ಎಲ್ಲರನ್ನು ನಮ್ಮಂತೆ ಕಂಡಾಗ ಅಸ್ಪೃಶ್ಯತೆ ಹೋಗಲು ಸಾಧ್ಯ: ಮಾಧುಸ್ವಾಮಿ
ಎಲ್ಲಾ ಸಮುದಾಯವನ್ನು ನಮ್ಮಂತೆ ಕಂಡಾಗ ಅಸ್ಪೃಶ್ಯತೆ ಹೋಗಲು ಸಾಧ್ಯ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ತುಮಕೂರು: ಎಲ್ಲಾ ಸಮುದಾಯವನ್ನು ನಮ್ಮಂತೆ ಕಂಡಾಗ ಅಸ್ಪೃಶ್ಯತೆ ಹೋಗಲು ಸಾಧ್ಯ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅಸ್ಪೃಶ್ಯ ಜಾತಿಗಳಿಗೆ ಉತ್ತಮ ಸ್ಥಾನಮಾನ, ಸಾಮಾಜಿಕ ಸ್ಥಾನಮಾನ ಇದುವರೆಗೂ ಸಿಕ್ಕಿಲ್ಲ. ಇದುವರೆಗೂ ನಾವು ಅವರನ್ನು ನಮ್ಮವರು ಎಂಬಂತೆ ಕಂಡಿಲ್ಲ.
ಅವರಿಗೆ ನಾವು ಸಾಮಾಜಿಕ ಸ್ಥಾನಮಾನ ನೀಡಿದಾಗ ಮಾತ್ರ ಸಮಾನತೆ ಸಾಧ್ಯ. ಅಲ್ಲಿಯವರೆಗೂ ಮೀಸಲಾತಿ ಅಗತ್ಯ ಎಂದರು.
ಒಳ ಮೀಸಲಾತಿ ಕೇಂದ್ರಕ್ಕೆ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ಟೀಕೆ ಮಾಡುವ ಪಾತ್ರವನ್ನು ಅಭಿನಯಿಸುತ್ತಿದ್ದಾರೆ, ಟೀಕೆ ಮಾಡಲಿ. ಸಿದ್ದರಾಮಯ್ಯನವರು ಆತ್ಮಸಾಕ್ಷಿಯಾಗಿ ಮಾತನಾಡಿರುವ ವಿಚಾರ ಅಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಹೇಳಿರುವ ಮಾತು. ಮುಸ್ಲಿಂ ಸಮುದಾಯಕ್ಕೆ ಒಳ್ಳೆಯದಾಗಿದೆ ಎಂದು ನಾವು ಭಾವಿಸಿದ್ದೇವೆ ಎಂದರು.
ನಾವು ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿದಾಗ ಇಡಬ್ಲ್ಯೂಎಸ್‌ನಲ್ಲಿ ಸ್ವಲ್ಪ ಕೋಟಾನಾ ಬಳಸಿಕೊಳ್ಳೋಣ ಅಂತಾ ಅನ್ಕೊಂಡಿದ್ವಿ. ಇಡಬ್ಲ್ಯೂಎಸ್‌ನಲ್ಲಿ 10% ಅನ್ನು ಸಂಪೂರ್ಣವಾಗಿ ಬಳಸಿಕೊಳ್ಳದೇ ಸ್ವಲ್ಪ ರೆಡ್ಯೂಸ್ ಮಾಡ್ತಿವಿ ಅಂತಾ ಭಾವಿಸಿದ್ದೆವು. ಆದರೆ ಕೇಂದ್ರ ಸರ್ಕಾರದವರು ಆ. ಶೇ. 10 ಅನ್ನು ಯಾವುದೇ ಕಾರಣಕ್ಕೂ ಟಚ್ ಮಾಡುವ ಹಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಹಾಗಾಗಿ ಅದನ್ನು ನಾವು ಟಚ್ ಮಾಡೋದಕ್ಕೆ ಆಗಲಿಲ್ಲ ಎಂದರು.
ದೇವಿ ಗುಡಿ ಪ್ರವೇಶಕ್ಕೆ ದಲಿತ ಕುಟುಂಬಕ್ಕೆ ನಿರಾಕರಿಸಿದ ಘಟನೆ ಬೆಳಕಿಗೆ
ಗದಗ (ಜ.25): ಉತ್ತರ ಕರ್ನಾಟಕದ ಗದಗ ಜಿಲ್ಲೆಯ ಶ್ಯಾಗೋಟಿ ಗ್ರಾಮದ ದ್ಯಾಮವ್ವ ದೇವಿ ಗುಡಿ ಪ್ರವೇಶಕ್ಕೆ ದಲಿತ ಕುಟುಂಬಕ್ಕೆ ನಿರಾಕರಿಸಿದ ಘಟನೆ ಬೆಳಕಿಗೆ ಬಂದಿದೆ. ಜ.26ರಂದು ಮಾದಿಗ ಸಮುದಾಯದ ಮದುವೆ ಇದ್ದು, ಇದರ ನಿಮಿತ್ತ ಮಂಗಳವಾರ ಊರಿನಲ್ಲಿರುವ ದ್ಯಾಮಮ್ಮ ಗುಡಿಗೆ ಹಾಲುಗಂಬ, ಹಸಿರುಗಂಬ ಪೂಜೆಗೆ ದಲಿತ ಕುಟುಂಬ ಹೋಗಿತ್ತು. ಆದರೆ, ಈ ಸಂದರ್ಭದಲ್ಲಿ ಊರಿನ ಇತರೆ ಸಮುದಾಯಗಳ ಮುಖಂಡರು ಗುಡಿಗೆ ಬೀಗ ಹಾಕುವ ಮೂಲಕ ದೇವಸ್ಥಾನ ಪ್ರವೇಶ ನಿಷೇಧಿಸಿ ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.
ಜ.21ರಂದು ಶ್ಯಾಗೋಟಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಗ್ರಾಮದಲ್ಲಿ ಇಂದಿಗೂ ಜೀವಂತವಾಗಿರುವ ಅಸ್ಪೃಶ್ಯತೆ ನಿವಾರಣೆಗೆ ಕ್ರಮವಹಿಸುವಂತೆ ಊರಿನ ಹಿರಿಯರು, ಯುವಕರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಅದಾದ ನಂತರ, ಗ್ರಾಮಕ್ಕೆ ಗದಗ ಪೊಲೀಸರು ಭೇಟಿ ನೀಡಿ ಊರಿನವರ ಸಮ್ಮುಖದಲ್ಲೇ ಮಾದಿಗ ಸಮುದಾಯದ ಜನರನ್ನು ಊರಿನ ದೇವಸ್ಥಾನಗಳಿಗೆ ಪ್ರವೇಶಾವಕಾಶ ಕಲ್ಪಿಸಿದ್ದರು. ಆಗ ಸುಮ್ಮನಿದ್ದ ಗ್ರಾಮಸ್ಥರು ಈಗ ಬೇಕಂತಲೇ ಗುಡಿಗೆ ಬೀಗ ಹಾಕಿಸಿ, ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಗದಗ ಡಾರ್ಕ್ ಮಾರ್ಕೆಟ್‌ಗೆ ಕೊನೆಗೂ ಬಂತು ಬೆಳಕು: ಇದು ಬಿಗ್-3 ಫಲಶ್ರುತಿ
ದಿನಸಿ ಅಂಗಡಿಗಳೂ ಬಂದ್: ಮದುವೆ ಸಂಬಂಧ ದಿನಸಿ ಖರೀದಿಗೆ ಹೋದರೆ ಆ ಅಂಗಡಿಗಳಿಗೂ ಬೀಗ ಹಾಕಿಸಿದ್ದಾರೆ. ಚಹಾದಂಗಡಿ, ಕ್ಷೌರದಂಗಡಿ ಎಲ್ಲಡೆಯೂ ನಮ್ಮನ್ನು ಅಸ್ಪೃಶ್ಯರನ್ನಾಗಿ ನೋಡಲಾಗುತ್ತಿದೆ. ನಮಗೆ ಏನಾದರೂ ಕೊಟ್ಟರೆ ದಂಡ ವಿಧಿಸುವುದಾಗಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಮಾದಾರ್ ಕುಟುಂಬ ಸದಸಯರು ಆರೋಪ ಮಾಡಿದರು. ಮದುವೆ ಸಂಬಂಧ ನಮ್ಮ ಪದ್ಧತಿ ಪ್ರಕಾರ ಅನೇಕ ಶಾಸ್ತ್ರಗಳನ್ನು ಮಾಡಬೇಕಾಗುತ್ತದೆ. ಇವತ್ತು ಹಾಲುಗಂಬ ಪೂಜೆ ಇತ್ತು. ಆದರೆ, ದ್ಯಾಮಮ್ಮನ ಗುಡಿಗೆ ಬೀಗ ಹಾಕಿದ್ದಾರೆ. ಬುಧವಾರ ಹನುಮಪ್ಪನಿಗೆ ಎಲೆಪೂಜೆ ಮಾಡಬೇಕಿದೆ. ನಾಳೆ ಆ ದೇವಸ್ಥಾನಕ್ಕೂ ಬೀಗ ಹಾಕಿಸಬಹುದು ಎಂದು ದಲಿತ ಯುವಕರು ಆಕ್ರೋಶ ವ್ಯಕ್ತಪಡಿಸಿದರು.