ಅರಣ್ಯ ಸಿಬ್ಬಂದಿ ದೌರ್ಜನ್ಯ: 22 ಕಿಮೀ ಪಾದಯಾತ್ರೆ
ಭಾರಂಗಿ ಹೋಬಳಿಯ ಉರುಳುಗಲ್ಲು ಗ್ರಾಮದ ರೈತರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿರುವ ದೌರ್ಜನ್ಯ ಖಂಡಿಸಿ ರೈತರು 22 ಕಿಮೀ ಪಾದಯಾತ್ರೆ ನಡೆಸಿದರು.
ಸಾಗರ (ಆ.6): ತಾಲೂಕಿನ ಭಾರಂಗಿ ಹೋಬಳಿಯ ಉರುಳುಗಲ್ಲು ಗ್ರಾಮದ ರೈತರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿರುವ ದೌರ್ಜನ್ಯ ಖಂಡಿಸಿ ಜನಪರ ಹೋರಾಟ ವೇದಿಕೆ ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ರೈತರು ಶುಕ್ರವಾರ ಬಿಳಿಗಾರು ಗ್ರಾಮದಿಂದ ಕಾರ್ಗಲ್ ಪಟ್ಟಣದವರೆಗೆ ಪಾದಯಾತ್ರೆ ನಡೆಸಿದರು. ಸುರಿಯುತ್ತಿರುವ ಮಳೆಯ ನಡುವೆಯೇ ಬಿಳಿಗಾರಿನಿಂದ ಕಾರ್ಗಲ್‌ವರೆಗೆ 22 ಕಿ.ಮೀ. ದೂರ ನಡೆದ ಪಾದಯಾತ್ರೆಯಲ್ಲಿ ಯುವಕರು, ಮಹಿಳೆಯರು, ಜನಪ್ರತಿನಿಧಿಗಳು, ರೈತರು ಭಾಗವಹಿಸಿದ್ದರು. ಮೆರವಣಿಗೆ ಉದ್ದಕ್ಕೂ ಅರಣ್ಯ ಇಲಾಖೆ ದೌರ್ಜನ್ಯದ ವಿರುದ್ಧ ಧಿಕ್ಕಾರದ ಕೂಗು ಕೇಳಿಬಂತು.
ಬಳ್ಳಾರಿ ಗಣಿ ವಿರುದ್ಧ ದನಿಯೆತ್ತಿದ ರೈತರ ಮೇಲೆ ಸುಳ್ಳು ಪ್ರಕರಣ?
ಪಾದಯಾತ್ರೆಗೆ ಚಾಲನೆ ನೀಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ (Kagodu Timmappa)ಮಾತನಾಡಿ, ಅರಣ್ಯ ವ್ಯಾಪ್ತಿಯಲ್ಲಿ ವಾಸಿಸುವ ಜನರು ಹೋರಾಟದ ಮೂಲಕವೇ ಮೂಲಭೂತ ಸೌಲಭ್ಯ ಪಡೆಯಬೇಕಾದ ಸ್ಥಿತಿ ನಿರ್ಮಾಣ ಆಗಿರುವುದು ದುರದೃಷ್ಟಕರ ಸಂಗತಿ. ಉರುಳುಗಲ್ಲಿನ ರೈತರ ವಿಷಯದಲ್ಲಿ ಅರಣ್ಯಾಧಿಕಾರಿಗಳು ಮನುಷ್ಯತ್ವವನ್ನು ಮರೆತು ವರ್ತಿಸಿದ್ದಾರೆ. ಇದು ಅಕ್ಷಮ್ಯ ಅಪರಾಧ ಎಂದರು.
ಜನರ ಬದುಕುವ ಹಕ್ಕನ್ನು ಎಲ್ಲ ಇಲಾಖೆಯವರು ಗೌರವಿಸಬೇಕು. ಅರಣ್ಯ ಇಲಾಖೆಯವರು ಜನರ ಸಹಭಾಗಿತ್ವದಲ್ಲಿ ಅರಣ್ಯ ಸಂರಕ್ಷಣೆ ಮಾಡಬೇಕೆ ಹೊರತು, ಜನರನ್ನು ಬಿಟ್ಟಲ್ಲ. ಅರಣ್ಯವಾಸಿಗಳಿಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಮುಕ್ತ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ.ರಾಮಪ್ಪ ಮಾತನಾಡಿ, ಈಗ ಹೋರಾಟ ಆರಂಭವಾಗಿದೆ. ಇದು ಕೇವಲ ಅರಣ್ಯವಾಸಿಗಳ ಪರವಾದ ಹೋರಾಟ ಮಾತ್ರವಲ್ಲ. ಮುಂದಿನ ದಿನಗಳಲ್ಲಿ ಶರಾವತಿ ಸಂತ್ರಸ್ತರ ಪರವಾದ ಹೋರಾಟವನ್ನಾಗಿ ಮಾರ್ಪಡಿಸುವ ಮೂಲಕ ಮಲೆನಾಡಿನ ಜನರ ಧ್ವನಿ ದೆಹಲಿಯನ್ನು ತಲುಪಬೇಕು ಎಂದು ಆಗ್ರಹಿಸಿದರು.
Agricultural Loan : 300 ರೈತರ ಮೇಲೆ ಬ್ಯಾಂಕ್ ದಾವೆ : ಪ್ರತಿಭಟನೆ
ಹೋರಾಟದ ರೂವಾರಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಅರಣ್ಯ ಇಲಾಖೆಯ ದೌರ್ಜನ್ಯದ ವಿರುದ್ಧ ಕಠಿಣ ಕ್ರಮ ಆಗುವ ತನಕ ಹೋರಾಟ ನಿಲ್ಲುವುದಿಲ್ಲ. ಜಿಲ್ಲಾಧಿಕಾರಿಗಳು ಕಾರ್ಗಲ್‌ಗೆ ಆಗಮಿಸಿ ಹೋರಾಟಗಾರರ ಮನವಿ ಸ್ವೀಕರಿಸಿ ಸಮರ್ಪಕ ಭರವಸೆ ಕ್ರಮಗಳ ಕುರಿತು ನಂಬಿಕೆಯುತ ಮಾತುಗಳನ್ನು ಹೇಳುವ ತನಕ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ತಾಪಂ ಮಾಜಿ ಉಪಾಧ್ಯಕ್ಷ ಅಶೋಕ ಬರದವಳ್ಳಿ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನಾ. ಶ್ರೀನಿವಾಸ್, ರೈತ ಸಂಘದ ಅಧ್ಯಕ್ಷ ದಿನೇಶ್ ಸಿರಿವಾಳ, ಆಮ್ ಆದ್ಮಿ ಪಕ್ಷದ ವಿ.ಕೆ.ವಿಜಯಕುಮಾರ್, ಜನಪರ ಹೋರಾಟ ವೇದಿಕೆಯ ಜಿ.ಟಿ.ಸತ್ಯನಾರಾಯಣ ಕರೂರು, ತ್ಯಾಗಮೂರ್ತಿ, ಪದ್ಮರಾಜ್ ಚಪ್ಪರಮನೆ, ಭಾನುಕುಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮರಾಜ್ ಮತ್ತಿತರರು ಇದ್ದರು.