ಬೆಂಗಳೂರಿನ ಖಾಸಗಿ ಕಾಲೇಜು ಹಾಸ್ಟೆಲ್‌ನಲ್ಲಿ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿ ಆದಿತ್ಯ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಮಗನ ಸಾವಿಗೆ ಕಾಲೇಜು ಆಡಳಿತ ಮಂಡಳಿಯ ಮಾನಸಿಕ ಕಿರುಕುಳ ಮತ್ತು ಮಾದಕ ವ್ಯಸನದ ಸುಳ್ಳು ಆರೋಪವೇ ಕಾರಣ ಎಂದು ಮೃತನ ತಂದೆ ದೂರು ನೀಡಿದ್ದಾರೆ.

ಬೆಂಗಳೂರು (ಮೇ 01): ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿರುವ ಬಿಟಿಎಲ್ (BTL) ಕಾಲೇಜಿನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.

Add Asianetnews Kannada as a Preferred SourcegooglePreferred

ಮೃತ ವಿದ್ಯಾರ್ಥಿಯನ್ನು ಕೇರಳ ಮೂಲದ ಎ.ಪಿ. ಆದಿತ್ಯ (19) ಎಂದು ಗುರುತಿಸಲಾಗಿದೆ. ಈತ ಬಿಟಿಎಲ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್‌ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದನು. ಕಾಲೇಜಿನ ಹಾಸ್ಟೆಲ್‌ನಲ್ಲಿಯೇ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಆದಿತ್ಯ, ಬುಧವಾರ ತನ್ನ ಕೊಠಡಿಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆಗೆ ಶರಣಾಗಿದ್ದಾನೆ. ಆದಿತ್ಯನ ಸಹಪಾಠಿಗಳು ಕೊಠಡಿಗೆ ಬಂದು ನೋಡಿದಾಗ ಈ ದುರಂತ ಘಟನೆ ಬೆಳಕಿಗೆ ಬಂದಿದೆ.

ಕಾಲೇಜು ಆಡಳಿತ ಮಂಡಳಿಯಿಂದ ಕಿರುಕುಳ?

ವಿದ್ಯಾರ್ಥಿ ಆದಿತ್ಯನ ಸಾವಿಗೆ ಕಾಲೇಜು ಆಡಳಿತ ಮಂಡಳಿಯ ಮಾನಸಿಕ ಕಿರುಕುಳವೇ ಕಾರಣ ಎಂದು ಆತನ ತಂದೆ ಪ್ರದೀಪ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಆದಿತ್ಯನ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ಪೋಷಕರು ಹಳಹಳಿಸುತ್ತಿದ್ದು, ಕಾಲೇಜಿನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮಾದಕ ವ್ಯಸನದ ಸುಳ್ಳು ಆರೋಪ?

ತಮ್ಮ ಮಗನ ಸಾವಿನ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ತಂದೆ ಪ್ರದೀಪ್, 'ನನ್ನ ಮಗನನ್ನು ಕಾಲೇಜು ಆಡಳಿತ ಮಂಡಳಿಯು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದೆ. ಆತ ಮಾದಕವಸ್ತು (Drugs) ಸೇವನೆ ಮಾಡುತ್ತಿದ್ದಾನೆ ಎಂದು ಆರೋಪಿಸಿ, ಇತರ ವಿದ್ಯಾರ್ಥಿಗಳ ಮುಂದೆ ಆತನನ್ನು ಕರೆದು ತೀವ್ರವಾಗಿ ಅವಮಾನಿಸಲಾಗಿದೆ. ಈ ಸುಳ್ಳು ಆರೋಪದಿಂದ ಆದಿತ್ಯ ತೀವ್ರವಾಗಿ ನೊಂದಿದ್ದನು. ಕಾಲೇಜಿನವರು ನೀಡಿದ ಮಾನಸಿಕ ಹಿಂಸೆಯನ್ನು ತಡೆಯಲಾಗದೆ ಆತ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ' ಎಂದು ದೂರಿದ್ದಾರೆ. ಕಾಲೇಜು ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿಯವರು ಆದಿತ್ಯನಿಗೆ ನಿರಂತರವಾಗಿ ಟಾರ್ಗೆಟ್ ಮಾಡುತ್ತಿದ್ದರು ಮತ್ತು ಆತನ ಗೌರವಕ್ಕೆ ಧಕ್ಕೆ ತಂದಿದ್ದರು ಎಂಬುದು ಪೋಷಕರ ವಾದವಾಗಿದೆ.

ಪೊಲೀಸ್ ತನಿಖೆ ಆರಂಭ:

ಘಟನಾ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ವಿದ್ಯಾರ್ಥಿಯ ತಂದೆ ನೀಡಿದ ದೂರಿನನ್ವಯ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಲೇಜು ಆಡಳಿತ ಮಂಡಳಿಯ ಪಾತ್ರದ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಹಾಸ್ಟೆಲ್‌ನಲ್ಲಿ ಆದಿತ್ಯ ಬರೆದಿಟ್ಟಿರಬಹುದಾದ ಯಾವುದಾದರೂ ಡೆತ್ ನೋಟ್ ಸಿಗುತ್ತದೆಯೇ ಎಂದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯ ಸಾವು ಸಹಪಾಠಿಗಳಲ್ಲಿ ಮತ್ತು ಪೋಷಕರಲ್ಲಿ ಮರುಕ ಉಂಟುಮಾಡಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ.