ಬೆಂಗಳೂರು(ಏ.01): ಬಿಬಿಎಂಪಿ ಹೊಸ ಕಾಯ್ದೆ ಅನ್ವಯ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಇನ್ನಷ್ಟು ವಿಸ್ತಾರವಾಗಿ ಬೆಳೆಯುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಇದರ ಮೊದಲ ಹೆಜ್ಜೆಯಾಗಿ ಆಯುಕ್ತ ಹುದ್ದೆಯನ್ನು ಮೇಲ್ದರ್ಜೆಗೇರಿಸಿ ಮುಖ್ಯ ಆಯುಕ್ತ ಹುದ್ದೆಯನ್ನಾಗಿ ಪರಿವರ್ತಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ನೂತನ ಕಾಯ್ದೆಯಂತೆ ಮುಖ್ಯ ಆಯುಕ್ತ ಹುದ್ದೆಯು ಏ.1ರಿಂದ ಜಾರಿಗೆ ಬರಲಿದ್ದು, ಪಾಲಿಕೆಯ ಮೊದಲ ಮುಖ್ಯ ಆಯುಕ್ತರಾಗಿ ಬಿಬಿಎಂಪಿ ಹಾಲಿ ಆಡಳಿತಾಧಿಕಾರಿ ಗೌರವ ಗುಪ್ತಾ ಅವರನ್ನು ನೇಮಕ ಮಾಡಿದೆ. ಹೊಸ ಕಾಯ್ದೆ ಪ್ರಕಾರ ಈ ಹುದ್ದೆಗೆ ಪ್ರಧಾನ ಕಾರ್ಯದರ್ಶಿ ಶ್ರೇಣಿಗಿಂತ ಕಡಿಮೆ ಇಲ್ಲದ ಅಧಿಕಾರಿಯನ್ನು ನೇಮಕ ಮಾಡಬೇಕು. ಅದರಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ಗೌರವ ಗುಪ್ತಾ ಅವರನ್ನು ಮುಖ್ಯ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

ಈಗಾಗಲೇ ರಾಜ್ಯ ಸರ್ಕಾರವು ಬಿಬಿಎಂಪಿ ಹೊಸ ಕಾಯ್ದೆಯನ್ನು ಜಾರಿಗೆ ತಂದಿದೆ. ಅದರಂತೆ ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಏರಿಕೆ ಮಾಡಬೇಕು. ಅದಕ್ಕಾಗಿ ಬಿಬಿಎಂಪಿ ವ್ಯಾಪ್ತಿಯ ಸುತ್ತಲೂ ಇರುವ ಒಂದು ಕಿ.ಮೀ. ಒಳಗಿನ ಗ್ರಾಮ, ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ನಗರಸಭೆಗೆ ಸೇರಿದ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕಿದೆ. ಈ ಕುರಿತು ಬಿಬಿಎಂಪಿ ಕಾರ್ಯೋನ್ಮುಖವಾಗಿದ್ದು, ಪಾಲಿಕೆ ವ್ಯಾಪ್ತಿಯ ಸುತ್ತಮುತ್ತಲ ಒಂದು ಕಿ.ಮೀ. ಒಳಗಿನ 20 ಗ್ರಾಮಗಳನ್ನು ಗುರುತಿಸಿದೆ.

ಬೆಂಗ್ಳೂರಿಗೆ ಬಂತು ಗಾಳಿ ಶುದ್ಧೀಕರಣ ಯಂತ್ರ..!

ಹಾಗೆಯೇ ಮೇಯರ್‌ ಮತ್ತು ಉಪ ಮೇಯರ್‌ ಅಧಿಕಾರಾವಧಿಯನ್ನು ಎರಡೂವರೆ ವರ್ಷಗಳಿಗೆ ಹೆಚ್ಚಳ ಮಾಡುವುದು ಮತ್ತು ಬಿಬಿಎಂಪಿ ಆಯುಕ್ತರ ಹುದ್ದೆಯನ್ನು ಮುಖ್ಯ ಆಯುಕ್ತರ ಹುದ್ದೆಯಾಗಿ ಮೇಲ್ದರ್ಜೆಗೇರಿಸಬೇಕು. ಆಯುಕ್ತರ ಅಧಿಕಾರಾವಧಿ ಎರಡು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ನಿಯೋಜನೆ ಮಾಡಬೇಕು. ವಲಯ ಆಯುಕ್ತರು ಸರ್ಕಾರದ ಕಾರ್ಯದರ್ಶಿ ಹಂತಕ್ಕಿಂತ ಕಡಿಮೆ ಇಲ್ಲದ ಅಧಿಕಾರಿಯಾಗಿರಬೇಕು. ವಲಯಗಳ ಸಂಖ್ಯೆ 8ರಿಂದ 15ಕ್ಕೆ ಏರಿಕೆ ಮಾಡಬೇಕು ಎಂದು ಸೇರಿದಂತೆ ವಿವಿಧ ಆಡಳಿತಾತ್ಮಕ ಬದಲಾವಣೆಯನ್ನು ಹಂತ ಹಂತವಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಮೊದಲ ಹಂತವಾಗಿ ಮುಖ್ಯ ಆಯುಕ್ತರು, ವಿಶೇಷ ಆಯುಕ್ತರನ್ನು ವಲಯ ಆಯುಕ್ತರಾಗಿ ಮತ್ತು ಜಂಟಿ ಆಯುಕ್ತರ ಹುದ್ದೆಯನ್ನು ವಲಯ ಜಂಟಿ ಆಯುಕ್ತರ ಹುದ್ದೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ವಾರ್ಡ್‌ಗಳ ಹೆಚ್ಚಳಕ್ಕೆ ಅನುಕೂಲವಾಗುವಂತೆ ಗ್ರಾಮಗಳ ಸೇರ್ಪಡೆ, ವಾರ್ಡ್‌ ವಿಂಗಡಣೆ, ಜನಸಂಖ್ಯೆವಾರು ವಾರ್ಡ್‌ ರಚನೆ ಸೇರಿದಂತೆ ಹಲವು ಪ್ರಕ್ರಿಯೆಗಳು ಹಂತ ಹಂತವಾಗಿ ನಡೆಯಲಿವೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿ ಮತ್ತು ಸುಗಮ ಆಡಳಿತಕ್ಕಾಗಿ ಈ ಹೊರ ಕಾಯ್ದೆಯನ್ನು ಜಾರಿಗೆ ತರಲಾಗಿದೆ.