ಹಡ್ಸನ್ ವೃತ್ತದಲ್ಲಿ ಪ್ರಾಯೋಗಿಕವಾಗಿ ಅಳವಡಿಕೆ| ಇಲ್ಲಿ ಯಶಸ್ವಿಯಾದರೆ ನಗರದ ಇತರೆಡೆ ಸ್ಥಾಪನೆ| ಸ್ಮೋಗ್ ಟವರ್ ಕೆಲಸ ಮಾಡುವ ರೀತಿ| ನ್ಯಾನೋ ತಂತ್ರಜ್ಞಾನದ ಮೂಲಕ ಕಾರ್ಯ ನಿರ್ವಹಣೆ| ಕಲುಷಿತ ಗಾಳಿ ಹೀರಿಕೊಂಡು ಅಪಾಯಕಾರಿ ಅಂಶ ಹೀರುತ್ತೆ| ಪ್ರತಿ ನಿಮಿಷಕ್ಕೆ 15 ಸಾವಿರ ಘನ ಅಡಿ ಪ್ರದೇಶದ ಗಾಳಿ ಶುದ್ಧೀಕರಣ|
ಬೆಂಗಳೂರು(ಮಾ.24): ವಾಯು ಮಾಲಿನ್ಯದಿಂದ ಕಲುಷಿತಗೊಳ್ಳುವ ವಾತಾವರಣವನ್ನು ತಿಳಿಗೊಳಿಸುವ ಉದ್ದೇಶದಿಂದ ನಗರದ ಹಡ್ಸನ್ ವೃತ್ತದಲ್ಲಿ ಪ್ರಾಯೋಗಿಕವಾಗಿ ಕಲುಷಿತ ಹೊಗೆಯನ್ನು ಶುದ್ಧೀಕರಿಸಿ ಶುದ್ಧಗಾಳಿ ಹೊರ ಬಿಡುವ ಹೊಗೆ ಗೋಪುರ(ಸ್ಮೋಗ್ ಟವರ್) ಅಳವಡಿಸಲಾಗಿದೆ.
ರಾಜ್ಯದ ನೂತನ್ ಲ್ಯಾಬ್ಸ್ ಸಂಸ್ಥೆಯು ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಸಹಯೋಗದಲ್ಲಿ ತಯಾರಿಸಲ್ಪಟ್ಟಿರುವ ಈ ಹೊಗೆ ಗೋಪುರ ಯಂತ್ರವು ನ್ಯಾನೋ ತಂತ್ರಜ್ಞಾನದ ಮೂಲಕ ಕೆಲಸ ಮಾಡಲಿದೆ. ಇದು ವಾತಾವರಣದಲ್ಲಿರುವ ಕಲುಷಿತ ಗಾಳಿಯನ್ನು ಹೀರಿಕೊಂಡು ನ್ಯಾನೋ ಕಣಗಳ ಮೂಲಕ ಹಾಯಿಸುತ್ತದೆ. ಪಿಎಂ 2.5, ಪಿಎಂ 10, ಕಾರ್ಬನ್ ಮಾನಾಕ್ಸೈಡ್, ಸೆಲ್ಫರ್ ಡೈ ಆಕ್ಸೈಡ್, ನೈಟ್ರೋಜಿನಸ್ ಆಕ್ಸೈಡ್, ಹೊಲೆಟೈಲ… ಆರ್ಗಾನಿಕ್ ಕಾಂಪೋಡ್ಸ್ ಮತ್ತು ಇತರೆ ಅಪಾಯಕಾರಿ ಅಂಶಗಳನ್ನು ಹೀರಿಕೊಳ್ಳುತ್ತದೆ. ನಂತರ ಉಸಿರಾಟಕ್ಕೆ ಯೋಗ್ಯವಾದ ಶುದ್ಧ ಗಾಳಿಯನ್ನು ಹೊರಬಿಡಲಿದೆ. ಸದರಿ ಯಂತ್ರ ಪ್ರತಿ ನಿಮಿಷಕ್ಕೆ 15 ಸಾವಿರ ಘನ ಅಡಿ ಪ್ರದೇಶದ ಗಾಳಿಯನ್ನು ಶುದ್ಧೀಕರಿಸಲಿದೆ.
ಈ ಹೊಗೆ ಗೋಪುರ ಯಂತ್ರ 11 ಹಂತಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಸಣ್ಣ ಧೂಳಿನ ಕಣ, ಗಾಳಿಯಲ್ಲಿರುವ ವಿಷಯುಕ್ತ ಅನಿಲಗಳು ಸೇರಿದಂತೆ ಅಪಾಯಕಾರಿ ಅಂಶಗಳನ್ನು ಹೀರಿಕೊಂಡು ಶುದ್ಧೀಕರಿಸಿ ಗಾಳಿಯನ್ನು ಹೊರಬಿಡುತ್ತದೆ. ಸದರಿ ಯಂತ್ರವು 15 ಅಡಿ ಎತ್ತರ, 6 ಅಡಿ ಸುತ್ತಳೆತೆ ಹೊಂದಿದ್ದು, ಯಂತ್ರ ಕಾರ್ಯನಿರ್ವಹಿಸಲು 11 ಕಿಲೋವಾಟ್ ವಿದ್ಯುತ್ ಬೇಕಾಗಿದೆ.
500 ಜಂಕ್ಷನ್‌ಗಳಲ್ಲಿ ಗಾಳಿ ಶುದ್ಧೀಕರಣ ಯಂತ್ರ
ಮಂಗಳವಾರ ಬಿಬಿಎಂಪಿ ಆಯುಕ್ತ ಡಾ. ಎನ್.ಮಂಜುನಾಥ್ ಪ್ರಸಾದ್ ಅವರು ಹಡ್ಸನ್ ವೃತ್ತದಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿರುವ ಹೊಗೆ ಗೋಪುರದ (ವಾಯು ಶುದ್ಧೀಕರಣ ಯಂತ್ರ) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತ ಎನ್.ಮಂಜುನಾಥ್ ಪ್ರಸಾದ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಾಯು ಗುಣಮಟ್ಟಮಾನಿಟರಿಂಗ್ ವ್ಯಾನ್ ಮೂಲಕ ಹೊಗೆ ಗೋಪುರ ಯಂತ್ರ ಹೇಗೆ ಕಾರ್ಯನಿರ್ವಹಿಸಲಿದೆ ಎಂದು ಪರಿಶೀಲನೆ ನಡೆಲಾಗುವುದು. ಪ್ರಾಯೋಗಿಕವಾಗಿ ಅಳವಡಿಸಿರುವ ಯಂತ್ರ ಸರಿಯಾಗಿ ಕಾರ್ಯನಿರ್ವಹಿಸಲಿದೆ ಎಂಬುದು ಖಚಿತವಾದರೆ 15ನೇ ಹಣಕಾಸು ಆಯೋಗದಡಿ ನಗರದ ಪ್ರಮುಖ ಜಂಕ್ಷನ್‌ಗಳು ಹಾಗೂ ಹೆಚ್ಚು ಸಂಚಾರ ದಟ್ಟಣೆಯಾಗುವ ಪ್ರದೇಶದಲ್ಲಿ ವಾಯು ಶುದ್ಧೀಕರಣ ಯಂತ್ರಗಳನ್ನು ಅಳವಡಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಪಾಲಿಕೆ ಅಧೀಕ್ಷಕ ಎಂಜಿನಿಯರ್ ಬಸವರಾಜ್ ಕಬಾಡೆ, ನೂತನ್ ಲ್ಯಾಬ್ಸ್ ಸಿಇಒ ಎಚ್.ಎಸ್.ನೂತನ್ ಇದ್ದರು.
