ದಲಿತರ ಕೇರಿಗೆ ನುಗ್ಗಿ ಚಪ್ಪಲಿ, ಮಾರಕಾಸ್ತ್ರಗಳಿಂದ ಸವರ್ಣಿಯರ ಹಲ್ಲೆ
ಸವರ್ಣಿಯರು ದಲಿತ ಕೇರಿಗೆ ನುಗ್ಗಿ ಮಾರಕಾಸ್ತ್ರಗಳು ಹಾಗೂ ಚಪ್ಪಲಿಯಿಂದ ಥಳಿಸಿದ ಘಟನೆ ನಡೆದಿದೆ.
ಕಾರಟಗಿ (ಅ.29): ಕ್ಷುಲ್ಲಕ ಕಾರಣಕ್ಕೆ ಸವರ್ಣೀಯ ಯುವಕರ ಗುಂಪೊಂದು ದಲಿತ ಕೇರಿಗೆ ನುಗ್ಗಿ ದಲಿತ ಯುವಕ ಮತ್ತು ಆತನ ತಾಯಿಯ ಮೇಲೆಯೂ ಮಾರಕಾಸ್ತ್ರಗಳಿಂದ ಮತ್ತು ಚಪ್ಪಲಿಯಿಂದ ಹಲ್ಲೆ ಮಾಡಿದ ಘಟನೆ ತಾಲೂಕಿನ ಹಗೇದಾಳ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಹಲ್ಲೆಗೊಳಗಾದ ದಲಿತ ಮಹಿಳೆ ಹುಲಿಗೆಮ್ಮ ಕಾರಟಗಿ ಠಾಣೆಯಲ್ಲಿ ಘಟನೆ ಕುರಿತು ದೂರು ಸಲ್ಲಿಸಿದ್ದಾಳೆ. ಒಟ್ಟು 7 ಜನರು ಬುಧವಾರ ಬೆಳಗ್ಗೆ ಸುಮಾರು 7.20ಕ್ಕೆ ದಲಿತ ಕೇರಿಗೆ ದ್ವಿಚಕ್ರ ವಾಹನದಲ್ಲಿ ಆಗಮಿಸಿ ಏಕಾಏಕಿ ತಮ್ಮ ಮಗ ಗ್ರಾ.ಪಂ. ಸದಸ್ಯ ದುರುಗೇಶ ಮತ್ತು ತನ್ನ ಮೇಲೆ ಚಪ್ಪಲಿ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದರು. ಕೇರಿ ಜನರು ಅವರಿಂದ ನಮ್ಮನ್ನು ಜೀವ ಸಹಿತ ರಕ್ಷಣೆ ಮಾಡಿದ್ದು ಹಲ್ಲೆಯಿಂದಾಗಿ ತಾವು ಕಾರಟಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಗಂಭೀರವಾಗಿ ಗಾಯಗೊಂಡ ತಮ್ಮ ಮಗನನ್ನು ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಮದುವೆ, ಮತಾಂತರಕ್ಕೆ ಒತ್ತಾಯ: ಹಿಂದು ಯುವತಿಯನ್ನು ಗುಂಡಿಕ್ಕಿ ಕೊಂದ ಮುಸ್ಲಿಂ ಯುವಕ ...
ಗ್ರಾಮದ ಸವರ್ಣೀಯರಾದ ಅಂಬರೇಶ ಬಸವರಾಜ ಮಟ್ಟೂರು, ರಮೇಶ ಹನುಮರಡ್ಡೆಪ್ಪ, ಮಂಜುನಾಥ ಬಸವರಾಜ ಮಟ್ಟೂರು, ನಾಗರಾಜ ಹನುಮರೆಡ್ಡೆಪ್ಪ, ಮಂಜುನಾಥ ರುದ್ರಪ್ಪ ಮತ್ತು ವೀರೇಶ ತಂದೆ ರಮೇಶ ಸೇರಿಕೊಂಡು ಜಾತಿಯಿಂದ ನಿಂದಿಸಿ ರಾಜಕೀಯ ದ್ವೇಷವನ್ನಿಟ್ಟುಕೊಂಡು ಚಪ್ಪಲಿ, ಕಟ್ಟಿಗೆ ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.