ಅಕಾಲಿಕ ಮಳೆ, ಗಾಳಿ: 1400 ಹೆಕ್ಟೇರ್‌ಕ್ಕೂ ಹೆಚ್ಚು ಬೆಳೆ ನಾಶ
ರೈತರು ಊಹಿಸದ ರೀತಿಯಲ್ಲಿ ಶುಕ್ರವಾರ ಸಂಜೆಯಿಂದ ಶನಿವಾರದ ಬೆಳಗಿನ ಜಾವದವರೆಗೂ ಸುರಿದ ಧಾರಕಾರ ಮಳೆಯಿಂದ ಸುರಪುರ ಮತಕ್ಷೇತ್ರದಲ್ಲಿ 1500 ಹೆಕ್ಟೇರ್ ಬೆಳೆ ನಾಶವಾಗಿದ್ದು, ಭತ್ತ ಇನ್ನೇನು ಕಟಾವಿಗೆ ಮಹೂರ್ತ ನಿಗದಿಯಾಗಿದ್ದಲೇ ಮಕಾಡೆ ಮಲಗಿರುವುದನ್ನು ನೋಡಿ ರೈತರು ಮಮ್ಮುಲ ಮರುಗುತ್ತಾ, ಸಾಲದ ಕೂಪಕ್ಕೆ ಒಳಗಾಗುತ್ತಿದ್ದಾನೆ.
ನಾಗರಾಜ್ ನ್ಯಾಮತಿ
ಸುರಪುರ (ನ.11) : ರೈತರು ಊಹಿಸದ ರೀತಿಯಲ್ಲಿ ಶುಕ್ರವಾರ ಸಂಜೆಯಿಂದ ಶನಿವಾರದ ಬೆಳಗಿನ ಜಾವದವರೆಗೂ ಸುರಿದ ಧಾರಕಾರ ಮಳೆಯಿಂದ ಸುರಪುರ ಮತಕ್ಷೇತ್ರದಲ್ಲಿ 1500 ಹೆಕ್ಟೇರ್ ಬೆಳೆ ನಾಶವಾಗಿದ್ದು, ಭತ್ತ ಇನ್ನೇನು ಕಟಾವಿಗೆ ಮಹೂರ್ತ ನಿಗದಿಯಾಗಿದ್ದಲೇ ಮಕಾಡೆ ಮಲಗಿರುವುದನ್ನು ನೋಡಿ ರೈತರು ಮಮ್ಮುಲ ಮರುಗುತ್ತಾ, ಸಾಲದ ಕೂಪಕ್ಕೆ ಒಳಗಾಗುತ್ತಿದ್ದಾನೆ.
ಮುಂಗಾರು ಮಳೆಯಿಂದ (Rain ) ಜರ್ಜರಿತವಾಗಿದ್ದ ರೈತ (Farmer ) ಸಮೂಹ ಹಿಂಗಾರಿನ ಬರ್ಬರ ವರುಣನ ಹೊಡೆತಕ್ಕೆ ನುಲುಗಿ ಹೋಗುತ್ತಿದ್ದಾನೆ. ಇದರಿಂದ ಸುರಪುರ ಮತಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಇಡೀ ರೈತವರ್ಗ ಅಪಾರ ಹಾನಿಗೊಳಗಾಗಿದೆ. 2022-23ನೇ ಸಾಲಿನಲ್ಲಿ ಅತಿವೃಷ್ಟಿಯ ಮುಷ್ಠಿಯಿಂದ ಬಚವಾಗದೇ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ.
ಗಾಳಿಗೆ ಹುಣಸಗಿ, ಅರೆಕೇರಾ ಕೆ, ವಜ್ಜಲ್, ಗೋನಾಲ, ಕಕ್ಕೇರಾ ಸೇರಿದಂತೆ ವಿವಿಧೆಡೆ ಭತ್ತ, ತೊಗರಿ, ಹತ್ತಿ ಮಕಾಡೆ ಮಲಗಿದರೆ ಮಳೆಯಿಂದ ಸುರಪುರ, ತಳವಾರಗೇರಾ, ಬೋನಾಳ, ಪೇಠಾ ಅಮ್ಮಾಪುರ, ಆಲ್ದಾಳ, ಮುಷ್ಠಳ್ಳಿ, ದೇವರಗೋನಾಲ, ವಾಗಣಗೇರಾ, ಮಂಗಿಹಾಳ, ಲಕ್ಷಿ ್ಮೕಪುರ, ಸತ್ಯಂಪೇಟೆ, ಕರ್ನಾಳ, ಹೆಮನೂರು ಸೇರಿದಂತೆ ವಿವಿಧೆಡೆ ಭತ್ತ ಒದ್ದು ಮಲಗಿದೆ.
ಸರ್ವೇ ಅಗತ್ಯ:
ಸುರಪುರ ಹೋಬಳಿಯಲ್ಲಿ 45 ಮಿಮೀ ಮಳೆಯಾಗಿದ್ದು, ಗಾಳಿ ಮತ್ತು ಮಳೆಗೆ ವಿವಿಧ ಬೆಳೆಗಳು ನೆಲಕ್ಕುರುಳಿವೆ. ಆದ್ದರಿಂದ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಮುಂಗಾರಿನಲ್ಲಿ ನಿರ್ಲಕ್ಷ ್ಯವಹಿಸಿದಂತೆ ಹಿಂಗಾರಿನಲ್ಲೂ ಅಲಕ್ಷ ್ಯತನ ತೋರದೆ ಮಿಂಚಿನಂತೆ ಸರ್ವೇ ಕಾರ್ಯ ಮಾಡಿ ರೈತಾಪಿ ವರ್ಗಕ್ಕೆ ನೆರವಾಗಬೇಕಿದೆ.
ನಮ್ಮ ಗೋಳೂ ಕೇಳುವವರಿಲ್ಲ:
ಭತ್ತದ ಗದ್ದೆಯಿಂದ ನೀರು ಐದು ದಿನವಾಗಿದೆ. 12ನೇ ತಾರೀಖಿನಂದು ಕವಳಿ ಮಿಷನ್‌ನವರು ಹೊಲಕ್ಕೆ ಬಂದು ಕಟಾವ್ ಮಾಡಲಿದ್ದರು. ಮುಂಗಡವಾಗಿ 2 ಸಾವಿರ ಅಡ್ವಾನ್ಸ್ ಕೊಟ್ಟು ಬಂದಿದ್ದೇನೆ. ನನ್ನಂತೆ ನನ್ನೂರಿನ ಕೆಲವ ರೈತರು ಮುಂಗಡವಾಗಿ ದಿನಾಂಕ ನಿಗದಿ ಮಾಡಿ ಹಣ ಕೊಟ್ಟಿದ್ದಾರೆ. ಧುತ್ ಸುರಿದ ಮಳೆಯಿಂದ ಹೊಲದಲ್ಲಿ ನಸುನಳಿಸುತ್ತಿದ್ದ ಭತ್ತ ಒಂದೇ ರಾತ್ರಿಯ ಮಳೆಗೆ ಮಕಾಡೆ ಮಲಗಿರುವುದು ನನ್ನ ಹೊಟ್ಟೆಉರಿಯುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ನಮ್ಮ ಪಾಡು ಕೇಳುವವರೇ ಇಲ್ಲದಂತಾಗಿದ್ದಾರೆ ಎಂದು ತಳವಾರಗೇರಾದ ಸಂಗಯ್ಯ ಸ್ವಾಮಿ, ಗುಡುದಪ್ಪ, ದೇವರಾಜ ಇತರೆ ರೈತರು ಗೋಳು ಕೇಳೋರೇ ಇಲ್ಲವಾಗಿದ್ದಾರೆ ಎಂದು ಅಳಲು ತೋಡಿಕೊಂಡರು.
ಭತ್ತಕ್ಕಿಲ್ಲ ಬೆಲೆ:
75 ಕೆಜಿ ಭತ್ತದ ಬೆಲೆ 1300 ರು.ಗಳು, 45 ಕೆಜಿ ಗೊಬ್ಬರದ ಬೆಲೆ 1550 ರು.ಗಳು, ಮಕ್ಕಳಂತೆ ಬೆಳೆ ಜೋಪಾನ ಮಾಡುವ ರೈತನ ಬೆವರಿಗೆ ಬೆಲೆಯಿಲ್ಲ. ಅದೇ ಕ್ರಿಮಿನಾಶಕಕ್ಕೆ ಅಂಗಡಿಯವರು ಕೇಳಿದಷ್ಟುದುಡ್ಡು ಕೊಟ್ಟು ತರಬೇಕು. ಕಂಪನಿಗಳಿಗೆ ಬೆಲೆ ನಿಗದಿ ಮಾಡುವ ಹಕ್ಕಿದೆ. ತಾನು ಬೆಳದ ಬೆಳೆಗೆ ರೈತನೇ ನಿಗದಿ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ. ಇದನ್ನು ಅರಿತು ಸರಕಾರ ಸಂಕಷ್ಟದಲ್ಲಿರುವ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಬೇಕು. ಗ್ರಾಮಕ್ಕೆ ಒಂದೆರಡರಂತೆ ರೈತರ ಧಾನ್ಯ ಸಂಗ್ರಹಿಸಲು ಸರಕಾರವೇ ಗೋಡೌನ್‌ಗಳನ್ನು ನಿರ್ಮಿಸಿಕೊಡಬೇಕು. ರೈತರ ಅಭಿವೃದ್ಧಿಗೆ ಜನಪ್ರತಿನಿಧಿಗಳು ಬೆಂಬಲವಾಗಿ ನಿಲ್ಲಬೇಕು ಎಂದು ದೇವಾಪುರ ರೈತ ಚನ್ನಪ್ಪಗೌಡ ಒತ್ತಾಯಿಸಿದ್ದಾರೆ.
ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ 1400ಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ. ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಬೆಳೆ ನಷ್ಟಹೊಂದಿದ ರೈತರಿಗೆ ಪರಿಹಾರ ದೊರಕಿಸಿಕೊಡಲು ಶಕ್ತಿಮೀರಿ ಪ್ರಯತ್ನಿಸಲಾಗುವುದು
- ಗುರುನಾಥ ಎಂ.ಬಿ., ಸಹಾಯಕ ಕೃಷಿ ನಿರ್ದೇಶಕ, ಸುರಪುರ.
---
ಮುಂಗಾರಿನಲ್ಲಿ ಬೆಳೆಹಾನಿಯಲ್ಲಿ ಸುರಪುರ ತಾಲೂಕಿಗೆ ಭಾರೀ ಮೋಸವಾಗಿದೆ. ಈಗ ಮತ್ತೇನಾದರೂ ಕಂದಾಯ ಮತ್ತು ಕೃಷಿ ಅಧಿಕಾರಿಗಳು ಹಿಂದಿನ ಹಾದಿ ತುಳಿದರೆ ಪ್ರತಿ ಇಲಾಖೆ ಮುಂದೆ ರೈತರ ತಂಡಗಳು ನಿತ್ಯ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಸುರಪುರ ಶಾಸಕರು ರೈತರ ಬೆಳೆ ಹಾನಿಯಾದ ಜಮೀನುಗಳಿಗೆ ಭೇಟಿ ನೀಡಬೇಕು
- ಹನುಮಂತ್ರಾಯ ಮಡಿವಾಳ, ರೈತ ಸಂಘದ ತಾಲೂಕು ಅಧ್ಯಕ್ಷ, ಸುರಪುರ.