ಹಾವೇರಿ(ನ.30): ಉಪಚುನಾವಣೆಯಲ್ಲಿ ಕನಿಷ್ಠ 12 ಸ್ಥಾನ ಗೆಲ್ಲುತ್ತೇವೆ. ಆ ಮೂಲಕ ಸುಸ್ಥಿತ ಸರಕಾರಕ್ಕೆ ನಾಂದಿಯಾಗಲಿದೆ. ರಾಜ್ಯದಲ್ಲಿ ಮುಂದಿನ ಮೂರೂವರೆ ವರ್ಷ ಸುಸ್ಥಿರ ಸರಕಾರವಿರುತ್ತದೆ. ಗೊಂದಲ ರಹಿತವಾದ ಸರಕಾರವಿರುತ್ತೆ. ಇದು ಗೊಂದಲಯುಕ್ತ ಸರಕಾರ ಬೇಕೋ ಅನ್ನೋದು ಗೊತ್ತಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹೇಳಿದ್ದಾರೆ.

ಶನಿವಾರ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ ಮೈತ್ರಿ ಸರಕಾರವನ್ನು ಬಿಜೆಪಿಯನ್ನು ದೂರವಿಡಲು ರಚಿಸಲಾಗಿತ್ತು. ಜಿಲ್ಲೆಯಲ್ಲಿನ ಎರಡೂ ಕ್ಷೇತ್ರಗಳನ್ನು ಗೆಲ್ಲಿಸಲು ಮತದಾರಲ್ಲಿ ಮನವಿ ಮಾಡಿದ್ದಾರೆ. 

ಕೇಂದ್ರ ಸರಕಾರದ ಯೋಜನೆಗಳು ಜನರನ್ನು ತಲುಪಬೇಕು. ಹಾಗಾದರೆ ರಾಜ್ಯ ಸರಕಾರಗಳು ಸರಿಯಾಗಿ ಕೆಲಸ ಮಾಡಬೇಕು. ಕೇಂದ್ರ ಹಾಗೂ ರಾಜ್ಯದಲ್ಲೀಗ ಒಂದೇ ಸರಕಾರವಿದೆ. ಅದೆಷ್ಟೋ ವರ್ಷಗಳ ಬಳಿಕ ಆಗಿದೆ ಎಂದು ಹೇಳಿದ್ದಾರೆ. 

ಡಿ. 5 ರ ನಂತರ ನಾನೇ ಸಿಎಂ ಸಿದ್ದು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಜನರು ದಡ್ಡರೆಂದು ತಿಳಿದಿದ್ದೀರೋ?ಯಾವ ಲೆಕ್ಕಾಚಾರದಲ್ಲಿ ಹೇಳುತ್ತಿದ್ದಾರೆ? ನಿಮ್ಮ ಮನಸ್ಸಿನಲ್ಲೇನಿದೆ? ಕುಮಾರಸ್ವಾಮಿ ನಿಮ್ಮ ಕಿರುಕುಳದಿಂದ ಬೇಸತ್ತಿದ್ದೆ ಅಂತಾರೆ. ಅವರಿಂದಲೇ ಸರ್ಕಾರ ಬಿದ್ದಿದ್ದು ಅಂತಾರೆ. ಹಾಗಾಗಿ ಗೌಡರು ನಿಮಗೆ ಬೆಂಬಲ‌ ಕೊಡೋದಿಲ್ಲ ಅವರ ತಿರುಕನ ಕನಸು ಈ ರೀತಿ ಮಾತಾಡಿಸುತ್ತಿದೆ. ಅವರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಉಪಚುನಾವಣೆಗೆ ಸಿದ್ದರಾಮಯ್ಯನವರೇ ಕಾರಣರಾಗಿದ್ದಾರೆ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಲಿಲ್ಲ. ಮೂಲ ಕಾಂಗ್ರೆಸ್ ನವರು ಮೂಲೆ ಗುಂಪಾಗಿದ್ದಾರೆ. ಸಿದ್ದು ಬಿಟ್ಟು ಉಳಿದವರು ಫೋಟೋ ಶೂಟ್ ಗೆ ಸೀಮಿತರಾಗಿದ್ದಾರೆ. ಸಿದ್ದು ಧೋರಣೆಯಿಂದ ಮೂಲ ಕಾಂಗ್ರೆಸ್ಸಿಗರು ದೂರವಾಗಿದ್ದಾರೆ. ಡಿಕೆಶಿ ಹೊರಗೆ ಬಂದಿದ್ದಕ್ಕೆ ಸಿದ್ದರಾಮಯ್ಯಗೆ ಹೆಚ್ಚು ದುಃಖ ಆಗಿದೆ ಎಂದು ತಿಳಿಸಿದ್ದಾರೆ. 

ಸಿದ್ದರಾಮಯ್ಯ ನೇತ್ರತ್ವದಲ್ಲಿ ಕಾಂಗ್ರೆಸ್ 120 ರಿಂದ 78 ಗೆ ಇಳಿಯಿತು. ಲೋಕಸಭಾ ಚುನಾವಣೆಯಲ್ಲಿ 9 ರಿಂದ 1 ಕ್ಕೆ ಇಳಿದಿದೆ. ಇದೆಲ್ಲ ಸಿದ್ದರಾಮಯ್ಯನವರ ನೇತೃತ್ವದಲ್ಲಿಯೇ ನಡೆದದ್ದು. ಇದೇ ಸಿದ್ದರಾಮಯ್ಯ ಕ್ರಾಸ್ ವೋಟಿಂಗ್ ಮಾಡಿಸಿದ್ದರು.ಕೋಳಿವಾಡ ಅವರನ್ನು ಬಳಸಿಕೊಂಡು ಆಪರೇಷನ್ ಮಾಡಿದ್ದರು ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ