ಶಿರಾ (ಡಿ.13):  ದೇಶದಲ್ಲಿ ಬಿಜೆಪಿ ಪಕ್ಷದ ವಿಜಯದ ತಂತ್ರವೆಂದರೆ ಅದು ಒಗ್ಗಟ್ಟಿನ ಮಂತ್ರ. ಆ ಮೂಲಕ ಪಕ್ಷದ ಅಭ್ಯರ್ಥಿಗಳು ಗೆಲುವನ್ನು ಸಾಧಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಈಗ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷದ ಬೆಂಬಲಿತ ಅಭ್ಯರ್ಥಿಯನ್ನು ಎಲ್ಲರೂ ಒಗ್ಗಟ್ಟಾಗಿ ಗೆಲ್ಲಿಸುವ ಮೂಲಕ ಗ್ರಾಪಂ ಚುನಾವಣೆಯಲ್ಲಿಯೂ ಸಹ ಬಿಜೆಪಿ ಪಕ್ಷದ ಶಕ್ತಿಯನ್ನು ಪ್ರದರ್ಶಿಸಬೇಕಿದೆ ಎಂದು ಶಾಸಕ ಡಾ.ಸಿ.ಎಂ. ರಾಜೇಶ್‌ಗೌಡ ತಿಳಿಸಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಏರ್ಪಡಿಸಿದ್ದ ಗ್ರಾಮ ಪಂಚಾಯಿತಿ ಚುನಾವಣೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತು ಕೊಟ್ಟಂತೆ ಚುನಾವಣೆ ಫಲಿತಾಂಶ ಬಂದ 20 ದಿನಗಳಲ್ಲಿ ಮದಲೂರು ಕೆರೆಗೆ ನೀರು ಹರಿಸಿದ್ದಾರೆ. ಭದ್ರ ಮೇಲ್ದಂಡೆ ಯೋಜನೆಯೂ ಸಹ ಈಗ ರಾಷ್ಟ್ರೀಯ ನೀರಾವರಿ ಯೋಜನೆಯಾಗಿದ್ದು, ಸುಮಾರು 950 ಕೋಟಿ. ರೂ. ವೆಚ್ಚದ ಕಾಮಗಾರಿಗೆ ಚಾಲನೆ ದೊರಕಿದೆ. ಈ ಯೋಜನೆಗೆ ಕೇಂದ್ರ ಸರಕಾರ ಶೇ. 60 ರಷ್ಟು, ರಾಜ್ಯ ಸರಕಾರ ಶೇ. 40 ರಷ್ಟುಅನುದಾನವನ್ನು ಒದಗಿಸುವ ಮೂಲಕ ಕಾಮಗಾರಿ ನಡೆಯುತ್ತದೆ. ಶಿರಾ ತಾಲೂಕಿನ 65 ಕೆರೆಗಳು ಇದರ ವ್ಯಾಪ್ತಿಗೆ ಒಳಪಟ್ಟಿದ್ದು, ಇನ್ನೂ 10 ರಿಂದ 15 ಕೆರೆಗಳನ್ನು ಸೇರಿಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದೇವೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಪಟ್ಟಿನೀಡಲು ಹೇಳಿದ್ದಾರೆ ಎಂದರು.

ರಾಜೀನಾಮೆ ನೀಡಿ 2 ವರ್ಷದ ಬಳಿಕೆ ಮತ್ತೆ ಬಿಜೆಪಿ ಸೇರಿದ ಹಿರಿಯ ರಾಜಕಾರಣಿ ..

ರಾಜ್ಯ ರೇಷ್ಮೆ ಉದ್ಯಮಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್‌.ಆರ್‌.ಗೌಡ ಮಾತನಾಡಿ, ಕಳೆದ ಎರಡು ತಿಂಗಳ ಹಿಂದೆ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಬಿಜೆಪಿಯ ಶಕ್ತಿ ಏನೆಂಬುದನ್ನು ತೋರಿಸಿದ್ದೀರಿ. ಅದೇ ರೀತಿಯಲ್ಲಿಯೇ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ ಬಿಜೆಪಿಯ ಶಕ್ತಿಯನ್ನು ಪ್ರದರ್ಶಿಸಬೇಕಿದೆ. ಬಿಜೆಪಿ ಪಕ್ಷದ ಎಲ್ಲಾ ಕಾರ್ಯಕರ್ತರೂ ಸಹ ಒಂದಾಗಿ ಗ್ರಾ.ಪಂ. ಅಭ್ಯರ್ಥಿಗಳನ್ನು ಗೆಲ್ಲಿಸಿ. ತಾಲೂಕಿನಲ್ಲಿ 42 ಗ್ರಾಪಂಗಳಿದ್ದು ಇದರಲ್ಲಿ 35 ಕ್ಕೂ ಹೆಚ್ಚು ಪಂಚಾಯಿತಿಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯಬೇಕು. ಗ್ರಾ.ಪಂ.ಗಳಿಗೆ ಅಭಿವೃದ್ಧಿಗಾಗಿ ಸುಮಾರು 2 ಕೋಟಿ ರು. ಹಣ ಬರುತ್ತದೆ. ಇದರಿಂದ ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ. ಆದ್ದರಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಭಿವೃದ್ಧಿಗೆ ಕೈ ಜೋಡಿಸಿ ಎಂದರು.

ವಿಧಾನಪರಿಷತ್‌ ಸದಸ್ಯ ಚಿದಾನಂದ್‌ ಎಂ.ಗೌಡ ಮಾತನಾಡಿ, ಕಳೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಮೂಲಕ ಶಿರಾ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಗ್ರಾಪಂ ಚುನಾವಣೆಯಲ್ಲಿಯೂ ಸಹ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ಮೂಲಕ ಅದು ಮುಂದುವರೆಯಬೇಕು ಹಾಗೂ ಪಕ್ಷ ತಳಮಟ್ಟದಲ್ಲಿ ಗಟ್ಟಿಯಾಗಬೇಕು ಎಂದರು.