ಒಣ ಕಸದ ಜಾಗದಲ್ಲಿ ಹಸಿ ಕಸ, ಘನತ್ಯಾಜ್ಯ ಘಟಕಕ್ಕೆ ಬೀಗ ಜಡಿದ ಯು.ಟಿ.ಖಾದರ್!
ಒಣಕಸ ಹಾಕುವ ಜಾಗದಲ್ಲಿ ನಿಯಮ ಮೀರಿ ಹಸಿ ಕಸ ಸುರಿದಿದ್ದಕ್ಕೆ ಅಸಮಾಧಾನಗೊಂಡ ಮಾಜಿ ಸಚಿವ ಯು.ಟಿ.ಖಾದರ್, ಅವೈಜ್ಞಾನಿಕ ಘನತ್ಯಾಜ್ಯ ಘಟಕಕ್ಕೆ ಸ್ವತಃ ಬೀಗ ಜಡಿದ ಘಟನೆ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.
ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು (ಜೂನ್ 28); ಒಣಕಸ ಹಾಕುವ ಜಾಗದಲ್ಲಿ ನಿಯಮ ಮೀರಿ ಹಸಿ ಕಸ ಸುರಿದಿದ್ದಕ್ಕೆ ಅಸಮಾಧಾನಗೊಂಡ ಮಾಜಿ ಸಚಿವ ಯು.ಟಿ.ಖಾದರ್, ಅವೈಜ್ಞಾನಿಕ ಘನತ್ಯಾಜ್ಯ ಘಟಕಕ್ಕೆ ಸ್ವತಃ ಬೀಗ ಜಡಿದ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪ ನಡು ಕಂಚಿನಡ್ಕದಲ್ಲಿ ನಡೆದಿದೆ.
ಬಂಟ್ಟಾಳ ಪುರಸಭೆಗೆ ಸೇರಿದ ಒಣಕಸ ಘನತ್ಯಾಜ್ಯ ಘಟಕ ಇದಾಗಿದ್ದು, ಕೇವಲ ಒಣ ಕಸ ಮಾತ್ರ ಸುರಿಯಲು ದ.ಕ ಜಿಲ್ಲಾಡಳಿತ ಸೂಚಿಸಿತ್ತು. ಆದರೆ ಒಣಕಸದ ಬದಲು ಹಸಿ ಕಸ ಸುರಿದ ಪರಿಣಾಮ ದುರ್ವಾಸನೆ ಹಾಗೂ ಅವ್ಯವಸ್ಥೆ ತಲೆದೋರಿದೆ. ಈ ಬಗ್ಗೆ ಮಂಗಳೂರು ಶಾಸಕ ಯು.ಟಿ.ಖಾದರ್ ಬಳಿ ಸ್ಥಳೀಯ ಗ್ರಾಮಸ್ಥರು ದೂರಿದ್ದು, ಹೀಗಾಗಿ ಖಾದರ್ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಹಸಿ ಕಸ ಸುರಿದ ಅವ್ಯವಸ್ಥೆ ಬೆಳಕಿಗೆ ಬಂದಿದೆ. ಇದರಿಂದ ಆಕ್ರೋಶಗೊಂಡು ಘನತ್ಯಾಜ್ಯ ಘಟಕಕ್ಕೆ ಖಾದರ್ ಬೀಗ ಜಡಿದಿದ್ದಾರೆ.
ದೌರ್ಜನ್ಯಕ್ಕೊಳಗಾದ SC-ST ಜನಾಂಗಕ್ಕೆ ನ್ಯಾಯ ಒದಗಿಸುವಂತೆ ಧಾರವಾಡ
ಬಂಟ್ಟಾಳ ಪುರಸಭೆಯ ಘನತ್ಯಾಜ್ಯ ಘಟಕಕ್ಕೆ ಬಂಟ್ವಾಳ ಹೊರ ವಲಯದ ಸಜೀಪ ನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ 2007ರಲ್ಲಿ ಸ್ಥಳ ನಿಗದಿಪಡಿಸಲಾಗಿತ್ತು. ಆದರೆ ಘಟಕ ನಿರ್ಮಾಣ ಮಾಡಲು ಸ್ಥಳೀಯರ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಬಿಜೆಪಿ ಸರಕಾರ ಬಂದ ನಂತರ ಅದೇ ಸ್ಥಳದಲ್ಲಿ ಘನತ್ಯಾಜ್ಯ ತೆರೆಯುವ ಬಗ್ಗೆ ಸದನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಒತ್ತಾಯಿಸಿದಾಗ ಸ್ಥಳೀಯ ಶಾಸಕ ಯು.ಟಿ.ಖಾದರ್ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ನಂತರ ಸ್ಪೀಕರ್ ಹಾಗೂ ಸಚಿವರು ಮಧ್ಯೆ ಪ್ರವೇಶಿಸಿ ಜಿಲ್ಲಾಡಳಿತ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು.
ಅದರಂತೆ ಅಂದಿನ ಜಿಲ್ಲಾಧಿಕಾರಿಗಳಾದ ಸಿಂಧೂ ರೂಪೇಶ್, ಶಾಸಕರೂ ಸೇರಿದಂತೆ ಸಹಾಯಕ ಕಮೀಷನರ್ ,ಮಂಗಳೂರು ತಹಶೀಲ್ದಾರ್, ಬಂಟ್ಟಾಳ ತಹಶೀಲ್ದಾರ್, ಬಂಟ್ಟಾಳ ಪುರಸಭೆ ಮುಖ್ಯಾಧಿಕಾರಿ ಹಾಗೂ ಸಜೀಪ ನಡು ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಪಡೆದು ಕೇವಲ ಒಣಕಸ ಮಾತ್ರ ಹಾಕಲು ನಿರ್ಧಾರಕ್ಕೆ ಬರಲಾಗಿತ್ತು. ಅದರಿಂದ ಬರುವ ಆದಾಯವನ್ನು ಸ್ಥಳೀಯ ಪಂಚಾಯತ್ ಗೆ ನೀಡುವ ಒಪ್ಪಂದ ನಡೆಸಿ ಬಂಟ್ವಾಳ ಪುರಸಭೆಗೆ ಸೂಚನೆ ನೀಡಲಾಯಿತು. ನಂತರ ಕೆಲ ಸಮಯಗಳ ಕಾಲ ಕೇವಲ ಒಣಕಸ ಮಾತ್ರ ತಂದು ಅದನ್ನು ವಿಲೇವಾರಿ ಮಾಡುವ ಕೆಲಸ ಚಾಲ್ತಿಯಲ್ಲಿತ್ತು.
ಯಾಂತ್ರಿಕೃತ ಭತ್ತ ಬೇಸಾಯ, ಹಡಿಲು ಭೂಮಿ ಪುನಶ್ಚೇತನ ಯೋಜನೆ ಕಾರ್ಯಕ್ರಮ
ಆದರೆ ಕ್ರಮೇಣ ಹಸಿ ಕಸ ಕೂಡಾ ತರಲು ಪ್ರಾರಂಭಿಸಿ ಸತ್ತ ಪ್ರಾಣಿಗಳನ್ನು ಸಮೇತ ತಂದು ಹಾಕಲಾಗ್ತಿದೆ. ಶಾಸಕ ಯು.ಟಿ.ಖಾದರ್ ಸದ್ಯ ಘನತ್ಯಾಜ್ಯ ಘಟಕಕ್ಕೆ ಬೀಗ ಜಡಿದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು, ಬಂಟ್ವಾಳ ಶಾಸಕರು, ಪುರಸಭೆ ಮುಖ್ಯಾಧಿಕಾರಿ, ಪುರಸಭೆ ಅಧ್ಯಕ್ಷರನ್ನೂ ಸಂಪರ್ಕಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆದಷ್ಟು ಬೇಗನೇ ಪರಿಹಾರ ಕಂಡುಕೊಳ್ಳುವಂತೆ ಸೂಚನೆ ನೀಡಿದ್ದಾರೆ.