ಮಂಗಳೂರು(ಮೇ 21): ದಕ್ಷಿಣ ಕನ್ನಡದ ಕೋವಿಡ್‌ ಆಸ್ಪತ್ರೆಯಾಗಿ ಗುರುತಿಸಲಾಗಿರುವ ವೆನ್ಲಾಕ್‌ ಆಸ್ಪತ್ರೆಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಕೋವಿಡ್‌ ಪ್ರಕರಣ ಬಂದರೆ ಅಗತ್ಯವಿರುವ ಸುಸಜ್ಜಿತ ತೀವ್ರ ನಿಗಾ ಘಟಕವನ್ನು ವೆನ್ಲಾಕ್‌ ಸೂಪರ್‌ ಸ್ಪೆಷಾಲಿಟಿ ಬ್ಲಾಕ್‌ನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಘಟಕ ಇನ್ನೊಂದು ವಾರದಲ್ಲಿ ಕಾರ್ಯಾರಂಭಗೊಳಿಸುವ ನಿರೀಕ್ಷೆ ಇದೆ.

ಸೂಪರ್‌ ಸ್ಪೆಷಾಲಿಟಿ ಬ್ಲಾಕ್‌ ನೂತನ ಕಟ್ಟಡದ ಒಂದನೇ ಮಹಡಿಯಲ್ಲಿ 37 ಬೆಡ್‌ನ ತೀವ್ರ ನಿಗಾ ಘಟಕವನ್ನು 3.4 ಕೋಟಿ ರು. ವೆಚ್ಚದಲ್ಲಿ ಮಂಗಳೂರು ಸ್ಮಾರ್ಟ್‌ ಸಿಟಿ ಅಭಿವೃದ್ಧಿಪಡಿಸಿದೆ. ಈಗ ಇಸ್ಫೋಸಿಸ್‌ ಮಕ್ಕಳ ಆಸ್ಪತ್ರೆಯಲ್ಲಿರುವ ಐಸಿಯುವನ್ನೇ ಕೋವಿಡ್‌ ರೋಗಿಗಳಿಗೆ ಬಳಸಲಾಗುತ್ತದೆ. ಸೂಪರ್‌ ಸ್ಪೆಷಾಲಿಟಿ ಐಸಿಯು ಸಿದ್ಧಗೊಂಡ ಬಳಿಕ ಇದನ್ನೇ ಬಳಕೆ ಮಾಡಲಾಗುತ್ತದೆ.

ಜು.31ರವರೆಗೆ ಕರಾವಳಿ ಮೀನುಗಾರಿಕೆ ನಿಷೇಧ

ವೆಂಟಿಲೇಟರ್‌ ಸಾಕಷ್ಟಿದೆ: ಸದ್ಯದ ಪರಿಸ್ಥಿತಿ ನಿಭಾಯಿಸಲು 23 ವೆಂಟಿಲೇಟರ್‌ಗಳಿವೆ. ಕೋವಿಡ್‌ ಪ್ರಾರಂಭವಾದಾಗಿನಿಂದ ಇದುವರೆಗೂ ಒಮ್ಮೆಗೆ 2-3ಕ್ಕಿಂತ ಹೆಚ್ಚಿನ ರೋಗಿಗಳಿಗೆ ವೆಂಟಿಲೇಟರ್‌ ಬಳಕೆ ಮಾಡಬೇಕಾಗಿ ಬಂದಿದೆ. ಇತ್ತೀಚೆಗಷ್ಟೆತಲಾ 10 ಲಕ್ಷ ರು. ಮೌಲ್ಯದ 5 ವೆಂಟಿಲೇಟರುಗಳನ್ನು ಇಸ್ಫೋಸಿಸ್‌ ಕೊಡುಗೆಯಾಗಿ ನೀಡಿದೆ.

ಮಂಗಳೂರು ಸ್ಮಾರ್ಟ್‌ ಸಿಟಿ ಕೊಡುಗೆ

ಸೂಪರ್‌ ಸ್ಪೆಷಾಲಿಟಿ ಬ್ಲಾಕ್‌ನ ಒಂದನೇ ಮಹಡಿ ಖಾಲಿಯಿತ್ತು. ಅದನ್ನು ಸ್ಮಾರ್ಟ್‌ ಸಿಟಿಯವರ ನೇತೃತ್ವದಲ್ಲಿ ಕೇವಲ 20 ದಿನಗಳಲ್ಲಿ ರಾಷ್ಟ್ರೀಯ ಆಸ್ಪತ್ರೆಗಳ ಮಾನ್ಯತಾ ಮಂಡಳಿ(ಎನ್‌ಎಬಿಎಚ್‌) ಮಾನದಂಡಕ್ಕೆ ಅನುಗುಣವಾಗಿ ಐಸಿಯು ಆಗಿ ನಿರ್ಮಿಸಲಾಗಿದೆ. ಸಂಪೂರ್ಣ ಹಿಪಾಕ್ಸಿ ಫೆä್ಲೕರಿಂಗ್‌, ಫಾಲ್ಸ್‌ ಸೀಲಿಂಗ್‌, ಸಿಸಿ ಕ್ಯಾಮರಾ, ವೈರಸ್‌ ನಿರೋಧಕ ಹೆಪಾ ಫಿಲ್ಟರ್‌ ಸಹಿತ ಏರ್‌ಹ್ಯಾಂಡ್ಲಿಂಗ್‌ ಯುನಿಟ್‌, ರಿಮೋಟ್‌ ಚಾಲಿತ 25 ಬೆಡ್‌ ಸೇರಿದಂತೆ 37 ಬೆಡ್‌ಗಳು ಇದರಲ್ಲಿವೆ ಎಂದು ಮಂಗಳೂರು ಸ್ಮಾರ್ಟ್‌ಸಿಟಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ರವಿಕುಮಾರ್‌ ಹೇಳಿದ್ದಾರೆ.