ಅಮೆರಿಕದಿಂದ ಅಕ್ಕನ ಮಗನ ಮದುವೆಗೆ ಬಂದಿದ್ದ NRI ವೈದ್ಯೆಯೊಬ್ಬರಿಗೆ ಬೆಂಗಳೂರಿನಲ್ಲಿ ಆಘಾತಕಾರಿ ಅನುಭವವಾಗಿದೆ. ಹೊಸಕೋಟೆ ಬಳಿಯ ಚೌಟ್ರಿಯೊಂದರಲ್ಲಿ ನಡೆದ ರಿಸೆಪ್ಷನ್ ವೇಳೆ, ರೂಮಿನಲ್ಲಿದ್ದ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಳುವಾಗಿವೆ. ಪರಿಚಿತರೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು (ಏ.26): ಸಿಲಿಕಾನ್ ಸಿಟಿ ಬೆಂಗಳೂರಿನ ಮದುವೆ ಮನೆಗಳಲ್ಲಿ ಕಳ್ಳರ ಕೈಚಳಕ ಮುಂದುವರಿದಿದೆ. ಅಕ್ಕನ ಮಗನ ಮದುವೆ ಸಂಭ್ರಮಕ್ಕಾಗಿ ಅಮೆರಿಕದಿಂದ ಬಂದಿದ್ದ ಅನಿವಾಸಿ ಭಾರತೀಯ ವೈದ್ಯೆಯೊಬ್ಬರು ತಮ್ಮ ಬದುಕಿನ ಬಹುದೊಡ್ಡ ಆಘಾತ ಎದುರಿಸಿದ್ದಾರೆ. ರಿಸೆಪ್ಷನ್ ಮುಗಿಸಿ ಬರುವಷ್ಟರಲ್ಲಿ ರೂಮಿನಲ್ಲಿದ್ದ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಳವಾಗಿರುವ ಘಟನೆ ಬೆಂಗಳೂರಿನ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯ ವಿವರ:
ಅಮೆರಿಕದಲ್ಲಿ ವೈದ್ಯೆಯಾಗಿರುವ ಶ್ರೀದೇವಿ ಅವರು ತಮ್ಮ ಅಕ್ಕನ ಮಗನ ಮದುವೆಗಾಗಿ ಏಪ್ರಿಲ್ 18ರಂದು ಭಾರತಕ್ಕೆ ಬಂದಿದ್ದರು. ಏಪ್ರಿಲ್ 22ರಂದು ಹೊಸಕೋಟೆ ಸಮೀಪದ ಕಾಟಂನಲ್ಲೂರು ಕ್ರಾಸ್ ಬಳಿ ಇರುವ SDP ಪ್ಯಾಲೇಸ್ (SDP ಚೌಟ್ರಿ) ನಲ್ಲಿ ರಿಸೆಪ್ಷನ್ ಆಯೋಜಿಸಲಾಗಿತ್ತು. ಅಂದು ಸಂಜೆ ವೈದ್ಯೆಯ ಅಣ್ಣ ಶ್ರೀನಿವಾಸಮೂರ್ತಿ ಅವರು ಅಮೆರಿಕದಿಂದ ತಂದಿದ್ದ ಒಡವೆಗಳ ಬಾಕ್ಸ್ ಅನ್ನು ತಂದು ನೀಡಿದ್ದರು. ಸಂಜೆ 7 ಗಂಟೆಯ ಸುಮಾರಿಗೆ ಶ್ರೀದೇವಿ ಅವರು ಕೆಲವು ಒಡವೆಗಳನ್ನು ಧರಿಸಿ, ಉಳಿದವುಗಳನ್ನು ಬಾಕ್ಸ್‌ನಲ್ಲಿಟ್ಟು, ರೂಮಿಗೆ ಬೀಗ ಹಾಕಿಕೊಂಡು ರಿಸೆಪ್ಷನ್ ಕಾರ್ಯಕ್ರಮಕ್ಕೆ ತೆರಳಿದ್ದರು. ಆದರೆ ರಾತ್ರಿ 11:30ಕ್ಕೆ ಕಾರ್ಯಕ್ರಮ ಮುಗಿಸಿ ವಾಪಸ್ ಬಂದು ನೋಡಿದಾಗ ಶ್ರೀದೇವಿ ಅವರಿಗೆ ಶಾಕ್ ಕಾದಿತ್ತು. ರೂಮಿನ ಬೀಗ ತೆರೆದು ಒಳಗೆ ಹೋದಾಗ ಒಡವೆಗಳಿದ್ದ ಬಾಕ್ಸ್ ಮತ್ತು ಬ್ಯಾಗ್ ಖಾಲಿಯಾಗಿತ್ತು.
ಏನೇನು ಕಳುವಾಗಿದೆ? (FIR ಮಾಹಿತಿ):
ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಒಟ್ಟು 725 ಗ್ರಾಂ ತೂಕದ ಚಿನ್ನಾಭರಣಗಳು ಕಳವಾಗಿವೆ. ಇವುಗಳ ಇಂದಿನ ಮಾರುಕಟ್ಟೆ ಮೌಲ್ಯ ಸುಮಾರು 1 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
- ಸುಮಾರು 300 ಗ್ರಾಂ ತೂಕದ ಎರಡು ಜುಮುಕಿಗಳು.
- 200 ಗ್ರಾಂ ತೂಕದ ಒಂದು ಕಾಯಿನ್ ನೆಕ್ಲೇಸ್.
- 200 ಗ್ರಾಂ ತೂಕದ ಒಂದು ಬಂಗಾರದ ಡಾಬು.
- ತಲೆಗೆ ಹಾಕಿಕೊಳ್ಳುವ 25 ಗ್ರಾಂ ತೂಕದ ಒಡವೆಗಳು.
ಪರಿಚಿತರ ಮೇಲೇ ಸಂಶಯ:
ಈ ಕೃತ್ಯವು ಪರಿಚಿತರಿಂದಲೇ ನಡೆದಿದೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ವೈದ್ಯೆ ಶ್ರೀದೇವಿ ಅವರು ಒಡವೆಗಳನ್ನು ಬದಲಾಯಿಸುವಾಗ ಅಲ್ಲಿಗೆ ಬಂದಿದ್ದ ಒಬ್ಬ ಕೆಲಸದಾಕೆ (Maid) ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ರೂಮಿನ ಕೀಲಿ ಕೈ ಎಲ್ಲಿದೆ ಎಂಬುದು ತಿಳಿದಿರುವ ಅಥವಾ ರೂಮಿನ ಮೇಲೆ ನಿಗಾ ಇಟ್ಟಿದ್ದವರೇ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ. ಮದುವೆ ಮನೆಯ ಸಂಭ್ರಮದ ನಡುವೆಯೇ ಇಷ್ಟೊಂದು ದೊಡ್ಡ ಮೊತ್ತದ ಕಳವಾಗಿರುವುದು ಕುಟುಂಬಸ್ಥರನ್ನು ಆತಂಕಕ್ಕೀಡು ಮಾಡಿದೆ.
ಪೊಲೀಸ್ ತನಿಖೆ ಚುರುಕು:
ಘಟನೆ ಸಂಬಂಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಚೌಟ್ರಿಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಮದುವೆಗೆ ಬಂದಿದ್ದ ಅತಿಥಿಗಳು, ಕೆಲಸಗಾರರು ಹಾಗೂ ಕ್ಯಾಟರಿಂಗ್ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಳೆದುಹೋದ ಒಡವೆಗಳನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ತಿಳಿದುಬಂದಿದೆ.


