ಬಂಟ್ವಾಳ(ಡಿ.27): ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಮಾತುಗಳ ಕುರಿತು ತೀಕ್ಷ್ಣವಾದ ಪ್ರತಿರೋಧ ವ್ಯಕ್ತವಾಗುತ್ತಿದ್ದು, ಅವರು ಅರ್ಥ ಮಾಡಿಕೊಂಡು ಬದಲಾಗಬೇಕಿತ್ತು. ಆದರೆ ಅವರ ಕುರಿತು ಕ್ರಮ ತೆಗೆದುಕೊಳ್ಳುವುದು ಪಕ್ಷದ ಪ್ರಮುಖರಿಗೆ ಬಿಟ್ಟ ವಿಚಾರ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

ಅವರು ಶನಿವಾರ ಕಲ್ಲಡ್ಕದಲ್ಲಿ ಯತ್ನಾಳ್‌ ಹೇಳಿಕೆಗಳ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪ್ರಸ್ತುತ ಉದ್ಭವಿಸಿರುವ ಪರಿಸ್ಥಿತಿ ವಿಶ್ವಮಾನವನಾ​ಗಲು ತಾನು ಪ್ರಯತ್ನ ಪಡುವುದಿಲ್ಲ. ಆದರೆ ಶಿಸ್ತುಬದ್ಧ ಪಕ್ಷದ ಶಿಸ್ತಿನ ಕಾರ್ಯಕರ್ತರಾಗಿ ಕೆಲಸ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಪ್ರಸ್ತುತ ದಿನಗಳಲ್ಲಿ ಅವರ ಮಾತುಗಳು, ನಡವಳಿಕೆಗಳು, ನಾಯಕರ ಕುರಿತು ಹೇಳಿಕೆಗಳು ನಮ್ಮಂತ ಪಕ್ಷಕ್ಕೆ ಗೌರವ ತರುವಂತದ್ದಲ್ಲ. ಬೇರೆ ಪಕ್ಷದ ಶಾಸಕನಂತೆ ನಮ್ಮ ಪಕ್ಷದ ಶಾಸಕ ಮಾತನಾಡಿದರೆ ಅದಕ್ಕೆ ಅರ್ಥ ಇಲ್ಲ.

ಬಸನಗೌಡ ಪಾಟೀಲ್ ಯತ್ನಾಳ್ ನಡೆಗೆ ಕೇಂದ್ರದ ನಾಯಕ ಫುಲ್ ಗರಂ

ತಾನು ರಾಜ್ಯಾಧ್ಯಕ್ಷನಾಗಿರುವ ವೇಳೆಯೂ ಅವರು ಇದೇ ರೀತಿ ಮಾತನಾಡಿದ್ದು, ಅವರನ್ನು 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದ್ದೆ. ಬಳಿಕ ಅವರು ಸರಿ ಹೋಗುತ್ತಾರೆ ಎಂದು ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ಆದರೆ ಅವರು ಮತ್ತೂ ಸರಿಯಾಗುವುದಿಲ್ಲ ಎಂದಾದರೆ ಅದನ್ನು ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ ಎಂದರು.