‘ರಾಹುಲ್ ಗಾಂಧಿ ಪಾರ್ಟ್ ಟೈಮ್ ರಾಜಕಾರಣಿ, ಅವರ ಬಗ್ಗೆ ಕನಿಕರ ಮೂಡುತ್ತಿದೆ’
ದೇಶದಲ್ಲಿ ಮಹಿಳೆಯರ ಮೇಲೆ ನಡೆವ ದೌರ್ಜನ್ಯದ ಪ್ರಕರಣಗಳನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿಲ್ಲ| ರಾಹುಲ್ ಗಾಂಧಿ ರೇಪ್ ಇನ್ ಇಂಡಿಯಾ ಅಂತಾ ಹೇಳಿಕೆ ನೀಡಿದ್ದಾರೆ| ರಾಹುಲ್ ಗಾಂಧಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ|ಪೌರತ್ವ ಮಸೂದೆ ಜಾರಿ ಬಗ್ಗೆ ಅನಗತ್ಯ ಗೊಂದಲ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ|
ರಾಯಚೂರು [ಡಿ.14]: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಾರ್ಟ್ ಟೈಮ್ ರಾಜಕಾರಣಿ. ಅವರ ಬಗ್ಗೆ ಕನಿಕರ ಮೂಡುತ್ತಿದೆ. ರೇಪ್ ಇನ್ ಇಂಡಿಯಾ ಎಂದು ಅವರು ಹೇಳಿಕೆ ನೀಡಿರುವುದು ಅವರ ಮನಸ್ಥಿತಿ ಬಯಲುಗೊಳಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮಹಿಳೆಯರ ಮೇಲೆ ನಡೆವ ದೌರ್ಜನ್ಯದ ಪ್ರಕರಣಗಳನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗೇ ಆ ಪಕ್ಷದ ನಾಯಕ ರಾಹುಲ್ ಗಾಂಧಿ ರೇಪ್ ಇನ್ ಇಂಡಿಯಾ ಅಂತಾ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪೌರತ್ವ ಮಸೂದೆ ಜಾರಿ ಬಗ್ಗೆ ಅನಗತ್ಯ ಗೊಂದಲ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಡಿಸೆಂಬರ್ 2014 ರ ವರೆಗೆ ದೇಶದೊಳಗೆ ವಲಸೆ ಬಂದವರಿಗೆ ದೇಶದ ನಾಗರಿಕರೆಂದು ಖಾತರಿ ಪಡಿಸುವುದು ಕೇಂದ್ರದ ಉದ್ದೇಶವಾಗಿದೆ.
ಪೌರತ್ವ ಮಸೂದೆ ಜಾರಿ ಮೂಲಕ ಸೌಲಭ್ಯಗಳನ್ನು ಹೆಚ್ಚಿಸುವುದು ಉದ್ದೇಶವಾಗಿದೆ. ಆದರೆ ಈ ಬಗ್ಗೆ ತಪ್ಪು ಕಲ್ಪನೆ ಬಿತ್ತುವ ಕಾರ್ಯ ಕೆಲ ಪಕ್ಷಗಳು ಮಾಡುತ್ತಿವೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪಕ್ಷಗಳ ನಾಯಕರು ಪೌರತ್ವ ವಿರೋಧಿ ಹೋರಾಟ ಮಾಡುತ್ತಿವೆ ಎಂದು ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.
ಕೇಂದ್ರ ಸರಕಾರ ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿ ರಾಜ್ಯಕ್ಕೆ ಯಾವುದೇ ಅನ್ಯಾಯ ಮಾಡಿಲ್ಲ. ಮಳೆ ಮತ್ತು ಪ್ರವಾಹದ ಕಾರಣಕ್ಕೆ ಕಲ್ಲಿದ್ದಲು ಉತ್ಪಾದನೆ ಶೇ.5 ರಷ್ಟು ಕುಸಿತ ಕಂಡಿದೆ. ಮುಂದಿನ ಬೇಸಿಗೆಯಲ್ಲಿ ಕಲ್ಲಿದ್ದಲು ಕೊರತೆಯಾಗದಂತೆn ಈಗಿನಿಂದಲೇ ಆಯಾ ರಾಜ್ಯಗಳು ಕಲ್ಲಿದ್ದಲು ಸಂಗ್ರಹಣೆ ಹೆಚ್ಚಿಸಿಕೊಳ್ಳಬೇಕು. ವಿದೇಶದಿಂದ ಕಲ್ಲಿದ್ದಲು ಆಮದಿಗೆ ಶೀಘ್ರ ಕಡಿವಾಣ ಹಾಕಲಾಗುವುದು. ಸ್ಥಳೀಯವಾಗಿಯೇ ಸಾಕಷ್ಟು ಕಲ್ಲಿದ್ದಲು ಲಭ್ಯವಿದೆ. ಕರ್ನಾಟಕ ರಾಜ್ಯಕ್ಕೆ ನೀಡಿದ್ದ ಕಲ್ಲಿದ್ದಲು ಗಣಿ ಸಂಬಂಧಿಸಿ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಅದರ ಇತ್ಯರ್ಥಕ್ಕೆ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ.