ಹುಬ್ಬಳ್ಳಿ(ಡಿ.27): ಹಣಬಲ, ತೋಳ್ಬಲ ನಂಬುವ ಪಕ್ಷದ ಭವಿಷ್ಯ ಹೇಗಿರಲಿದೆ ಎಂಬುದಕ್ಕೆ ಕಾಂಗ್ರೆಸ್‌ ಉದಾಹರಣೆಯಾದರೆ, ಅಪ್ಪ ನಾಯಕನಾಗಿದ್ದಾನೆ, ನಾನು ಟ್ರೈ ಮಾಡ್ತೇನೆ ಎಂದು ರಾಜಕೀಯಕ್ಕೆ ಬಂದರೆ ಏನಾಗುತ್ತದೆ ಎಂಬುದಕ್ಕೆ ಜೆಡಿಎಸ್‌ ಉದಾಹರಣೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದ್ದಾರೆ. ನಗರದ ಮೂರುಸಾವಿರ ಮಠ ಸಭಾಭವನದಲ್ಲಿ ಶನಿವಾರ ಪೂರ್ವ ವಿಧಾನಸಭಾ ಕ್ಷೇತ್ರದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಧರ್ಮದ ತಳಹದಿಯ ಮೇಲೆ ಸ್ಥಾಪಿತವಾದ ಪಕ್ಷ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಹಿಂದೂ ಧರ್ಮದ ಸಿದ್ಧಾಂತದ ಬಿಜೆಪಿಯನ್ನು ಜನರು ಒಪ್ಪಿದ್ದಾರೆ. ಆದರೆ, ಅಧಿಕಾರ, ತೋಳ್ಬಲವನ್ನು ನಂಬಿರುವ ಕಾಂಗ್ರೆಸ್‌ ಹಾಗೂ ಕುಟುಂಬ ರಾಜಕಾರಣ ಜೆಡಿಎಸ್‌ ಪರಿಸ್ಥಿತಿ ಹೇಗಿದೆ ಎಂಬುದು ಇಂದು ಎಲ್ಲರಿಗೂ ತಿಳಿದ ವಿಚಾರ ಎಂದರು.

ತತ್ವ ಸಿದ್ಧಾಂತಗಳ ಆಧಾರದ ಮೇಲೆ ಸ್ಥಾಪಿವಾಗಿದ್ದು, ಬಿಜೆಪಿ ಹಾಗೂ ಕಮ್ಯೂನಿಸ್ಟ್‌ ಪಕ್ಷಗಳು ಮಾತ್ರ. ಆದರೆ, ಕಮ್ಯೂನಿಸ್ಟ್‌ ತತ್ವವನ್ನು ಜನ ಎಂದೋ ತಿರಸ್ಕರಿಸಿಬಿಟ್ಟಿದ್ದಾರೆ. ಭಾರತ ಮಾತ್ರವಲ್ಲ, ಯಾವ ರಾಷ್ಟ್ರದಲ್ಲೂ ಇಂದು ಕಮ್ಯೂನಿಸಂ ಇಲ್ಲ. ಬಿಜೆಪಿ ತನ್ನ ವೈಚಾರಿಕತೆಯ ವೈಶಿಷ್ಟ್ಯತೆಯಿಂದಾಗಿ ಶಾಶ್ವತವಾಗಿ ಉಳಿದಿದೆ ಎಂದರು.

'ಬಿಎಸ್‌ವೈ ಮೇಲೆ ಋುಣಭಾರ ಬಹಳಷ್ಟಿದೆ, ಮೀಸಲಾತಿ ಕೊಡಬೇಕು'

ಇನ್ನು ಮುಂಬರುವ ಮಹಾನಗರ ಪಾಲಿಕೆ ಚುನಾವಣೆಗೆ ಈಗಲೆ ಸಿದ್ಧರಾಗಬೇಕಿದೆ. ಈ ಬಾರಿಯೂ ಚುನಾವಣೆ ಗೆಲ್ಲುವ ಅವಕಾಶ ನಮಗಿದ್ದು, ಪ್ರತಿ ಬೂತ್‌ನಲ್ಲಿ ಕಾರ್ಯಕರ್ತರು ಹೊಣೆ ನಿಭಾಯಿಸಬೇಕು ಎಂದರು. ಜಿಲ್ಲಾ ಬಿಜೆಪಿ ಅಧ್ಯಕ್ಷ, ಶಾಸಕ ಅರವಿಂದ ಬೆಲ್ಲದ, ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರು ಸಕ್ರಿಯರಾಗಬೇಕು ಎಂದರು.

ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಪೂರ್ವ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಪ್ರಭು ನವಲಗುಂದ ಮಠ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಹುಡಾ ಅಧ್ಯಕ್ಷ ನಾಗೇಶ ಕಲಭುರ್ಗಿ, ಜಯತೀರ್ಥ ಕಟ್ಟಿ, ಸತೀಶ ಶೇಜವಾಡಕರ, ಡಿ.ಕೆ. ಚವ್ಹಾಣ ಇತರರಿದ್ದರು.