ಹುಬ್ಬಳ್ಳಿ(ಡಿ.03):  2018ರಿಂದ ನನೆಗುದಿಗೆ ಬಿದ್ದಿದ್ದ ದೋಣಿಮಲೈನ ‘ರಾಷ್ಟ್ರೀಯ ಖನಿಜ ನಿಗಮ’ಕ್ಕೆ ಕಬ್ಬಿಣದ ಅದಿರು ಗಣಿಗಾರಿಕೆ ಮಧ್ಯಂತರ ವ್ಯವಸ್ಥೆ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೋಣಿಮಲೈಯ 597.54 ಹೆಕ್ಟೇರ್‌ ಪ್ರದೇಶದಲ್ಲಿ ಕೂಡಲೇ ಗಣಿಗಾರಿಕೆ ಆರಂಭವಾಗಲಿದೆ ಎಂದು ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಆಗಸ್ಟ್‌ ತಿಂಗಳಲ್ಲಿ ಬೆಂಗಳೂರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದೆ. ದೋಣಿಮಲೈ ಕಬ್ಬಿಣ ಅದಿರು ಗಣಿಗಾರಿಕೆ ಕುರಿತು ಚರ್ಚಿಸಿದ್ದೆ. ಈ ಯೋಜನೆಯಿಂದ ಈ ಹಣಕಾಸಿನ ವರ್ಷದಲ್ಲೇ ರಾಜ್ಯಕ್ಕೆ ಸುಮಾರು . 400 ಕೋಟಿ ಆದಾಯವಾಗುವ ನಿರೀಕ್ಷೆ ಇದೆ. ಒಟ್ಟಾರೆ ಎನ್‌ಎಂಡಿಸಿ ದೋಣಿಮಲೈನಲ್ಲಿ ಗಣಿಗಾರಿಕೆ ಪ್ರಾರಂಭವಾಗುವುದರಿಂದ ರಾಜ್ಯಕ್ಕೆ ಪ್ರತಿವರ್ಷ 1,100 ಕೋಟಿಯಷ್ಟು ಆದಾಯ ಬರಲಿದೆ. ಈ ಗಣಿಗಾರಿಕೆಯಿಂದ ಸಾವಿರಾರು ಜನರಿಗೆ ಉದ್ಯೋಗವಕಾಶ ಒದಗಲಿದ್ದು, ಸ್ಥಳೀಯವಾಗಿ ಮತ್ತು ಸುತ್ತಮುತ್ತಲಿನ ವಾಣಿಜ್ಯ ವಹಿವಾಟಿಗೆ ಪೂರಕವಾಗಲಿದೆ ಎಂದು ವಿವರಿಸಿದ್ದಾರೆ.

ಮೋದಿ ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು: ಹುಬ್ಬಳ್ಳಿಯಲ್ಲಿ ಬೃಹತ್‌ ಪ್ರತಿಭಟನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2030-31ರ ಒಳಗೆ 300 ಎಂಟಿಪಿಎ ಕಬ್ಬಿಣದ ಅದಿರು ಉತ್ಪಾದನೆ ಮಾಡುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಕೇಂದ್ರ ಗಣಿ ಸಚಿವಾಲಯದಿಂದ ದಿಟ್ಟ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ. ದೋಣಿಮಲೈ ಕಬ್ಬಿಣದ ಅದಿರು ಗಣಿಗಾರಿಕೆಯಿಂದ ರಾಷ್ಟ್ರ ಮತ್ತು ರಾಜ್ಯ ಎರಡಕ್ಕೂ ಲಾಭವಾಗಲಿದೆ. ರಾಜ್ಯ ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿರುವುದನ್ನು ಸ್ವಾಗತಿಸುತ್ತೇನೆ ಎಂದಿರುವ ಸಚಿವ ಜೋಶಿ ಅವರು, ಈ ಸಂಬಂಧ ಟ್ವೀಟ್‌ ಮಾಡಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ರಾಜ್ಯ ಗಣಿ ಸಚಿವ ಸಿ.ಸಿ. ಪಾಟೀಲ ಅವರನ್ನು ಅಭಿನಂದಿಸಿದ್ದಾರೆ.