Asianet Suvarna News

ರಕ್ಷಣಾ ಉತ್ಪಾದನೆ ಸ್ವಾವಲಂಬನೆ, ನೌಕಾಪಡೆ ಇನ್ನಷ್ಟು ಬಲಿಷ್ಠ: ರಾಜನಾಥ್‌ ಸಿಂಗ್‌

* ಕೋವಿಡ್‌-19 ವಿರುದ್ಧ ಹೋರಾಟದಲ್ಲಿ ನೌಕಾಪಡೆ ಕಾರ್ಯಕ್ಕೆ ರಾಜನಾಥ್‌ ಸಿಂಗ್‌ ಶ್ಲಾಘನೆ
* ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಉತ್ತೇಜಿಸಲು ಸರ್ಕಾರ ಕೈಗೊಂಡ ಹಲವು ಕ್ರಮ
* ಕೇಂದ್ರ ಸರ್ಕಾರ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ದಣಿವರಿಯದೆ ಕೆಲಸ ಮಾಡಿದೆ 

Union Minister Rajnath Singh Visits Karwar Seabird grg
Author
Bengaluru, First Published Jun 25, 2021, 11:10 AM IST
  • Facebook
  • Twitter
  • Whatsapp

ಕಾರವಾರ(ಜೂ.25): ಭಾರತೀಯ ನೌಕಾಪಡೆ ಕೋವಿಡ್‌ -19 ಸಂದರ್ಭದಲ್ಲಿ ದೇಶಕ್ಕೆ ಮಾತ್ರವಲ್ಲ, ವಿಶ್ವದ ಇತರ ರಾಷ್ಟ್ರಗಳಿಗೆ ಮಾನವೀಯ ನೆರವು ನೀಡಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶ್ಲಾಘಿಸಿದ್ದಾರೆ. 

ಗುರುವಾರ ಕಾರವಾರದ ಐಎನ್‌ಎಸ್‌ ಕದಂಬ ನೌಕಾನೆಲೆಗೆ ಆಗಮಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಬೇರೆ ಬೇರೆ ದೇಶಗಳಲ್ಲಿ ಇದ್ದ ಭಾರತೀಯ ಪ್ರಜೆಗಳನ್ನು ರಕ್ಷಿಸಿ ಕರೆತಂದರು. ವಿವಿಧ ದೇಶಗಳಿಂದ ಆಮ್ಲಜನಕದ ಸಿಲೆಂಡರ್‌ಗಳು ಸೇರಿದಂತೆ ಇತರ ವಸ್ತುಗಳನ್ನು ದೇಶಕ್ಕೆ ತಂದು ಕೋವಿಡ್‌ ವಿರುದ್ಧದ ಹೋರಾಟದಲ್ಲಿ ದಣಿವರಿಯದೆ ಕೆಲಸ ಮಾಡಿದೆ. ವಿವಿಧ ದೇಶಗಳಿಗೂ ನೆರವು ನೀಡಿದೆ ಎಂದು ಶ್ಲಾಘಿಸಿದ್ದಾರೆ. 

ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಉತ್ತೇಜಿಸಲು ಸರ್ಕಾರ ಕೈಗೊಂಡ ಹಲವು ಕ್ರಮಗಳನ್ನು ಅವರು ವಿವರಿಸಿದರು. ಕಳೆದ 5 ವರ್ಷಗಳಲ್ಲಿ ನೌಕಾಪಡೆಯ ಆಧುನೀಕರಣಕ್ಕಾಗಿ ಬಜೆಟ್‌ನ ಮೂರನೇ ಎರಡರಷ್ಟು ಹಣ ಖರ್ಚು ಮಾಡಲಾಗಿದೆ. ನೌಕಾಪಡೆಯ ಆತ್ಮ ನಿರ್ಭರ ಭಾರತ್‌ ಬಗ್ಗೆ ಶ್ಲಾಘಿಸಿದ ಅವರು 48 ಹಡಗುಗಳು ಹಾಗೂ 46 ಜಲಾಂತರ್ಗಾಮಿ ನೌಕೆಗಳನ್ನು ಸ್ಥಳೀಯವಾಗಿ ನಿರ್ಮಿಸಲಾಗುತ್ತಿದೆ. ವಿಮಾನವಾಹಕ ಯುದ್ಧ ನೌಕೆ ವಿಕ್ರಾಂತ್‌ ನೌಕಾಪಡೆಯ ಸ್ವಾವಲಂಬನೆಗೆ ಉತ್ತಮ ಉದಾಹರಣೆಯಾಗಿದೆ ಎಂದರು.

ಸಚಿವ ರಾಜನಾಥ್ ಸಿಂಗ್‌ಗೆ ಡಿಸಿಎಂ ಪತ್ರ: ಮಹತ್ವದ ಬೇಡಿಕೆ ಇಟ್ಟ ಸವದಿ

ಮುಂಬರುವ ವರ್ಷಗಳಲ್ಲಿ ಭಾರತೀಯ ನೌಕಾಪಡೆ ವಿಶ್ವದ ಅಗ್ರ ಮೂರು ನೌಕಾಪಡೆಗಳಲ್ಲಿ ಒಂದಾಗಲಿದೆ ಮತ್ತು ರಾಷ್ಟ್ರವನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನೌಕಾಪಡೆ ದೇಶವನ್ನು ರಕ್ಷಿಸುವ ತನ್ನ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸುತ್ತಿದೆ. ದೇಶದ 7.500 ಕಿ.ಮೀ.ಗಿಂತಲೂ ಹೆಚ್ಚು ಉದ್ದದ ಕಡಲತೀರ, 1300 ದ್ವೀಪಗಳು ಮತ್ತು ಚ.ಕೀ.ಮೀ. ವಿಶೇಷ ಆರ್ಥಿಕ ವಲಯದ ರಕ್ಷಣೆ, ಅಭಿವೃದ್ಧಿಯಲ್ಲಿ ನೌಕಾಪಡೆ ನಿರ್ಣಾಯಕ ಪಾತ್ರವಹಿಸುತ್ತಿದೆ ಎಂದರು.

ನೌಕಾಪಡೆ ನಮ್ಮ ದೇಶದ ಭದ್ರತೆ ಹಾಗೂ ಬೆಳವಣಿಗೆ ಬಗ್ಗೆ ಸೇವೆ ಸಲ್ಲಿಸುತ್ತಿದೆಯಲ್ಲದೆ ನೆರೆಹೊರೆಯ ದೇಶಗಳೊಂದಿಗೆ ಭಾರತದ ಸಂಬಂಧವನ್ನು ನಿರಂತರವಾಗಿ ಬಲಪಡಿಸುತ್ತಿದೆ. 1961ರ ಗೋವಾ ವಿಮೋಚನಾ ಯುದ್ಧ ಮತ್ತು 1971ರ ಇಂಡೋ ಪಾಕ್‌ ಯುದ್ಧದ ಸಮಯದಲ್ಲಿ ಭಾರತೀಯ ನೌಕಾಪಡೆಯ ಪಾತ್ರವನ್ನು ಅವರು ಶ್ಲಾಘಿಸಿದರು. ಕಡಲ ಮತ್ತು ರಾಷ್ಟ್ರೀಯ ಭದ್ರತೆಗೆ ಅಮೂಲ್ಯವಾದ ಕೊಡುಗೆ ನೀಡುತ್ತಿರುವ ನೌಕಾಪಡೆಯ ಬಗ್ಗೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಮೆಚ್ಚುಗೆ ವ್ಯಕ್ತಪಡಿಸಿದರು.
 

Follow Us:
Download App:
  • android
  • ios