ವಜ್ರ ಗುಜರನ್‌ ಮಾಡೂರು

ಉಳ್ಳಾಲ [ಸೆ.19]:  ಸುತ್ತಲೂ ಆವರಿಸಿಕೊಂಡಿರುವ ಪೊದೆ, ಅಲ್ಲಲ್ಲಿ ಬಿದ್ದಿರುವ ಕಸದ ರಾಶಿ, ನಶೆ ಏರಿಸಿಕೊಂಡು ಮಜಾ ಮಾಡುವ ಪಡ್ಡೆಗಳ ಪಾಲಿಗೆ ಹೇಳಿ ಮಾಡಿಸಿದ ತಾಣ. ರೈಲು ನಿಲ್ದಾಣ ಎಂದು ಕರೆಸಿಕೊಳ್ಳುವ ಉಳ್ಳಾಲ ರೈಲ್ವೇ ಸ್ಟೇಷನ್‌ನ ಅಸಲಿ ಸ್ಥಿತಿಯಿದು.

ಮಂಗಳೂರಿನಿಂದ ಕೇರಳದ ತಿರುವನಂತಪುರಂಗೆ ದಿನದಲ್ಲಿ ಸಾವಿರಾರು ಜನ ಪ್ರಯಾಣಿಕರು ರೈಲಿನ ಮುಖಾಂತರ ಪ್ರಯಾಣಿಸುತ್ತಾರೆ. ಮಂಗಳೂರಿನ ಕೇಂದ್ರ ರೈಲ್ವೇ ನಿಲ್ದಾಣದಿಂದ ನಂತರ ಸಿಗುವ ನಿಲ್ದಾಣವೇ ಉಳ್ಳಾಲ. ಸದ್ಯ ಈ ರೈಲು ನಿಲ್ದಾಣದ ಮಾತ್ರ ಹುಲ್ಲು ಹಾಗೂ ಪೊದೆಗಳಿಂದ ತುಂಬಿಕೊಂಡು ಅಪರಾಧ ಕೃತ್ಯಗಳನ್ನು ನಡೆಸುವವರಿಗೆ ಹೇಳಿ ಮಾಡಿಸಿದಂತಿದೆ.

ಇಲ್ಲಿ ರೈಲು ನಿಲ್ಲುತ್ತದೆ ಮತ್ತು ಪ್ರಯಾಣಿಕರು ಬಂದು, ಹೋಗುತ್ತಾರೆ ಎನ್ನುವುದನ್ನು ಬಿಟ್ಟರೆ ‘ನಿಲ್ದಾಣ’ದ ಲಕ್ಷಣಗಳನ್ನು ಇದು ಉಳಿಸಿಕೊಂಡಿಲ್ಲ.

ವಿದ್ಯಾರ್ಥಿಗಳೇ ಹೆಚ್ಚು: ಸೋಮೇಶ್ವರದ ಆನಂದಾಶ್ರಮ ಶಾಲೆ, ಪರಿಜ್ಞಾನ ಕಾಲೇಜು, ಜಾಯಿಲ್ಯಾಂಡ್‌ ಶಾಲೆ ಹಾಗೂ ಸುತ್ತಮುತ್ತಲಿನ ಕೆಲವು ಶಾಲೆಯ ವಿದ್ಯಾರ್ಥಿಗಳು ಈ ನಿಲ್ದಾಣಕ್ಕೆ ಬಂದು ರೈಲಿನ ಮೂಲಕ ಮನೆ ಸೇರುವವರಿದ್ದಾರೆ. ದೂರದ ಕಾಸರಗೋಡು, ಮಂಜೇಶ್ವರ, ಉಪ್ಪಳಕ್ಕೆ ಹೋಗುವವರು ಹೆಚ್ಚಾಗಿ ಇದೇ ನಿಲ್ದಾಣದ ಮೂಲಕ ರೈಲಿನಲ್ಲೇ ಪ್ರಯಾಣಿಸುತ್ತಾರೆ. ಬಹುತೇಕ ವಿದ್ಯಾರ್ಥಿಗಳು ಈ ನಿಲ್ದಾಣವನ್ನೇ ಅವಲಂಬಿಸಿದ್ದಾರೆ.

ಆದರೆ ನಿಲ್ದಾಣಕ್ಕೆ ಸಾಗುವ ರಸ್ತೆ ಪೊದೆಗಳಿಂದ ಆವರಿಸಿ ಅಕ್ಷರಶಃ ದುಸ್ಥಿತಿಗೆ ತಲುಪಿದೆ. ನಿಲ್ದಾಣದ ಸುತ್ತಲೂ ಸುತ್ತುವರಿದಿರುವ ಪೊದೆಯಿಂದ ನಿಲ್ದಾಣವೇ ಕಾಣುತ್ತಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೋಟೆಕಾರು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿರುವ ದೇರಳಕಟ್ಟೆಕೆ.ಎಸ್‌ ಹೆಗ್ಡೆ ಆಸ್ಪತ್ರೆ, ಯೇನೆಪೋಯ ಆಸ್ಪತ್ರೆ, ಕಣಚೂರು ಆಸ್ಪತ್ರೆಗೆಂದು ಕೇರಳ ರಾಜ್ಯದಿಂದ ರೋಗಿಗಳು ಹಾಗೂ ಸಂದರ್ಶಕರು ಬರುತ್ತಾರೆ. ಇದು ಹತ್ತಿರದ ರೈಲ್ವೇ ನಿಲ್ದಾಣವಾದ ಕಾರಣ ಇಲ್ಲೇ ಇಳಿದು ಹೋಗುವವರಿದ್ದಾರೆ. ಇದು ನಿರ್ಜನ ಪ್ರದೇಶ, ಜನಸಂದಣಿ ಕಡಿಮೆ ಇರುವ ಪ್ರದೇಶವಾಗಿರುವ ಕಾರಣ ಮಧ್ಯಾಹ್ನದ ಹಾಗೂ ರಾತ್ರಿ ಹೊತ್ತಿನಲ್ಲಿ ನಡೆಯಲು ಭಯವಾಗುತ್ತದೆ.

ಅನೈತಿಕ ಚಟುವಟಿಕೆಗಳ ತಾಣ:

ನಿರ್ಜನ ಪ್ರದೇಶವಾಗಿರುವ ಇಲ್ಲಿ ರೈಲು ಬರುವ ಸಮಯಕ್ಕೆ ಪ್ರಯಾಣಿಕರು ಈ ನಿಲ್ದಾಣದಲ್ಲಿ ಇರುತ್ತಾರೆ. ಸೋಮೇಶ್ವರ ಕಡೆಯಿಂದ ನಿಲ್ದಾಣದವರೆಗೆ ಸುತ್ತಲೂ ಪೊದೆ ಗಳು ತುಂಬಿದೆ. ಕೆಲವೊಂದು ಪೊದೆಗಳ ಮಧ್ಯೆ ಕಸದ ರಾಶಿ, ಮದ್ಯದ ಬಾಟಲಿಗಳನ್ನು ಕಾಣಬಹುದು. ರೈಲ್ವೇ ನಿಲ್ದಾಣದ ಪಕ್ಕದಲ್ಲೇ ಸೋಮೇಶ್ವರ ಪುರಸಭೆ ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯರ ಪ್ರಕಾರ ಮತ್ತು ಇಲ್ಲಿನ ದುಃಸ್ಥಿತಿಯನ್ನು ಗಮನಿಸಿದರೆ ಈ ಜಾಗ ಅನೈತಿಕ ಚಟುವಟಿಕೆಗಳ ತಾಣವಾದಂತೆ ಕಾಣುತ್ತಿದೆ. ಸ್ಥಳೀಯ ಸೋಮೇಶ್ವರ ಬೀಚ್‌ಗೆ ಬರುವ ಕೆಲ ಪ್ರವಾಸಿಗರು, ಪಡ್ಡೆ ಹುಡುಗರು, ಕಾಲೇಜು ವಿದ್ಯಾರ್ಥಿಗಳು ಈ ಜಾಗವನ್ನು ಸಿಗರೆಟ್‌ ಸೇವನೆ, ಮಾದಕ ದ್ರವ್ಯ ಮತ್ತು ಮದ್ಯ ಸೇವನೆಯ ಹಾಟ್‌ ಸ್ಪಾಟ್‌ ಮಾಡಿಕೊಂಡಿದ್ದಾರೆ. ರಾತ್ರಿ ವೇಳೆ ಈ ಜಾಗದಲ್ಲಿ ಅನೈತಿಕ ಚಟುವಟಿಕೆ ಜೋರಾಗಿದೆ ಎನ್ನುವುದು ಸ್ಥಳೀಯರ ಆರೋಪ.

ಪಾಳುಬಿದ್ದ ಕೊಠಡಿಗಳು!

ರೈಲ್ವೇ ಇಲಾಖೆಯ ಸಿಬ್ಬಂದಿಗಾಗಿ ಇಲ್ಲಿ ಕ್ರಾಟ್ರ್ರಸ್‌ಗಳನ್ನು ನಿರ್ಮಿಸಲಾಗಿದೆ. ಖಾಲಿ ಜಾಗದಲ್ಲಿ ಕೆಲವು ಪಾಳು ಬಿದ್ದ ಕೊಠಡಿಗಳೂ ಇವೆ. ಕೊಠಡಿಗಳ ಸುತ್ತಲೂ ಪೊದೆ, ಹುತ್ತಗಳು ಬೆಳೆದಿವೆ. ಹೆಂಚುಗಳು ಉದುರಿ ಗೋಡೆಗಳು ಧರೆಗುರುಳಿದ್ದರೂ ಇಲಾಖೆ ತಲೆಕೆಡೆಸಿಕೊಂಡಂತಿಲ್ಲ.

ಹಳಿಗಳ ಮೇಲೆ ಸರ್ಕಸ್‌!:

ಇಲ್ಲಿನ ಸುತ್ತಮುತ್ತಲಿನ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ನಿತ್ಯವೂ ರಸ್ತೆಯನ್ನು ಬಿಟ್ಟು ರೈಲಿನ ಹಳಿಗಳ ಮೇಲೆ ನಡೆದುಕೊಂಡು ಹೋಗುವುದು ಸಾಮಾನ್ಯ. ರೈಲು ನಿಲ್ದಾಣಕ್ಕೆ ಬರಲು ಕಾಲು ದಾರಿ ಇದ್ದರೂ ವಿದ್ಯಾರ್ಥಿಗಳು ಮಾತ್ರ ರೈಲಿನ ಹಳಿಗಳ ಪಕ್ಕದಲ್ಲೇ ನಡೆದು ನಿಲ್ದಾಣವನ್ನು ತಲುಪುತ್ತಿದ್ದಾರೆ. ಬೇಗ ತಲುಪಬೇಕು ಎನ್ನುವ ಕಾರಣಕ್ಕೆ ಕೆಲವೊಂದು ಬಾರಿ ಈ ಪ್ಲಾಟ್‌ಫಾರಂನಿಂದ ಮತ್ತೊಂದು ಪ್ಲಾಟ್‌ಫಾರಂಗೆ ಹೋಗಲು ರೈಲು ಹಳಿಗಳ ಮಧ್ಯದಲ್ಲಿ ದಾಟುತ್ತಿರುವುದು ಅಪಘಾತಕ್ಕೆ ಕಾರಣವಾಗಬಹುದು. ಇದನ್ನು ನಿಯಂತ್ರಿಸಲು ಇಲ್ಲಿ ಸಿಬ್ಬಂದಿಯಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಕ್ರಮ ಚಟುವಟಿಕೆಗಳು ಈ ಭಾಗದಲ್ಲಿ ನಡೆಯುತ್ತಿದ್ದರೂ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಯಾರು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕೇಂದ್ರ ರೈಲ್ವೇ ಇಲಾಖೆಗೆ ಸಂಬಂಧಿಸಿದ ಕಾರಣ ಇಲಾಖೆಯ ವಿರುದ್ಧ ಸ್ಥಳೀಯರು ಅಧಿಕೃತವಾಗಿ ದೂರು ನೀಡಲು ಭಯಪಡುತ್ತಿದ್ದು ಮೌಖಿಕವಾಗಿ ದೂರು ನೀಡಿದ್ದಾರೆ. ಇದು ನಮ್ಮ ವ್ಯಾಪ್ತಿಗೆ ಬಾರದೇ ಇದ್ದರೂ ಪೊದೆಗಳನ್ನು ಕಡಿದು ಸ್ವಚ್ಚಗೊಳಿಸಲು ಸೊಮೇಶ್ವರ ಪುರಸಭೆ ಮುಂದಾದರೂ ಇಲಾಖೆಯವರು ನಾಳೇ ನಮ್ಮನ್ನು ಪ್ರಶ್ನಿಸುತ್ತಾರೆ.

-ರಾಜೇಶ್‌ ಉಚ್ಚಿಲ್‌, ಅಧ್ಯಕ್ಷ, ಸೋಮೇಶ್ವರ ಪುರಸಭೆ.

ಬೆಳಗ್ಗೆ ಮತ್ತು ಸಂಜೆ ಎರಡು ರೈಲುಗಳು ಮಾತ್ರ ಉಳ್ಳಾಲ ರೈಲ್ವೆ ನಿಲ್ದಾಣದಲ್ಲಿ ನಿಲ್ಲುತ್ತದೆ. ಅತಿ ಸಣ್ಣ ರೈಲ್ವೆ ನಿಲ್ದಾಣವಾಗಿರುವ ಕಾರಣ ಪ್ರಯಾಣಿಕರಿಗೆ ಇದುವರೆಗೆ ಯಾವುದೇ ತೊಂದರೆಯಾಗಿಲ್ಲ. ಇಲಾಖೆಗೆ ಸಂಬಂಧಪಟ್ಟಜಾಗದಲ್ಲಿ ಮಾದಕ ವಸ್ತುಗಳನ್ನು ಸೇವಿಸಿ ಪಾರ್ಟಿ ಮಾಡುತ್ತಿರುವ ಬಗ್ಗೆ ನಮಗೆ ಇದುವರೆಗೂ ಯಾವುದೇ ದೂರು ಬಂದಿಲ್ಲ. ಅಂತಹ ಕೃತ್ಯಗಳು ನಡೆಯುವ ಬಗ್ಗೆ ಗಮನಕ್ಕೆ ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಅಂತಹ ಚಟುವಟಿಕೆಗಳು ಕಂಡುಬಂದಲ್ಲಿ ರೈಲ್ವೆ ಪೊಲೀಸರು ತಕ್ಷಣಕ್ಕೆ ಕ್ರಮಕೈಗೊಳ್ಳುತ್ತಾರೆ. ರೈಲ್ವೆ ನಿಲ್ದಾಣದಲ್ಲಿ ಪೊಲಿಸರು ಕಾಯಂ ಇರದಿದ್ದರೂ, ಅಗತ್ಯ ಬಿದ್ದಲ್ಲಿ ಮಂಗಳೂರಿನಿಂದ ಬರುತ್ತಾರೆ.

ಮೀಠಾ ಲಾಲ್‌, ಸ್ಟೇಷನ್‌ ಮಾಸ್ಟರ್‌ ಉಳ್ಳಾಲ ರೈಲ್ವೇ ನಿಲ್ದಾಣ