ವಿಐಎಸ್‌ಎಲ್‌ ಕಾರ್ಖಾನೆ ಅಭಿವೃದ್ಧಿಗೆ ಆಗ್ರಹ

ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೇವಲ ಸುಳ್ಳು ಭರವಸೆಗಳನ್ನು ನೀಡದೆ ಪ್ರಾಮಾಣಿಕವಾಗಿ ಅಭಿವೃದ್ಧಿಗೊಳಿಸಲಿ ಎಂದು ಶಾಸಕ ಸಂಗಮೇಶ್ವರ್ ಆಗ್ರಹಿಸಿದರು. 

Union Govt Should Develop VISL Says MLA Sangameshwar

ಭದ್ರಾವತಿ [ಸೆ.16]:  ನಗರದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೇವಲ ಸುಳ್ಳು ಭರವಸೆಗಳನ್ನು ನೀಡದೆ ಪ್ರಾಮಾಣಿಕವಾಗಿ ಅಭಿವೃದ್ಧಿಗೊಳಿಸಲು ಮುಂದಾಗಬೇಕು ಎಂದು ಶಾಸಕ ಬಿ.ಕೆ. ಸಂಗಮೇಶ್ವರ್‌ ಹೇಳಿದರು.

ಭಾನುವಾರ ವಿಐಎಸ್‌ಎಲ್‌ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ಜಯಶ್ರೀ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ ರತ್ನ ಸರ್‌ ಎಂ. ವಿಶ್ವೇಶ್ವರಯ್ಯ 159ನೇ ಜನ್ಮದಿನಾಚರಣೆ ಹಾಗೂ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಈ ಹಿಂದೆ ರಾಜ್ಯ ಸರ್ಕಾರ ಗಣಿ ಮಂಜೂರಾತಿ ಮಾಡಿದಲ್ಲಿ 2,000 ಕೋಟಿ ರು. ಬಂಡವಾಳ ತೊಡಗಿಸುವ ಮೂಲಕ ಕಾರ್ಖಾನೆ ಅಭಿವೃದ್ಧಿಗೆ ಮುಂದಾಗುವುದಾಗಿ ಭರವಸೆ ನೀಡಿತ್ತು. ಆದರೆ ಇದುವರೆಗೂ ಬಂಡವಾಳ ತೊಡಗಿಸದೆ ಇದೀಗ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಇದರ ವಿರುದ್ಧ ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ ಹೋರಾಟ ಮತ್ತಷ್ಟುತೀವ್ರಗೊಳ್ಳಬೇಕಾಗಿದೆ ಎಂದರು.

ನಿವೃತ್ತ ನೌಕರರ ವಾಸದ ಮನೆಗಳನ್ನು ಖಾಲಿ ಮಾಡುವ ಸಂಬಂಧ ಯಾರು ಸಹ ಆತಂಕಪಡಬಾರದು. ಯಾವುದೇ ಕಾರಣಕ್ಕೂ ನಿವೃತ್ತ ನೌಕರರ ವಾಸದ ಮನೆಗಳನ್ನು ಖಾಲಿ ಮಾಡಿಸಲು ಅವಕಾಶ ಕೊಡುವುದಿಲ್ಲ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ನಿವೃತ್ತ ಕಾರ್ಮಿಕರ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು.

ಸರ್‌ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ, ವಿಐಎಸ್‌ಎಲ್‌ ನಷ್ಟಕ್ಕೆ ನಾವು ಸಹ ಕಾರಣರಾಗಿದ್ದೇವೆ. ಹಂತ ಹಂತವಾಗಿ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಅಭಿವೃದ್ಧಿಪಡಿಸಿದ್ದಲ್ಲಿ ಈ ಸ್ಥಿತಿ ಬರುತ್ತಿರಲಿಲ್ಲ. ಕೇಂದ್ರ ಸರ್ಕಾರದ ಬೇಜವಾಬ್ದಾರಿತನದಿಂದ ಇಂದು ಕಾರ್ಮಿಕರು, ಕುಟುಂಬ ವರ್ಗದವರು ಸೇರಿದಂತೆ ಕ್ಷೇತ್ರದ ಬಹುತೇಕ ನಾಗರಿಕರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ ಅವರು ಕಾರ್ಮಿಕರಿಗೆ ನೀಡಿರುವ ಭರವಸೆಯಂತೆ ಕಾರ್ಖಾನೆಯನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ರಾಜ್ಯದಿಂದ ನಿಯೋಗವೊಂದನ್ನು ದೆಹಲಿಗೆ ಕರೆದೊಯ್ದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಇದಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಿವೃತ್ತ ಸೈನಿಕ ಗೋವಿಂದಪ್ಪ, ಮಾಜಿ ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಎಚ್‌.ಎನ್‌. ಕೃಷ್ಣೇಗೌಡ, ಚನ್ನಯ್ಯ ಮತ್ತು

ಸಾಹಿತಿ ಎ.ಪಿ. ಕುಮಾರ್‌ ಅವರನ್ನು ಸತ್ಕರಿಸಲಾಯಿತು.

ಬೆಂಗಳೂರು ಯಶವಂತಪುರ ಕನ್ನಡ ಸಾಹಿತ್ಯ ಪರಿಷತ್‌ ಗೌರವಾಧ್ಯಕ್ಷ ಎ.ಪಿ. ಕುಮಾರ್‌, ವಿಐಎಸ್‌ಎಲ್‌ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಜೆ.ಎನ್‌. ನಾಗಭೂಷಣ್‌, ವಿಐಎಸ್‌ಎಲ್‌ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್‌, ಹಿರಿಯ ಕಾರ್ಮಿಕ ಮುಖಂಡರಾದ ಎಸ್‌.ಎನ್‌. ಬಾಲಕೃಷ್ಣ, ಕೆ.ಎನ್‌. ಭೈರಪ್ಪಗೌಡ, ಹಾ. ರಾಮಪ್ಪ ಓಂಕಾರ, ಗಜೇಂದ್ರ, ಕಾರ್ಯದರ್ಶಿ ಎಸ್‌.ಎಚ್‌ ಹನುಮಂತರಾವ್‌, ಎಸ್‌. ನರಸಿಂಹಚಾರ್‌, ನರಸಿಂಯ್ಯ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios