'ಸಿದ್ದು, ಹೆಚ್‌ಡಿಕೆಯಿಂದ ಮುಸ್ಲಿಮರ ಓಲೈಕೆಗಾಗಿ ತುಷ್ಟೀಕರಣ ರಾಜಕಾರಣ'

ಮುಸ್ಲಿಮರು ತುಷ್ಟೀಕರಣ ರಾಜಕಾರಣ ನಂಬಲ್ಲ| ರಾಮಮಂದಿರಕ್ಕೆ ದೇಣಿಗೆ ಕೊಡುವುದು ಕಡ್ಡಾಯ ಅಲ್ಲ| ಇಬ್ಬರೂ ಬಾಲಿಶವಾಗಿ ಹೇಳಿಕೆ ನೀಡುವುದು ಖಂಡನೀಯ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ| 

Union Minister Pralahd Joshi Slams HD Kumaraswamy, Siddaramaiah grg

ಹುಬ್ಬಳ್ಳಿ(ಫೆ.22): ಸಿದ್ದರಾಮಯ್ಯ, ಕುಮಾರಸ್ವಾಮಿ ಇಬ್ಬರೂ ಮುಸಲ್ಮಾನರ ಓಲೈಕೆಯ ಪ್ರಯತ್ನವಾಗಿ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ. ಆದರೆ, ಮುಸ್ಲಿಂ ಸಮುದಾಯ ಇವರಿಬ್ಬರನ್ನೂ ನಂಬುವುದಿಲ್ಲ. ಏಕೆಂದರೆ ಇವರಿಬ್ಬರ ಯೋಗ್ಯತೆ ಏನು ಎನ್ನುವುದು ಅವರಿಗೂ ತಿಳಿದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಬ್ಬರೂ ಓಲೈಕೆ ರಾಜಕಾರಣಕ್ಕಾಗಿ ಬಾಲಿಶ ಹೇಳಿಕೆ ನೀಡಿ ರಾಷ್ಟ್ರ ಮಟ್ಟದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದು ನೆಗೆಟಿವ್‌ ಪ್ರಚಾರದ ತಂತ್ರ ಎಂದರು.

ರಾಮಮಂದಿರಕ್ಕೆ ದೇಣಿಗೆ ಕೊಡುವುದು ಕಡ್ಡಾಯ ಅಲ್ಲ. ನಾವು ಯಾರಿಗೂ ದೇಣಿಗೆ ಕೊಡಿ ಎಂದು ಒತ್ತಾಯ ಮಾಡುತ್ತಿಲ್ಲ. ಅದು ಅವರವರ ವೈಯಕ್ತಿಕ ವಿಚಾರ. ಆದರೆ, ನಾನು ದೇಣಿಗೆ ಕೊಡಲ್ಲ, ನಮ್ಮ ಊರಿನಲ್ಲಿ ರಾಮಮಂದಿರ ಕಟ್ಟಿಸುತ್ತಿದ್ದೇನೆ ಎನ್ನುವುದು ವಿಚಿತ್ರ ವಾದ. ಅಯೋಧ್ಯೆ ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಜನತೆಯ ಭಾವನೆಗಳಿವೆ. ನೀವು ದೇಣಿಗೆ ಕೊಡಲ್ಲ ಎಂದರೆ ತೆಪ್ಪಗಿರಿ. ಬಾಯಿಗೆ ಬಂದ ಹಾಗೆ ಮಾತನಾಡುವುದು ಸರಿಯಲ್ಲ ಎಂದು ಇಬ್ಬರು ಮಾಜಿ ಸಿಎಂಗಳ ವಿರುದ್ಧ ಕಿಡಿಕಾರಿದರು.

'ಸಿದ್ದರಾಮಯ್ಯ, ಪಿಎಫ್‌ಐ ಒಂದೇ ಟೀಮ್'

ತಮ್ಮ ತಂದೆ ಹಿಂದೂ ವಿರೋಧಿ ಅಲ್ಲ ಎಂದು ಸಿದ್ದರಾಮಯ್ಯರ ಮಗ ಹೇಳಿಕೆ ಕೊಡುತ್ತಾರೆ. ಪಿಎಫ್‌ಐ ಸಂಘಟನೆ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ಹಿಂಪಡೆದಾಗಲೇ ಸಿದ್ದರಾಮಯ್ಯ ಹಿಂದು ವಿರೋಧಿ ಎನ್ನುವುದು ಸಿದ್ಧಗೊಂಡಿದೆ ಎಂದರು.

ಇನ್ನು ಕುಮಾರಸ್ವಾಮಿ ಅವರ ಹೇಳಿಕೆ ದುರದೃಷ್ಟಕರ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಅವರು ಸರಿಯಾದ ಮಾಹಿತಿ ಪಡೆದು ಹೇಳಿಕೆ ನೀಡಬೇಕು. ಯಾರು ದೇಣಿಗೆ ಕೊಡುತ್ತಿಲ್ಲವೊ ಅವರ ಮನೆಗೆ ಸ್ಟಿಕ್ಕರ್‌ ಅಂಟಿಸಲಾಗುತ್ತಿದೆ. ಅವರನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಒಮ್ಮೆ ಹೇಳಿಕೆ ಕೊಡುತ್ತಾರೆ. ಇನ್ನೊಮ್ಮೆ ಯಾರು ದೇಣಿಗೆ ಕೊಡುತ್ತಿದ್ದಾರೊ ಅವರ ಮನೆಗೆ ಸ್ಟಿಕ್ಕರ್‌ ಹಚ್ಚಲಾಗುತ್ತಿದೆ ಎಂದು ಹೇಳುತ್ತಾರೆ. ದೇಣಿಗೆ ಪಡೆದುಕೊಳ್ಳುವುದು ಒಂದು ಅಭಿಯಾನ ಮಾತ್ರ. ವಿಚಾರವನ್ನು ಇಟ್ಟುಕೊಂಡು ಎಷ್ಟು ಜನರ ಮನೆಗಳನ್ನು ತಲುಪುತ್ತೇವೆ ಎನ್ನುವುದು ಇಲ್ಲಿ ಮುಖ್ಯ. ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಸರ್ಕಾರ ರಚನೆ ಮಾಡಿದ ಟ್ರಸ್ವ್‌ ಇದು. ಪಡೆದ ಮೊತ್ತಕ್ಕೆ ಸೂಕ್ತ ಲೆಕ್ಕವನ್ನು ಇಡಲೇಬೇಕಾಗುತ್ತದೆ. ಇಬ್ಬರೂ ಬಾಲಿಶವಾಗಿ ಹೇಳಿಕೆ ನೀಡುವುದು ಖಂಡನೀಯ ಎಂದರು ಸಚಿವ ಜೋಶಿ.
 

Latest Videos
Follow Us:
Download App:
  • android
  • ios