Asianet Suvarna News Asianet Suvarna News

ಕಿಸಾನ್‌ ಸಮ್ಮಾನ್‌ ನಿಧಿ ಸ್ಥಗಿತ: ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಖೂಬಾ ಕಿಡಿ

ಬಿಜೆಪಿ ರೈತರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನ ನಿಲ್ಲಿಸಿದ ರಾಜ್ಯ ಕಾಂಗ್ರೆಸ್‌ ಸರ್ಕಾರದ ಕ್ರಮಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ ಆಕ್ರೋಶ

Union Minister Bhagwanth Khuba Slams Karnataka Congress Government grg
Author
First Published Jul 20, 2023, 11:30 PM IST

ಬೀದರ್‌(ಜು.20): ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ ನಿಧಿ ಯೋಜನೆಯಡಿ ರಾಜ್ಯದ ರೈತರಿಗೆ ನಮ್ಮ ಬಿಜೆಪಿ ಸರ್ಕಾರದಿಂದ ಕೇಂದ್ರದ ಪ್ರೋತ್ಸಾಹ ಧನದ ಜೊತೆಗೆ ರಾಜ್ಯದಿಂದ ನೀಡುತ್ತಿದ್ದ 4 ಸಾವಿರ ರುಪಾಯಿಗಳ ಹೆಚ್ಚುವರಿ ಪ್ರೋತ್ಸಾಹ ಧನವನ್ನು ನಿಲ್ಲಿಸಿರುವ ಕಾಂಗ್ರೆಸ್‌ ಸರ್ಕಾರದ ನಿರ್ಣಯ ರೈತ ವಿರೋಧಿಯಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಖಂಡಿಸಿದ್ದಾರೆ.

ಈ ಕುರಿತಂತೆ ಪ್ರಕಟಣೆ ಹೊರಡಿಸಿದ್ದು, ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಲಕ್ಷಾಂತರ ರೈತರಿಗೆ ಅನ್ಯಾಯವಾಗಲಿದೆ. ಯಾವೂದೇ ಕಾರಣಕ್ಕೂ ರೈತರಿಗೆ ಸಿಗುತ್ತಿರುವ ಪ್ರೋತ್ಸಾಹ ಧನ ನಿಲ್ಲಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ರೈತರ ಪರವಾಗಿ ಒತ್ತಾಯಿಸುವದಾಗಿ ತಿಳಿಸಿದ್ದಾರೆ.

ಬೆಳೆ ವಿಮೆ ಪರಿಹಾರದಲ್ಲಿ ಲೋಪ ಆರೋಪ

ಪ್ರತಿ ವರ್ಷ ಕೇಂದ್ರ ಸರ್ಕಾರ ನೀಡುತ್ತಿರುವ 6 ಸಾವಿರ ರು., ಜೊತೆಗೆ ನಮ್ಮ ಬಿಜೆಪಿ ಸರ್ಕಾರ ನೀಡುತ್ತಿದ್ದ 4 ಸಾವಿರ ರುಪಾಯಿ ಸೇರಿ ಪ್ರತಿ ರೈತನಿಗೆ 10 ಸಾವಿರ ರು. ಪೋ›ತ್ಸಾಹಧನ ಸಿಗುತ್ತಿತ್ತು. ಇದರಿಂದ ರೈತರಿಗೆ ಅನುಕೂಲವಾಗುತ್ತಿತ್ತು. ಪ್ರತಿ ವರ್ಷ ರಾಜ್ಯದ ಒಟ್ಟು 57 ಲಕ್ಷ ರೈತರಿಗೆ 5900 ಕೋಟಿ ರುಪಾಯಿ ಪ್ರೋತ್ಸಾಹಧನ ರಾಜ್ಯ ಸರ್ಕಾರದಿಂದ ಬಂದಿದೆ. ಇದರಲ್ಲಿ ಬೀದರ್‌ ಲೋಕಸಭಾ ಕ್ಷೇತ್ರದ 2,62,392 ರೈತರಿಗೆ ಒಟ್ಟು 220.60 ಕೋಟಿ ರು. ಪ್ರೋತ್ಸಾಹ ಧನ ರೈತರ ಖಾತೆಗೆ ನೇರವಾಗಿ ಜಮೆಯಾಗಿರುತ್ತದೆ ಎಂದು ತಿಳಿಸಿದ್ದಾರೆ.

ರಾಜ್ಯ ಕಾಂಗ್ರೆಸ್‌ ಸರ್ಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ರಾಜ್ಯ ಸರ್ಕಾರದ ನಡೆಯನ್ನು ಟೀಕಿಸಿರುವ ಸಚಿವರು, ರೈತರ ಪ್ರೋತ್ಸಾಹಧನವನ್ನು ನಿಲ್ಲಿಸುವ ಕ್ರಮವನ್ನು ರಾಜ್ಯದ ಎಲ್ಲಾ ರೈತ ಮುಖಂಡರು ವಿರೋಧಿಸಬೇಕು. ಯಾವೂದೇ ಕಾರಣಕ್ಕೂ ರಾಜ್ಯ ಸರ್ಕಾರದ ಈ ಕ್ರಮವನ್ನು ಒಪ್ಪಿಕೊಳ್ಳಬಾರದು ಹಾಗೂ ಯಥಾ ಸ್ಥಿತಿ ಮುಂದುವರಿಸಿ ರೈತರಿಗೆ ಅನುಕೂಲ ಮಾಡಿಕೊಡುವಲ್ಲಿ ಅಗತ್ಯ ಎಚ್ಚರಿಕೆಯನ್ನ ರಾಜ್ಯ ಸರ್ಕಾರಕ್ಕೆ ನೀಡಬೇಕೆಂದು ರೈತ ಮುಖಂಡರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕೆಡಿಪಿ ಸಭೆಗೆ ಅಧಿಕಾರಿಗಳ ಗೈರು: ಹೊರನಡೆದ ಶಾಸಕ ಪ್ರಭು ಚವ್ಹಾಣ್‌

ನಮ್ಮ ಜಿಲ್ಲೆಯ ಇಬ್ಬರು ಸಚಿವರು ಏನು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ರೈತರ ಪರವಾಗಿ ನಿಲ್ಲಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರು ನಿಮಗೆ ಜಿಲ್ಲೆಗೆ ಬರಲು ಬಿಡುವುದಿಲ್ಲ ನೆನಪಿಡಿ ಎಂದು ಕೇಂದ್ರ ಸಚಿವರು ಎಚ್ಚರಿಸಿದ್ದಾರೆ.

ರೈತರಿಗೆ ಸಿಗುತ್ತಿದ್ದ ಪ್ರೋತ್ಸಾಹ ಧನ ನೀಡುವುದು ನಿಲ್ಲಿಸಿದರೆ, ರಾಜ್ಯ ಸರ್ಕಾರದ ವಿರುದ್ಧ ಪ್ರತಿ ಜಿಲ್ಲೆಯಲ್ಲೂ ಹೋರಾಟ ಮಾಡಬೇಕಾಗುತ್ತದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Follow Us:
Download App:
  • android
  • ios