ಹುಬ್ಬಳ್ಳಿ(ಸೆ.07): ನಗರದ ಚೆನ್ನಮ್ಮ ವೃತ್ತದಲ್ಲಿ 300 ಕೋಟಿ ವೆಚ್ಚದ ಫ್ಲೈಓವರ್‌ ಜತೆಗೆ, ಬೆಂಗಳೂರು- ಹುಬ್ಬಳ್ಳಿ ಮತ್ತು ಗದಗ ರಸ್ತೆಗೆ ಸಂಪರ್ಕವಾಗುವಲ್ಲಿ 298 ಕೋಟಿ ವೆಚ್ಚದ ಬೈಪಾಸ್‌ ರಸ್ತೆ ನಿರ್ಮಾಣದ ಜತೆಗೆ ಅಲ್ಲಿಯೂ ಬೃಹತ್‌ ವೃತ್ತ, ಫ್ಲೈ ಓವರ್‌, ಅಂಡರ್‌ ಪಾಸ್‌ ನಿರ್ಮಾಣದ ಹೊಸ ಯೋಜನೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಕಟಿಸಿದ್ದಾರೆ. ಈ ಮೂಲಕ ಮಹಾನಗರದ ಅಭಿವೃದ್ಧಿಗೆ ಇನ್ನೊಂದು ಮಟ್ಟದ ಓಘ ನೀಡುವ ಕನಸು ಬಿತ್ತಿದ್ದಾರೆ.

ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಹು-ಧಾ ಮಹಾನಗರದ ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ಚೆನ್ನಮ್ಮ ವೃತ್ತದಲ್ಲಿ ಎಲಿವೆಟೆಡ್‌ ಫ್ಲೈ ಓವರ್‌ ನಿರ್ಮಾಣಕ್ಕೆ ಈಗಾಗಲೇ 300 ಕೋಟಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. 2016ರಲ್ಲಿ ನಿತೀನ್‌ ಗಡ್ಕರಿ ಅವರು ಹುಬ್ಬಳ್ಳಿಗೆ ಬಂದಾಗ ಇಲ್ಲಿನ ಟ್ರಾಫಿಕ್‌ ಸಮಸ್ಯೆ ನಿವಾರಣೆ ಕುರಿತು ಅವರ ಗಮನಕ್ಕೆ ತರಲಾಗಿತ್ತು. ಅವರು ಕೂಡ ಡಿಪಿಆರ್‌ ಕಳಿಸುವಂತೆ ಕೋರಿದ್ದರು. ಆದರೆ, 2019ರ ವರೆಗೂ ಡಿಪಿಆರ್‌ ಸಲ್ಲಿಕೆಯಾಗಲೆ ಇಲ್ಲ. ಆದರೆ, ಇದೀಗ ಯೋಜನೆ ತಾರ್ಕಿಕ ಹಂತಕ್ಕೆ ತಲುಪಿದೆ ಎಂದರು.

ಚೆನ್ನಮ್ಮ ವೃತ್ತದ ಫ್ಲೈ ಓವರ್‌ ಜತೆಗೆ ಇದರ ಜತೆಜತೆಗೆ ಬೆಂಗಳೂರು- ಹುಬ್ಬಳ್ಳಿ ಮತ್ತು ಗದಗ ರಸ್ತೆಯಿಂದ ಮಹಾನಗರಕ್ಕೆ ಬಂದು ಹೋಗುತ್ತಿರುವ ವಾಹನದಟ್ಟಣೆ ತಡೆಯಲು ಬೃಹದಾಕಾರದ ಬೈಪಾಸ್‌ ನಿರ್ಮಿಸಲು ಯೋಜಿಸಲಾಗಿದೆ. ಇಲ್ಲಿ ಬೃಹತ್‌ ವೃತ್ತ, ಮೂರು ಕಡೆ ಫ್ಲೈ ಓವರ್‌, ಅಂಡರ್‌ಪಾಸ್‌ ನಿರ್ಮಾಣ ಆಗಲಿದೆ. ಇದು ಸಂಪೂರ್ಣ ಸಿಸಿ ರಸ್ತೆಯಾಗಿರಲಿದೆ. ಒಟ್ಟಾರೆ 600 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ಸಂಪೂರ್ಣ ಟ್ರಾಫಿಕ್‌ ಮುಕ್ತ ನಗರವಾಗಲಿದೆ. ಮುಂದಿನ ದಿನಗಳಲ್ಲಿ ಧಾರವಾಡ ಕೂಡ ಇದೆ ಮಾದರಿಯಲ್ಲಿ ಅಭಿವೃದ್ಧಿ ಆಗಲಿದೆ ಎಂದರು.

ಹುಬ್ಬಳ್ಳಿಯಲ್ಲಿ ಭೈರತಿ ಬಸವರಾಜ ಸಿಟಿ ರೌಂಡ್ಸ್‌: ಅಧಿಕಾರಿಗಳ ಮೈ ಚಳಿ ಬಿಡಿಸಿದ ಸಚಿವರು

ಇನ್ನು, ರಾಜ್ಯದಲ್ಲಿ ಡ್ರಗ್ಸ್‌ ಮಾಫಿಯಾ ಕುರಿತಂತೆ ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿರುವ ಎಲ್ಲ ಕ್ಷೇತ್ರದವರು ಜನತೆಗೆ ಮಾದರಿಯಾಗಿ ಇರಬೇಕು. ದುರಂತ ಎಂದರೆ ಇಂತಹ ಕ್ಷೇತ್ರದ ಪ್ರಮುಖ ಹೆಸರುಗಳು ಡ್ರಗ್ಸ್‌ ವಿಚಾರದಲ್ಲಿ ಕೇಳಿಬರುತ್ತಿವೆ. ಈ ಕುರಿತಂತೆ ಗೃಹ ಸಚಿವರ ಜತೆ ಸಹ ಮಾತನಾಡಿದ್ದೇನೆ. ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದೇನೆ. ಇನ್ನು, ರಾಗಿಣಿ ಬಿಜೆಪಿಯ ಸ್ಟಾರ್‌ ಪ್ರಚಾರಕರು ಆಗಿದ್ದರು ಎನ್ನುವುದು ನನಗೆ ಗೊತ್ತಿಲ್ಲ. ರಾಜಕೀಯ ಮುಖಂಡರ ಮಕ್ಕಳ ಹೆಸರು ಕೇಳಿಬಂದರೂ ಎಲ್ಲರಿಗೂ ಕಾನೂನು ಒಂದೇ ಆಗಿದೆ. ಹುಬ್ಬಳ್ಳಿಯಲ್ಲೂ ಸಹ ಗಾಂಜಾ ಸದ್ದು ಮಾಡುತ್ತಿದೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಜ್ಯೂಬಿಲಿ ವೃತ್ತಕ್ಕೂ ಬೇಕು ಪ್ಲೈ ಓವರ್‌!

ಹುಬ್ಬಳ್ಳಿಯ ಅತಿ ವಾಹನ ಮತ್ತು ಜನದಟ್ಟಣೆ ಪ್ರದೇಶವಾದ ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ಲೈಓವರ್‌ ನಿರ್ಮಾಣಕ್ಕೆ ಸರ್ಕಾರ ಅಸ್ತು ಎನ್ನುವದೇ ತಡ ಧಾರವಾಡದಲ್ಲಿ ಜ್ಯುಬಿಲಿ ವೃತ್ತದಲ್ಲೂ ಅದೇ ರೀತಿಯ ಪ್ಲೈಓವರ್‌ ನಿರ್ಮಾಣ ಮಾಡಬೇಕೆಂಬ ಕೂಗು ಬಲವಾಗಿ ಕೇಳಿ ಬರುತ್ತಿದೆ.

ಯಾವುದೇ ಊರುಗಳಿಂದ ಧಾರವಾಡಕ್ಕೆ ಆಗಮಿಸಿದರೆ ಜ್ಯುಬಿಲಿ ವೃತ್ತದ ಸಂಪರ್ಕ ಅಗತ್ಯ. ಜತೆಗೆ ಮಾರುಕಟ್ಟೆ ಸಂಪರ್ಕಕ್ಕೂ ಇದೇ ಮಾರ್ಗ. ಐದು ರಸ್ತೆಗಳಿಗೆ ವೃತ್ತವಾಗಿರುವ ಜ್ಯುಬಿಲಿ ವೃತ್ತದಲ್ಲಿ ಬೆಳಗ್ಗೆ 6ರಿಂದ ರಾತ್ರಿ 12ರ ವರೆಗೆ ವಾಹನಗಳ ಸಂಚಾರ ನಿರಂತರವಾಗಿರುತ್ತದೆ. ಇತ್ತೀಚೆಗೆ ಬಿಆರ್‌ಟಿಎಸ್‌ ಬಸ್‌ ನಿಲ್ದಾಣ ಸಹ ಇದೇ ವೃತ್ತದಲ್ಲಿ ಆಗಿದ್ದು, ಪ್ಲೈಓವರ್‌ ತುಂಬ ಅಗತ್ಯವಿದೆ ಎಂಬುದು ಧಾರವಾಡ ನಾಗರಿಕ ಆಗ್ರಹ.

ಪದೇ ಪದೇ ಅನ್ಯಾಯ:

ಹು-ಧಾ ಅವಳಿ ನಗರವಾದರೂ ಒಂದೇ ಸಮನಾಗಿ ಅಭಿವೃದ್ಧಿ ಹೊಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹು-ಧಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಿಂದ ಹಿಡಿದು ಬಹುತೇಕ ಅಭಿವೃದ್ಧಿ ವಿಷಯಗಳಲ್ಲಿ ಧಾರವಾಡ ನಗರವನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಮೊದಲಿನಿಂದಲೂ ಇದ್ದೇ ಇದೆ. ಸಂಸದ ಪ್ರಹ್ಲಾದ ಜೋಶಿ, ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಸೇರಿದಂತೆ ಪ್ರಮುಖ ರಾಜಕಾರಣಿಗಳು ಹುಬ್ಬಳ್ಳಿಯವರೇ ಇರುವುದರಿಂದ ಹಾಗೂ ಪ್ರಮುಖ ಹುದ್ದೆಗಳು ಸಹ ಹುಬ್ಬಳ್ಳಿಯವರಿಗೆ ನೀಡುತ್ತಿರುವ ಕಾರಣ ಅಲ್ಲಿನ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಹೀಗಾಗಿ ಹು-ಧಾ ಮಹಾನಗರ ಪಾಲಿಕೆ ಒಡೆದು ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ನೀಡಬೇಕೆಂದು ಅನೇಕ ಹೋರಾಟಗಳು ಸಹ ನಡೆದಿವೆ. ಈ ಹಿನ್ನೆಲೆಯಲ್ಲಿ ಇದೀಗ ಜ್ಯುಬಿಲಿ ವೃತ್ತದ ಸುಧಾರಣೆ ಸಹ ಮಹತ್ವ ಪಡೆದುಕೊಂಡಿದೆ.

ಶಾಸಕರೆಲ್ಲಿದ್ದಾರೆ?:

ಧಾರವಾಡದ ಜನರ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಯಾವಾಗಲೂ ಏಕೆ ಪ್ರಾಮುಖ್ಯ ನೀಡುವುದಿಲ್ಲ ಎಂದು ಪ್ರಶ್ನಿಸಿರುವ ಆಮ್‌ ಆದ್ಮಿ ಪಕ್ಷದ ಜಿಲ್ಲಾ ಕಾರ್ಯಕಾರಿಯ ಸಮಿತಿ ಸದಸ್ಯ ನಾಗರಾಜ ಕರೆಣ್ಣವರ, ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ 300 ಕೋಟಿ ವೆಚ್ಚದಲ್ಲಿ ಪ್ಲೈ ಓವರ್‌ ನಿರ್ಮಿಸುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಇದರ ಜತೆಗೆ ಇಲ್ಲಿನ ಜ್ಯೂಬಿಲಿ ವೃತ್ತದಿಂದ ಧಾರವಾಡ ಗಾಂಧಿನಗರ ವರೆಗೆ ಸಂಚಾರ ಸುಧಾರಣಾ ಯೋಜನೆ ಅತಿ ಅವಶ್ಯಕವಿದೆ. ಈ ಕುರಿತು ಧಾರವಾಡದ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಚಕಾರ ಎತ್ತುತ್ತಿಲ್ಲವೇಕೆ? ಇವರಿಗೆ ಜನರ ಸಮಸ್ಯೆಗಳನ್ನು ಬಗೆಹರಿಸುವ ಇಚ್ಛೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಎಲ್ಲವೂ ನನೆಗುದಿಗೆ:

ಅದೇ ರೀತಿ ಕಾಂಗ್ರೆಸ್‌ ಮಾಧ್ಯಮ ವಿಶ್ಲೇಷಕ ಪಿ.ಎಚ್‌. ನೀರಲಕೇರಿ ಸಹ ಈ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಜ್ಯೂಬಿಲಿ ವೃತ್ತದಲ್ಲಿ ಫ್ಲೈಓವರ್‌ ಆಗಲೇಬೇಕು. ಅದಕ್ಕಾಗಿ ತಾವು ಹೋರಾಟ ಮಾಡಲು ಸಿದ್ಧ. ಪಾಲಿಕೆಯ ಅನುದಾನ ಹಂಚಿಕೆ ಸೇರಿದಂತೆ ಅಭಿವೃದ್ಧಿ ಕೆಲಸಗಳಲ್ಲಿ ಧಾರವಾಡ ನಗರವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಟೆಂಡರ್‌ ಶ್ಯೂರ್‌ ರಸ್ತೆ, ಅಂತಾರಾಷ್ಟ್ರೀಯ ಮಟ್ಟದ ಈಜುಗೊಳ (ಕ್ರೀಡಾ ಸಂಕೀರ್ಣ), ಒಳಚರಂಡಿ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಒಂದೂ ಕಾಮಗಾರಿ ಧಾರವಾಡದ್ದಿಲ್ಲ.

ಇಲ್ಲಿನ ಬಿಜೆಪಿ ಶಾಸಕರಾದ ಅರವಿಂದ ಬೆಲ್ಲದ ಅವರು ಧಾರವಾಡ ನಗರದ ಬಗೆಗಿನ ಕಾಳಜಿಗಿಂತ ಹುಬ್ಬಳ್ಳಿ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ. ಧಾರವಾಡದ ಅಭಿವೃದ್ಧಿ ಬಗ್ಗೆ ಯಾರೊಬ್ಬರೂ ಸರ್ಕಾರಕ್ಕೆ ಮನವರಿಕೆ ಮಾಡುವರೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.