Asianet Suvarna News Asianet Suvarna News

ಅನ್ನಭಾಗ್ಯ ಅಕ್ಕಿಯಲ್ಲಿ ಯೂರಿಯಾ ಗೊಬ್ಬರ! ಪತ್ತೆ ಹೇಗೆ?

ಸರಕಾರ ಅನ್ನಭಾಗ್ಯ ಅಕ್ಕಿಯನ್ನು ತಿಂಗಳಿಗೆ ವ್ಯಕ್ತಿಯೊಬ್ಬರಿಗೆ 5 ಕೆಜಿ ನೀಡಬೇಕೋ? 7 ಕೆಜಿಯನ್ನೇ ಮುಂದುವರಿಸಬೇಕೋ ಎಂಬ ಮಾತುಕತೆಯಲ್ಲಿ ಇದ್ದಾಗಲೇ ಶಾಕಿಂಗ್ ನ್ಯೂಸ್ ಒಂದು ಬಂದಿದೆ. ಇದು ಬಂದಿರುವುದು ಗದಗ ಜಿಲ್ಲೆಯಿಂದ.

urea fertilizer in Anna Bhagya Rice Gadag
Author
Bengaluru, First Published Sep 6, 2018, 8:42 PM IST

ಗದಗ[ಸೆ.6]  ಲಕ್ಷ್ಮೇಶ್ವರ ಸಮೀಪದ ಅಕ್ಕಿಗುಂದ ತಾಂಡಾದಲ್ಲಿ ಅನ್ನ ಭಾಗ್ಯ ಅಕ್ಕಿಯಲ್ಲಿ ಯೂರಿಯಾ ಗೊಬ್ಬರ ಸೇರಿರುವ ಅಂಶ ಬೆಳಕಿಗೆ ಬಂದಿದೆ. ಸಮೀಪದ ಅಕ್ಕಿಗುಂದ ತಾಂಡಾದಲ್ಲಿ ಅನ್ನಭಾಗ್ಯ ಅಕ್ಕಿಯಲ್ಲಿ ಯೂರಿಯಾ ಗೊಬ್ಬರ ಕಂಡುಬಂದಿದ್ದು, ಅನ್ನಭಾಗ್ಯದ ಅಕ್ಕಿಯಿಂದ ತಯಾರಿಸಿದ ಅನ್ನ ಊಟ ಮಾಡಿದ 15ಕ್ಕೂ ಅಧಿಕ ಮಕ್ಕಳು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ.

ಕಳೆದ 2 ದಿನಗಳಿಂದ ಅನ್ನ ಭಾಗ್ಯದ ಅಕ್ಕಿಯ ಊಟ ಮಾಡುತ್ತಿರುವ ಮಕ್ಕಳು ತೀವ್ರ ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ದಿನಕ್ಕೆ ಮೂರ‌್ನಾಲ್ಕುಬಾರಿ ಮಲ ವಿಸರ್ಜನೆ ಆಗುತ್ತಿತ್ತು. ಮಲ ವಿಸರ್ಜನೆ ಸಂದರ್ಭದಲ್ಲಿ ತೀವ್ರ ಹೊಟ್ಟೆ ನೋವು ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರಲ್ಲಿ ಚಿಕಿತ್ಸೆ ಸಹ ಪಡೆಯಲಾಯಿತು. ಆದರೂ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ತಾಂಡಾದ ಜನರು ಆರೋಪಿಸುತ್ತಿದ್ದಾರೆ.

ತಾಂಡಾದ ಬಹುತೇಕ ಮನೆಗಳಲ್ಲಿ ಇದೇ ಸಮಸ್ಯೆ ಕಾಣಿಸಿಕೊಂಡಿದ್ದಿರಿಂದ ಅಕ್ಕಿಯ ಪರೀಕ್ಷೆ ಮಾಡಿದಾಗ ಅದರಲ್ಲಿ ಯೂರಿಯಾ ಗೊಬ್ಬರದ ಕಣಗಳಿರುವುದು ಕಂಡು ಬಂದಿದೆ. ಯೂರಿಯಾ ಕಣಗಳನ್ನು ನೀರಿನಲ್ಲಿ ಹಾಕಿ ಪರೀಕ್ಷೆ ಮಾಡಿದಾಗ ಆ ಕಣಗಳು ನೀರಿನಲ್ಲಿ ಕರಗಿ ಹೋಗಿವೆ. ಅಲ್ಲದೆ ಆ ಕಣಗಳನ್ನು ಬಾಯಿಯಲ್ಲಿ ಹಾಕಿಕೊಂಡಾಗ ಉಪ್ಪಿನ ಅಂಶ ಗೋಚರಿಸುತ್ತಿದೆ. ಅನ್ನಭಾಗ್ಯ ಅಕ್ಕಿಯಲ್ಲಿ ಯೂರಿಯಾ ಯಾವುದು ಅಕ್ಕಿ ಯಾವುದು ಎಂದು ಪತ್ತೆ ಮಾಡುವುದು ಕಷ್ಟಕರ ಸಂಗತಿಯಾಗಿದ್ದು, ಇದರಿಂದ ತಕ್ಷಣವೆ ಅನ್ನಭಾಗ್ಯ
ಅಕ್ಕಿಯ ಊಟ ನಿಲ್ಲಿಸಿದ್ದೇವೆ ಎಂದು ತಾಂಡಾದ ನಿವಾಸಿಯೊಬ್ಬರು ಹೇಳುತ್ತಾರೆ.

ಸರ್ಕಾರ ನೀಡುತ್ತಿರುವ ಅನ್ನಭಾಗ್ಯ ಅಕ್ಕಿಯಲ್ಲಿ ಯೂರಿಯಾ ಗೊಬ್ಬರ ಮಿಶ್ರಣ ಮಾಡಲಾಗಿದ್ದು, ಬಡವರು ಇಂತಹ ಅಕ್ಕಿಯ ಅನ್ನ ತಿಂದು ಆಸ್ಪತ್ರೆಯ ಹಾದಿ ಹಿಡಿಯುತ್ತಿದ್ದಾರೆ. ಸರ್ಕಾರ ನೀಡುವ ಪುಕ್ಕಟೆ ಅಕ್ಕಿಯಲ್ಲಿ ಯೂರಿಯಾ ಸೇರಿದ್ದು ಹೇಗೆ ಎಂಬುದು ಪತ್ತೆಯಾಗಬೇಕು. ಇಂತಹ ಅನ್ಯಾಯ ಮಾಡುತ್ತಿರುವವರನ್ನು ಜಿಲ್ಲಾಧಿಕಾರಿಗಳು ಪತ್ತೆ ಮಾಡಿ ಶಿಕ್ಷೆ ವಿಧಿಸಬೇಕು ಎಂದು ಸ್ಥಳೀಯರಾದ ಜಗದೀಶ ದೊಡ್ಡಮನಿ ಲಕ್ಷ್ಮೇಶ್ವರ ಆಗ್ರಹಿಸಿದ್ದಾರೆ.

ಪಡಿತರ ಇಲಾಖೆ ವಿತರಿಸಿರುವ ಅನ್ನಭಾಗ್ಯ ಅಕ್ಕಿಯಲ್ಲಿ ಯೂರಿಯಾ ಗೊಬ್ಬರದ ಅಂಶ ಇದೆಯೋ ಹೇಗೆ ಎಂಬ ಬಗ್ಗೆ ಪರಿಶೀಲನೆ ನಡೆಸಲು ಆಹಾರ ನೀರಿಕ್ಷಕರನ್ನು ಅಲ್ಲಿಗೆ ಕಳಿಸಿದ್ದೇನೆ. ಆ ಅಕ್ಕಿಯಲ್ಲಿ ಅಂತಹ ಅಂಶ ಕಂಡುಬಂದರೆ ಆ ಅಕ್ಕಿಯನ್ನು ವಿತರಣೆ ಮಾಡದಂತೆ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ ಅಕ್ಕಿಗುಂದ ತಾಂಡಾಕ್ಕೆ ವೈದ್ಯಾಧಿಕಾರಿಗಳನ್ನು ಕಳುಹಿಸಿ ಮಕ್ಕಳಿಗೆ ಚಿಕಿತ್ಸೆ ಕೊಡಿಸುವಂತೆ ಮಾಡಲಾಗುತ್ತದೆ ಎಂದು ತಹಸೀಲ್ದಾರ್ ಡಾ. ವೆಂಕಟೇಶ ನಾಯ್ಕ  ತಿಳಿಸಿದ್ದಾರೆ.

Follow Us:
Download App:
  • android
  • ios