ಹುಬ್ಬಳ್ಳಿ(ಡಿ.18): ಈ ಭಾಗದ ಬಹುವರ್ಷಗಳ ಬೇಡಿಕೆಯಾದ ಆರ್‌ಆರ್‌ಬಿ (ರೈಲ್ವೆ ನೇಮಕಾತಿ ಮಂಡಳಿ) ಉಪಕಾರ್ಯಾಲಯಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಇಲ್ಲಿನ ಕಚೇರಿ ಈ ಭಾಗದ ಜನರಿಗೆ ರೈಲ್ವೆ ನೇಮಕಾತಿ ವಿಷಯದಲ್ಲಿ ಯುವ ಸಮೂಹಕ್ಕೆ ಅಗತ್ಯ ಸಲಹೆ ಸೂಚನೆ ನೀಡಲಿದೆ.

ನಗರದ ಹಳೆಯ ಜಿಎಂ ಕಚೇರಿ ಆವರಣದಲ್ಲಿ ಕಾರ್ಯನಿರ್ವಹಿಸಲಿರುವ ಕಚೇರಿಯ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ಈ ಭಾಗದ ಬಹುವರ್ಷಗಳ ಬೇಡಿಕೆಯಾಗಿತ್ತು. ಅದರಂತೆ ಈ ಸಂಬಂಧ ನವೆಂಬರ್‌ನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಉಪಕಾರ್ಯಾಲಯವನ್ನು ಇಲ್ಲಿಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದ್ದಾರೆ.

ಸದ್ಯ ಆನ್‌ಲೈನ್‌ನಲ್ಲೇ ಎಲ್ಲ ಪರೀಕ್ಷೆಗಳು ನಡೆಯುತ್ತವೆ. ಹೀಗಾಗಿ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ. ಪಾರದರ್ಶಕವಾಗಿಯೇ ಎಲ್ಲ ನೇಮಕಾತಿಗಳು ನಡೆಯುತ್ತವೆ. ಇದರ ಸದುಪಯೋಗವನ್ನು ಯುವ ಸಮೂಹ ತೆಗೆದುಕೊಳ್ಳಬೇಕೆಂದರು. ಬೆಂಗಳೂರಿನ ಕಚೇರಿಯಲ್ಲಿ ಯಾವೆಲ್ಲ ಸೌಲಭ್ಯಗಳು ಲಭ್ಯವಾಗುತ್ತವೆಯೋ ಅವೆಲ್ಲವೂ ಈ ಕಚೇರಿಯಲ್ಲೂ ಲಭ್ಯವಾಗುತ್ತವೆ ಎಂದರು.

ಈ ಕಚೇರಿ ಸ್ಥಾಪನೆಯಿಂದ ದೂರದ ಬೆಂಗಳೂರಿಗೆ ಹೋಗಿ ನೇಮಕಾತಿ ಕುರಿತು ಮಾಹಿತಿ ಕೇಳುವ ಪರಿಸ್ಥಿತಿ ಇನ್ನು ಮೇಲೆ ಬರಲ್ಲ. ಇದರಿಂದ ಅಭ್ಯರ್ಥಿಗಳ ಸಮಯ ಹಾಗೂ ಹಣ ಎರಡೂ ಉಳಿತಾಯವಾಗುತ್ತದೆ ಎಂದರು.
ಕಿತ್ತೂರು ಮಾರ್ಗವಾಗಿ ಧಾರವಾಡ- ಬೆಳಗಾವಿ ರೈಲು ಮಾರ್ಗ ಪ್ರಾರಂಭಿಸುವ ಕುರಿತು ಪ್ರಕ್ರಿಯೆಗಳು ಪ್ರಾರಂಭವಾಗಿವೆ. ಆದಷ್ಟು ಶೀಘ್ರದಲ್ಲೇ ಸಿಹಿ ಸುದ್ದಿ ನೀಡುತ್ತೇವೆ ಎಂದ ಅವರು, ಕಿತ್ತೂರಲ್ಲಿ ಎಕ್ಸ್‌ಪೋರ್ಟ್‌ ಝೋನ್‌ ಮಾಡಲು ನಿರ್ಧರಿಸಲಾಗಿದೆ. ಇದರಿಂದ ರೈಲ್ವೆ ಬಿಡಿಭಾಗಗಳನ್ನು ಇಲ್ಲಿಂದ ಖರೀದಿಸಬಹುದಾಗಿದೆ. ಇಲ್ಲಿ ಬಿಡಿಭಾಗಗಳ ತಯಾರಿಕೆಗೆ ಮುಂದೆ ಬರುವ ಸಣ್ಣ ಕೈಗಾರಿಕೆಗಳಿಗೆ ಸಬ್ಸಿಡಿ ಕೂಡ ನೀಡಲಾಗುವುದು ಎಂದರು.

ಹುಬ್ಬಳ್ಳಿ-ಧಾರವಾಡ- ಬೆಳಗಾವಿ ಮೂರು ತ್ರಿವಳಿನಗರದ ಅಭಿವೃದ್ಧಿಗೆ ಏನು ಬೇಕೋ ಆ ಕೆಲಸವನ್ನು ಮಾಡುತ್ತೇವೆ. ಈ ಮೂರು ನಗರಗಳ ಅಭಿವೃದ್ಧಿಯೊಂದಿಗೆ ಕೈಗಾರಿಕಾ ಕಾರಿಡಾರ್‌ರಂತೆ ಮಾಡಲಾಗುವುದು ಎಂದರು.
ಉಪಕಾರ್ಯಾಲಯವನ್ನು ಲೋಕಾರ್ಪಣೆಗೊಳಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ರೂಪಿಸಿದೆ. ರೈಲ್ವೆ ಮೂಲ ಸೌಕರ್ಯಕ್ಕಾಗಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮುಂದಿನ ಹತ್ತು ವರ್ಷಗಳಲ್ಲಿ 50 ಲಕ್ಷ ಕೋಟಿ ರು. ಖರ್ಚು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.

ಬಿಜೆಪಿಗೂ ಮುನ್ನ ಆಡಳಿತ ನಡೆಸಿದ್ದ ಸರ್ಕಾರಗಳು ಕೇವಲ 2.3 ಲಕ್ಷ ಕೋಟಿ ರು. ರೈಲ್ವೆ ಮೂಲ ಸೌಕರ್ಯಕ್ಕೆ ವಿನಯೋಗಿಸುತ್ತಿದ್ದವು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಅವಧಿಯಲ್ಲಿ 4 ಲಕ್ಷ ಕೋಟಿ ರು. ಹೂಡಿಕೆ ಮಾಡಿದೆ ಎಂದರು.

ಸಚಿವ ಜಗದೀಶ ಶೆಟ್ಟರ ಮಾತನಾಡಿ, ಕೈಗಾರಿಕೋದ್ಯಮಿಗಳು ರಫ್ತು ಮಾಡಲು ಮಂಗಳೂರು, ಗೋವಾ, ಮುಂಬೈ ಅವಲಂಬಿಸಬೇಕಾದ ಅನಿವಾರ್ಯತೆಯಿದೆ. ಬೇಲಿಕೇರಿ ಬಂದರು ಅಭಿವೃದ್ಧಿ ಜೊತೆಗೆ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಕಾರ್ಯಾರಂಭದಿಂದ ರಫ್ತಿಗೆ ಬೇರೆ ಪ್ರದೇಶ ಅವಲಂಬಿಸುವ ಅನಿವಾರ್ಯತೆ ದೂರವಾಗಲಿದೆ. ಬೇಲಿಕೇರಿ ಬಂದರು ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಇದಕ್ಕೆ ರಾಜ್ಯ ಸರ್ಕಾರವೂ ಕೈ ಜೋಡಿಸಲಿದೆ ಎಂದರು.
ಈ ಸಂದರ್ಭದಲ್ಲಿ ನೈರುತ್ಯ ರೈಲ್ವೆ ವಲಯ ಮಹಾಪ್ರಭಂದಕ ಅಜಯಕುಮಾರಸಿಂಗ್‌, ರೈಲ್ವೆ ನೇಮಕಾತಿ ಮಂಡಳಿಯ ಕಾಶಿ ವಿಶ್ವನಾಥ, ಶಾಸಕ ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ ಸೇರಿದಂತೆ ಮತ್ತಿತರರು ಇದ್ದರು.

ಕೌಶಲ್ಯ ವೃದ್ಧಿಸಿಕೊಳ್ಳಿ: ಅಂಗಡಿ

ರೈಲ್ವೆ ಇಲಾಖೆಯಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ನೇಮಕವಾಗಲ್ಲ. ಇದಕ್ಕೆ ಕಾರಣ ಹೊರರಾಜ್ಯದವರು ಹತ್ತತ್ತು ಬಾರಿ ಪರೀಕ್ಷೆ ಬರೆದು ಯಶಸ್ಸು ಗಳಿಸುತ್ತಾರೆ. ಆದರೆ ನಮ್ಮವರು ಒಂದೆರಡು ಬಾರಿ ಪರೀಕ್ಷೆ ಫೇಲ್‌ ಆದರೆ ಮುಗಿತು. ಇದು ಆಗಲ್ಲ ಎಂಬ ಮನೋಭಾವದಿಂದ ಮತ್ತೆ ಪ್ರಯತ್ನ ಮಾಡಲ್ಲ. ಹಾಗೆ ಮಾಡದೇ ತರಬೇತಿ ಪಡೆದು ಯಶಸ್ಸು ಸಿಗುವವರೆಗೂ ನಿರಂತರ ಪ್ರಯತ್ನ ಮಾಡಬೇಕು. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಆರ್‌ಆರ್‌ಬಿ ಉಪಕಚೇರಿಯನ್ನು ಪ್ರಾರಂಭಿಸಲಾಗಿದೆ. ಇದರ ಸದುಪಯೋಗ ಯುವಸಮೂಹ ಪಡೆದುಕೊಳ್ಳಬೇಕೆಂದು ಸಚಿವ ಸುರೇಶ ಅಂಗಡಿ ಸಲಹೆ ಮಾಡಿದರು.