‘ಬಯಲು ಸೀಮೆ ಅನಾಥ ಚೆಲುವೆ’ಯರ ಕೈಹಿಡಿದ ‘ಘಟ್ಟದ ವರ’ರು!
ದಾವಣಗೆರೆಯ ಇಬ್ಬರು ಅನಾಥ ಯುವತಿಯರಿಗೆ ಕಂಕಣ ಭಾಗ್ಯ ಒಲಿದಿದೆ. ಉತ್ತರ ಕನ್ನಡದ ಇಬ್ಬರು ಯುವಕರು ಅನಾಥಾಲಯದ ಇಬ್ಬರು ಹೆಣ್ಣು ಮಕ್ಕಳನ್ನು ವರಿಸಿದ್ದಾರೆ.
ದಾವಣಗೆರೆ [ಫೆ.28]: ಎತ್ತಣ ಮಾಮರ, ಎತ್ತಣ ಕೋಗಿಲೆ ಎಂಬಂತೆ ಬಯಲು ಸೀಮೆಯ ಇಬ್ಬರು ಅನಾಥೆಯರ ಕೈ ಹಿಡಿದು, ಸಪ್ತಪದಿ ತುಳಿಯುವ ಮೂಲಕ ಬಾಳು ಕೊಟ್ಟಘಟ್ಟದ ಯುವಕರಿಬ್ಬರು ಮಾದರಿ ಹೆಜ್ಜೆ ಇಟ್ಟಿದ್ದಾರೆ.
ಇಲ್ಲಿಗೆ ಸಮೀಪದ ಇಂಡಸ್ಟ್ರಿಯಲ್ ಏರಿಯಾದ ಶ್ರೀ ರಾಮನಗರದ ಮಹಿಳಾ ನಿಲಯವು ತನ್ನಲ್ಲಿ ಆಶ್ರಯ ಪಡೆದಿದ್ದ ಇಬ್ಬರು ಅನಾಥ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದರೆ, ಸ್ವತಃ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗಳು ತವರು ಮನೆಯ ಪಾತ್ರ ವಹಿಸಿದ್ದು ಗಮನ ಸೆಳೆಯಿತು.
ರಾಜ್ಯ ಮಹಿಳಾ ನಿಲಯದ ಇಬ್ಬರು ನಿವಾಸಿಗಳಾದ ಅನಿತಾ(ಮಮತಾ), ರೇಣುಕಾ ಗೊರಪ್ಪನವರ್ ವಿವಾಹ ಮಹೋತ್ಸವದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗಳ ಮುಖ್ಯಸ್ಥರೇ ಸಾಕ್ಷಿಯಾಗುವ ಮೂಲಕ ತಮ್ಮ ಮುಂದಿನ ಭವಿಷ್ಯ ಏನೆಂಬ ಆತಂಕದಲ್ಲಿದ್ದ ಹೆಣ್ಣು ಮಕ್ಕಳಿಬ್ಬರ ಕಣ್ಣಂಚಿನಲ್ಲಿ ನೀರು ಜಿನುಗಲು ಸಾಕ್ಷಿಯಾದರು.
ಇಡೀ ಮಹಿಳಾ ನಿಲಯವು ತಳಿರು ತೋರಣಗಳಿಂದ ಅಲಂಕೃತವಾಗಿದ್ದರೆ, ನಿಲಯದ ತುಂಬೆಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಮಹಿಳಾ ನಿಲದ ನಿವಾಸಿಗಳು, ಬಂಧುಗಳು ರೇಷ್ಮೆ ಸೀರೆಯನ್ನುಟ್ಟು ಮದುವೆಯ ಮನೆ ತುಂಬಾ ತರಾತುರಿಯಲ್ಲಿ ಅಡ್ಡಾಡುತ್ತಾ ಇದು ತಮ್ಮ ಮನೆಯ ಕಾರ್ಯಕ್ರಮವೆಂಬಂತೆ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ಅತ್ಯಾಚಾರಕ್ಕೊಳಗಾದ ಮೂಕ ಯುವತಿ ಮಗುವಿಗೆ ಜಿಲ್ಲಾಧಿಕಾರಿ ನಾಮಕರಣ...
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾ. ಬಾಳಿಕೊಪ್ಪದ ಸುಬ್ರಾಯ ಹೆಗಡೆ, ಲೋಲಾಕ್ಷಿ ದಂಪತಿಗಳ ಹಿರಿಯ ಪುತ್ರ ವಿನಾಯಕ ಸುಬ್ರಾಯ ಭಟ್ಟಇಲ್ಲಿನ ಮಹಿಳಾ ನಿಲಯದ ನಿವಾಸಿ ಅನಿತಾ (ಮಮತಾ)ರನ್ನು, ಅದೇ ಜಿಲ್ಲೆಯ ಶಿರಸಿ ತಾಲೂಕಿನ ಶಿವಳ್ಳಿಯ ಜನಾರ್ದನ ಸುಬ್ರಾಯ ಭಟ್ಟ, ಸೀತಾ ದಂಪತಿಗಳ ಜ್ಯೇಷ್ಠ ಪುತ್ರ ನಾಗೇಂದ್ರ ಜನಾರ್ದನ ಭಟ್ಟರೇಣುಕಾ ಗೊರಪ್ಪನವರ ಕೈ ಹಿಡಿಯುವುದರೊಂದಿಗೆ ಇಬ್ಬರು ಅನಾಥೆಯರ ಬಾಳಿಗೆ ಬೆಳಕಾದರು.
ಹಿಂದು ಸಂಪ್ರದಾಯದಂತೆ ಸಕಲ ಮಂಗಳವಾದ್ಯಗಳೊಂದಿಗೆ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸಮ್ಮುಖದಲ್ಲಿ ಸುಬ್ರಾಯ ಭಟ್ಟ-ಅನಿತಾ(ಮಮತಾ) ಹಾಗೂ ನಾಗೇಂದ್ರ ಭಟ್ಟ-ರೇಣುಕಾ ಗೊರಪ್ಪನವರ ಎದುರುಗೊಳ್ಳುವ ಶಾಸ್ತ್ರ ನಡೆಯಿತು. ನಂತರ ವಧು-ವರರು ಮದುವೆ ಮಂಟಪಕ್ಕೆ ಆಗಮಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠ ಹನುಮಂತರಾಯ ಶಾಸೊತ್ರೕಕ್ತವಾಗಿ ಅನಿತಾಳನ್ನು ವಿನಾಯಕ ಹೆಗಡೆಗೆ ಧಾರೆ ಎರೆದರೆ, ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ರೇಣುಕಾರನ್ನು ನಾಗೇಂದ್ರ ಭಟ್ಟಗೆ ಧಾರೆ ಎರೆದುಕೊಟ್ಟರು. ನಂತರ ಎಲ್ಲರ ಸಮ್ಮುಖದಲ್ಲಿ ಬಂಧು-ಬಾಂಧವರು, ಅಧಿಕಾರಿ, ಸಿಬ್ಬಂದಿ, ಮಹಿಳಾ ನಿಲಯದ ನಿವಾಸಿಗಳ ಸಮ್ಮುಖದಲ್ಲಿ ಶಾಸೊತ್ರೕಕ್ತವಾಗಿ ವಿವಾಹ ನಡೆಯಿತು. ಗುರುವಾರ ಬೆಳಿಗ್ಗೆ 11ರಿಂದ 11.30ರ ವೃಶ್ಚಿಕ ಲಗ್ನದ ಶುಭ ಮುಹೂರ್ತದಲ್ಲಿ ಉಭಯ ಜೋಡಿಗಳ ಮಾಂಗಲ್ಯ ಧಾರಣೆ ನೆರವೇರಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ ಮೇಲುಸ್ತುವಾರಿಯಲ್ಲಿ ಇಲಾಖೆ ವಿವಿಧ ಘಟಕಗಳು, ಮಹಿಳಾ ನಿಲಯದ ಅಧಿಕಾರಿಗಳು, ಸಿಬ್ಬಂದಿ ಭಾಗಿಯಾದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಘವೇಂದ್ರಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಿ.ನಜ್ಮಾ, ವಿಶೇಷ ಭೂ ಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್, ಮಹಿಳಾ ಮತ್ತು ಮಕ್ಕಳ ಇಲಾಖೆ ಅಧೀಕ್ಷಕಿ ಸುಶೀಲಮ್ಮ, ಮಹಿಳಾ ನಿಲಯದ ಅಧೀಕ್ಷಕಿ ಬಿ.ಅಭಿಲಾಷಾ, ಸುಜಾತ, ಶೃತಿ, ರೇಣುಕಾ, ಪೂರ್ಣಿಮಾ, ಪ್ರತಿಭಾ, ಮಹಾಂತ ಪೂಜಾರ್ ಅಧಿಕಾರಿ, ಸಿಬ್ಬಂದಿ, ಮಹಿಳಾ ನಿಲಯದ ನಿವಾಸಿಗಳು, ವಧು-ವರರ ಬಂಧುಗಳು ಇದ್ದರು.