್ರಗಿ ಮೇಲಿನಗುಳಿ ಯುವಕ ನಿವಾಸಿ ಸಂತೋಷ್ ರೂಪಗೌಡ (31) ಆತ್ಮಹತ್ಯೆ ಮಾಡಿಕೊಂಡ ವಿಘ್ನಪ್ರೇಮಿ ಆಗಿದ್ದಾನೆ. ಇನ್ನು ಯುವಕ ಸಾಯುವ ಮುನ್ನ ಭಾವುಕವಾಗಿ ಡೆತ್ ನೋಟ್ ಒಂದನ್ನು ಬರೆದಿಟ್ಟಿದ್ದಾರೆ. ಅಮ್ಮಾ, ಅಣ್ಣ ಹಾಗೂ ಗೆಳೆಯರಲ್ಲಿ ಕ್ಷಮಿಸುವಂತೆ ಕೇಳಿ ಡೆತ್ ನೋಟ್‌ನಲ್ಲಿ ಬರೆದಿಟ್ಟು ಜೀವ ಬಿಟ್ಟಿದ್ದಾನೆ.
ನನ್ನ ಸ್ಥಿತಿ ಯಾರಿಗೂ ಆಗಬಾರದು, ಕ್ಷಮಿಸಿ ಅಮ್ಮಾ, ನನ್ನಿಂದ ಯಾರಿಗೂ ಯಾರಿಗೂ ಸಮಸ್ಯೆ ಆಗೋದು ಬೇಡ. ನಾನು 8 ವರ್ಷಗಳಿಂದ ಆಶಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದೆ. ಅವಳೂ ನನ್ನೊಂದಿಗೆ ಎಂಟು ವರ್ಷದಿಂದ ಪ್ರೀತಿ ಮಾಡುತ್ತಾ ಕಾಲ ಕಳೆದಿದ್ದಾಳೆ. ಆದರೆ, ಇದೀಗ ಅವಳು ನನ್ನನ್ನು ಬಿಟ್ಟು ಹೋದಳು. ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿ ಕಳೆದ 20 ದಿನಗಳಿಂದ ನನ್ನನ್ನು ದೂರ ಇಡುತ್ತಿದ್ದಾಳೆ. ನಾನು ಬದುಕಲು ಸಾಧ್ಯವಾಗುತ್ತಿಲ್ಲ. ಕ್ಷಮಿಸು ಅಮ್ಮಾ.. ಕ್ಷಮಿಸಿ.. ನನಗೆ ಊಟವೂ ಸೇರುತ್ತಿಲ್ಲ, ನಿದ್ರೆಯೂ ಬರತ್ತಿಲ್ಲ. ನನಗೆ ಏನು ಬೇಡವಾಗಿದೆ ಎಂದು ಬರೆದಿದ್ದಾನೆ.
ಇದನ್ನೂ ಓದಿ: ವಿಜಯಪುರ ಅಲ್-ಅಮೀನ್ ಕಾಲೇಜಿನಲ್ಲಿ ಕಾಶ್ಮೀರಿ ವಿದ್ಯಾರ್ಥಿಗೆ ಹಲ್ಲೆ; ಪ್ರಧಾನಿಗೆ ದೂರು ಕೊಟ್ಟ ಸ್ನೇಹಿತ!
ನಮ್ಮಿಬ್ಬರ ಪ್ರೀತಿಯ ಬಗ್ಗೆ ಊರಿನ ಜನರೆಲ್ಲರಿಗೂ ಗೊತ್ತಿದೆ. ಅಮ್ಮಾ, ಅಣ್ಣ ಹಾಗೂ ಗೆಳೆಯರ ಬಳಿ ಕ್ಷಮೆ ಕೋರಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪತ್ರವನ್ನು ಬರೆದಿಟ್ಟಿದ್ದಾನೆ. ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಡೆತ್ ನೋಟ್ ಬರೆದು ಮೊಬೈಲ್ ಸ್ಟೇಟಸ್‌ಗೆ ಹಾಕಿಕೊಂಡಿದ್ದನ್ನು ಪತ್ತೆ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯುವಕನ ಮನೆಯವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.