ಡಾ.ಪ್ರಭಾಕರ್ ಕೋರೆಗೆ ಅಮೆರಿಕದ ಪ್ರತಿಷ್ಠಿತ ಥಾಮಸ್ ಜೆಫರಸನ್ ವಿವಿಯಿಂದ ಗೌರವ ಡಾಕ್ಟರೇಟ್
*ಡಾ.ಪ್ರಭಾಕರ್ ಕೋರೆಗೆ ಅಮೆರಿಕದ ಪ್ರತಿಷ್ಠಿತ ಥಾಮಸ್ ಜೆಫರಸನ್ ವಿವಿಯಿಂದ ಗೌರವ ಡಾಕ್ಟರೇಟ್
• ಅಮೆರಿಕದ ಫಿಲಾಡೆಲ್ಫಿಯಾದಲ್ಲಿರುವ ಪ್ರತಿಷ್ಠಿತ ಥಾಮಸ್ ಜೆಫರಸನ್ ವಿವಿ
• ಮೇ 25ರ ಘಟಿಕೋತ್ಸವ ಸಮಾರಂಭದಲ್ಲಿ 'ಡಾಕ್ಟರ್ ಆಫ್ ಸೈನ್ಸ್' ಪದವಿ ಪ್ರದಾನ
• ಥಾಮಸ್ ಜೆಫರಸನ್ ವಿವಿಯಿಂದ ಗೌರವ ಡಾಕ್ಟರೇಟ್ ಪಡೆಯುತ್ತಿರುವ ಪ್ರಥಮ ಭಾರತೀಯ
ವರದಿ : ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ, (ಏ.30): ಪ್ರತಿಷ್ಠಿತ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆಯವರಿಗೆ ಅಮೆರಿಕದ ಫಿಲಾಡೆಲ್ಫಿಯಾದಲ್ಲಿರುವ ಥಾಮಸ್ ಜೆಫರಸನ್ ವಿವಿ ಗೌರವ ಡಾಕ್ಟರೇಟ್‌ಗೆ ಆಯ್ಕೆಯಾಗಿದ್ದಾರೆ. ಥಾಮಸ್ ಜೆಫರಸನ್ ವಿವಿಯಿಂದ ಗೌರವ ಡಾಕ್ಟರೇಟ್ ಪಡೆಯುತ್ತಿರುವ ಪ್ರಥಮ ಭಾರತೀಯ ಎನ್ನಿಸಿಕೊಂಡಿದ್ದಾರೆ.
ಈ ಸಂಬಂಧ ಇಂದು (ಶನಿವಾರ) ಕೆಎಲ್‌ಇ ಯೂನಿವರ್ಸಿಟಿಯಲ್ಲಿ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದ ಗ್ಲೋಬಲ್ ಅಫೆರ್ಸ್ ಮುಖ್ಯಸ್ಥ ಹಾಗೂ ಗ್ಲೋಬಲ್ ಹೆಲ್ತ್ ರಿಸರ್ಚ್ ನಿರ್ದೇಶಕರಾದ ಡಾ.ರಿಚರ್ಡ್ ಡರ್ಮನ್ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ & ರಿಸರ್ಚ್‌ನ ಕುಲಪತಿ ಡಾ.ವಿವೇಕ ಸಾವಜಿ, ಕುಲ ಸಚಿವ ಡಾ.ವಿ.ಎ.ಕೋಠಿವಾಲೆ, ಸಂಶೋಧನಾ ನಿರ್ದೇಶಕರಾದ ಡಾ.ಶಿವಪ್ರಸಾದ್ ಗೌಡರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
Ravichandran: ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್
ಈ ವೇಳೆ ಮಾತನಾಡಿದ ಸಂಶೋಧನಾ ನಿರ್ದೇಶಕ ಡಾ.ಶಿವಪ್ರಸಾದ್ ಗೌಡರ, 'ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆಯವರಿಗೆ ಅಮೆರಿಕದ ಪ್ರತಿಷ್ಠಿತ ಥಾಮಸ್ ಜೆಫರಸನ್ ವಿವಿಯಿಂದ ಗೌರವ ಡಾಕ್ಟರೇಟ್ ಘೋಷಿಸಿದ್ದು ಮೇ 25ರಂದು ಅಮೆರಿಕದ ಫಿಲಾಡೆಲ್ಫಿಯಾದಲ್ಲಿರು ಥಾಮಸ್ ಜೆಫರಸನ್ ವಿವಿ ಘಟಿಕೋತ್ಸವ ಸಮಾರಂಭದಲ್ಲಿ 'ಡಾಕ್ಟರ್ ಆಫ್ ಸೈನ್ಸ್' ಪದವಿ ಪ್ರದಾನ ಮಾಡಲಾಗುವುದೆಂದು ತಿಳಿಸಿದರು.
ಥಾಮಸ್ ಜೆಫರಸನ್ ವಿವಿಯಿಂದ ಗೌರವ ಡಾಕ್ಟರೇಟ್ ಪಡೆಯುತ್ತಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಡಾ.ಪ್ರಭಾಕರ್ ಕೋರೆ ಪಾತ್ರರಾಗಿದ್ದಾರೆ. ಶಿಕ್ಷಣ, ವೈದ್ಯಕೀಯ ಸೇವೆ, ಸಂಶೋಧನೆ ಕ್ಷೇತ್ರದಲ್ಲಿ ಡಾ.ಪ್ರಭಾಕರ್ ಕೋರೆಯವರ ಅಪ್ರತಿಮ ಸೇವೆ ಗುರುತಿಸಿ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ಅಮೆರಿಕದ ಪ್ರತಿಷ್ಠಿತ ವಿವಿಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಜೆಫರಸನ್ ವಿವಿ ಘಟಿಕೋತ್ಸವ ಸಮಾರಂಭದಲ್ಲಿ 'ಇಂಡಿಯಾ ಸೆಂಟರ್ ಫಾರ್ ಸ್ಟಡೀಸ್' ಘಟಕವನ್ನೂ ಸಹ ಉದ್ಘಾಟನೆ ಮಾಡಲಾಗುತ್ತಿದ್ದು ಇಟಲಿ, ಐರ್ಲೆಂಡ್, ಇಸ್ರೇಲ್ ಬಳಿಕ ನಾಲ್ಕನೇ ವಿದೇಶಿ ಅಧ್ಯಯನ ಕೇಂದ್ರ ಇದಾಗಿದೆ ಎಂದರು.
ಇನ್ನು ಅಧ್ಯಯನ ಕೇಂದ್ರದ ಉದ್ಘಾಟನೆಗೆ ಸಂಯುಕ್ತ ಅಮೆರಿಕದ ಭಾರತೀಯ ರಾಯಬಾರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು. ಥಾಮಸ್ ಜೆಫರಸನ್ ವಿವಿ ಹಾಗೂ ಕೆಎಲ್‌ಇ ಮಧ್ಯೆ ಶೈಕ್ಷಣಿಕ, ಸಂಶೋಧನಾ ಕ್ಷೇತ್ರದಲ್ಲಿ ಒಪ್ಪಂದ ಇದ್ದು ಕೆಎಲ್‌ಇ ಸಂಸ್ಥೆಯ ಜವಾಹರಲಾಲ್ ನೆಹರು ವೈದ್ಯಕೀಯ ವಿದ್ಯಾಲಯ, ನರ್ಸಿಂಗ್, ಫಿಸಿಯೋಥೆರಪಿ ಸೇರಿ ವಿವಿಧ ಕಾಲೇಜುಗಳ ಜೊತೆ ಥಾಮಸ್ ಜೆಫರಸನ್ ವಿವಿ ಒಪ್ಪಂದ ಮಾಡಿಕೊಂಡಿದೆ. ತಾಯಿ ಮತ್ತು ನವಜಾತ ಶಿಶು ಆರೋಗ್ಯ ಕ್ಷೇತ್ರದಲ್ಲಿ ವಿಶ್ವದರ್ಜೆಯ ಸಂಶೋಧನೆ ಮಾಡಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಂಶೋಧನೆ ಮನ್ನಣೆ ಪಡೆದಿದೆ. ಆರೋಗ್ಯ ನೀತಿ ಮತ್ತು ಮಾರ್ಗಸೂಚಿ ರೂಪಿಸುವಲ್ಲಿ ಈ ಸಂಶೋಧನೆ ಪ್ರಮುಖ ಪಾತ್ರ ವಹಿಸಿದೆ ಈ ಆರೋಗ್ಯ ನೀತಿ ಮತ್ತು ಮಾರ್ಗಸೂಚಿಗಳನ್ನು WHO, ICMR ಸೇರಿ 54 ರಾಷ್ಟ್ರಗಳ ಆರೋಗ್ಯ ಸಚಿವಾಲಯಗಳು ಅಳವಡಿಸಿಕೊಂಡಿವೆ. ಇದಕ್ಕೆ ಡಾ.ಪ್ರಭಾಕರ್ ಕೋರೆಯವರ ನಿರಂತರ ಸಲಹೆ, ಮಾರ್ಗದರ್ಶನ, ಬೆಂಬಲ ಪ್ರೋತ್ಸಾಹವೇ ಕಾರಣ ಎಂದು ತಿಳಿಸಿದರು.
ಥಾಮಸ್ ಜೆಫರಸನ್ ವುವಿ ಜೊತೆಗೂಡಿ ಹಲವು ಸಂಶೋಧನೆ ಮಾಡುತ್ತಿದ್ದು ತಾಯಿ ಮತ್ತು ಶಿಶು ಆರೋಗ್ಯ ಸಂಶೋಧನೆ, ಮೂತ್ರ ಶಾಸ್ತ್ರ, ನರವಿಜ್ಞಾನ, ವಿಕಿರಣಶಾಸ್ತ್ರ, ಮನೋವೈದ್ಯಶಾಸ್ತ್ರ, ಸಾರ್ವಜನಿಕ ಆರೋಗ್ಯ, ಭೌತಿಕ ಚಿಕಿತ್ಸೆ, ಶುಶ್ರೂಷಾ ವಿಜ್ಞಾನ, ಸಮಗ್ರ ಆರೋಗ್ಯ ಸೇರಿ ಮುಂತಾದ ಕುರಿತಾಗಿ ಸಂಶೋಧನೆಗೆ ಸಹಯೋಗವಿದೆ ಎಂದು ಹೇಳಿದರು.
ಇನ್ನು ಥಾಮಸ್ ಜೆಫರಸನ್ ವಿಶ್ವವಿದ್ಯಾಲಯ 1824ರಲ್ಲಿ ಸ್ಥಾಪಿತವಾಗಿದ್ದು ಅಮೆರಿಕದ ಅತ್ಯಂತ ಹಳೆಯ ವಿಶ್ವವಿದ್ಯಾಲಯ.ಅಮೆರಿಕದ ಪ್ರಮುಖ 10 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಥಾಮಸ್ ಜೆಫರಸನ್ ವಿವಿ ಸ್ಥಾನ ಪಡೆದಿದೆ. ಕೆಎಲ್‌ಇ ಸಂಸ್ಥೆಯ ವೈದ್ಯಕೀಯ ವಿದ್ಯಾರ್ಥಿಗಳು ಅಲ್ಲಿಗೆ ಹೋಗಿ ಶಿಕ್ಷಣ ಪಡೆಯುವ ಯೋಜನೆಯೂ ಇದೆ ಎಂದರು. ಇನ್ನು ಡಾ.ಪ್ರಭಾಕರ್ ಕೋರೆಯವರ ಬಯೋಡೆಟಾ ನೀಡಿ ಡಾಕ್ಟರೇಟ್ ನೀಡುತ್ತಿಲ್ಲ. ಡಾ.ಪ್ರಭಾಕರ್ ಕೋರೆ ಮಾಡಿದ ಕಾರ್ಯವನ್ನು ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದವರು ಖುದ್ದು ನೋಡಿ ಅವರ ಸೇವೆ ಮೆಚ್ಚಿ ಡಾಕ್ಟರೇಟ್ ನೀಡುತ್ತಿದ್ದಾರೆ ಎಂದು ಸಂಶೋಧನಾ ನಿರ್ದೇಶಕ ಡಾ.ಶಿವಪ್ರಸಾದ್ ಗೌಡರ ಸಂತಸ ವ್ಯಕ್ತಪಡಿಸಿದರು.
ಭಾರತ ನನ್ನ 2ನೇ ಮನೆ ಇದ್ದ ಹಾಗೇ ಎಂದ ಡಾ.ರಿಚರ್ಡ್ ಡರ್ಮನ್
ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದ ಗ್ಲೋಬಲ್ ಅಫೆರ್ಸ್ ಮುಖ್ಯಸ್ಥ ಹಾಗೂ ಗ್ಲೋಬಲ್ ಹೆಲ್ತ್ ರಿಸರ್ಚ್ ನಿರ್ದೇಶಕರಾದ ಡಾ.ರಿಚರ್ಡ್ ಡರ್ಮನ್, 'ಮೇ 25ರಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದ್ದು ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆಯುತ್ತಿರುವ ಮೊದಲ ಭಾರತೀಯರಾಗಿದ್ದಾರೆ ಎಂದು ತಿಳಿಸಿದರು. ಕೆಎಲ್‌ಇ ಸಂಸ್ಥೆಯ ಜೊತೆಗಿನ ಒಡನಾಟ ಸ್ಮರಿಸಿದ ಡಾ.ರಿಚರ್ಡ್ ಡರ್ಮನ್ 1973ರ ವೇಳೆ ಬೆಂಗಳೂರಲ್ಲೂ ತಾವು ಸೇವೆ ಮಾಡಿದ್ದು ಭಾರತ ನನ್ನ ಎರಡನೇ ಮನೆ ಅಂತಾ ತಿಳಿದು ಕೆಲಸ ಮಾಡುತ್ತಿದ್ದೇನೆ' ಎಂದು ತಿಳಿಸಿದರು.