Asianet Suvarna News Asianet Suvarna News

ಹಾವೇರಿಯಲ್ಲೊಂದು ಆಮೆಗತಿ ಕಾಮಗಾರಿ; 15 ವರ್ಷ ಕಳೆದರೂ ಮುಗಿಯದ ಯುಜಿಡಿ ಕಾಮಗಾರಿ!

  • 15 ವರ್ಷ ಕಳೆದರೂ ಮುಗಿಯದ ಯುಜಿಡಿ ಕಾಮಗಾರಿ
  • -ಜಿಲ್ಲಾ ಕೇಂದ್ರ ಹಾವೇರಿಯಲ್ಲಿ 2006ರಲ್ಲೇ ಶುರುವಾದ ಯುಜಿಡಿ ಕಾಮಗಾರಿ
  • ಜಿಲ್ಲಾ ಕೇಂದ್ರದಲ್ಲಿ ಗಬ್ಬು ನಾರುವ ತೆರೆದ ಚರಂಡಿಗಳು
  • ಕೋಟ್ಯಾಂತರ ರು. ಅನುದಾನ ಖರ್ಚಾದರೂ ಮುಗಿಯದ ಯೋಜನೆ
UGD work is not finished even after 15 years at Haveri rav
Author
Hubli, First Published Aug 5, 2022, 12:13 PM IST

ನಾರಾಯಣ ಹೆಗಡೆ

ಹಾವೇರಿ (ಆ.5): ಜಿಲ್ಲಾ ಕೇಂದ್ರ ಹಾವೇರಿಯ ಜನಸಂಖ್ಯೆ 1 ಲಕ್ಷಕ್ಕೆ ಸಮೀಪಿಸುತ್ತಿದ್ದರೂ ಮೂಲಸೌಕರ್ಯ ಮಾತ್ರ ಕನಿಷ್ಠ ಮಟ್ಟದಲ್ಲೇ ಇದೆ. ಮನೆಯಿಂದ ಹೊರಬಿದ್ದರೆ ಗಬ್ಬು ನಾರುವ ಚರಂಡಿಯಿಂದ ಮೂಗು ಮುಚ್ಚಿಕೊಂಡೇ ಓಡಾಡಬೇಕು. 16 ವರ್ಷಗಳ ಹಿಂದೆ ಆರಂಭವಾದ ಯುಜಿಡಿ ಕಾಮಗಾರಿ ಇನ್ನೂ ಮುಗಿಯದ್ದರಿಂದ ಇಲ್ಲಿಯ ನಿವಾಸಿಗಳು ನರಕ ಯಾತನೆ ಅನುಭವಿಸುವಂತಾಗಿದೆ.

ಹಾವೇರಿ(Haveri) ಜಿಲ್ಲೆಯಾಗಿ 25 ವರ್ಷವಾಗಿದೆ. ಈ ಅವಧಿಯಲ್ಲಿ ನಗರದ ಅಭಿವೃದ್ಧಿಗೆ ಸಾವಿರಾರು ಕೋಟಿ ರು. ವ್ಯಯಿಸಲಾಗಿದೆ. ಜನಸಂಖ್ಯೆಯೂ ಹೆಚ್ಚುತ್ತಲೇ ಇದೆ. ಆದರೆ, ಮೂಲಸೌಕರ್ಯ ಮಾತ್ರ ಇಲ್ಲಿ ಮರೀಚಿಕೆಯೇ ಆಗಿದೆ. ನಿರಂತರ ಕುಡಿಯುವ ನೀರಿನ ಯೋಜನೆ ಮತ್ತು ಒಳಚರಂಡಿ ಯೋಜನೆ ಇವು ನಗರದ ಜನರಿಗೆ ಇನ್ನೂ ಕನ್ನಡಿಯೊಳಗಿನ ಗಂಟಾಗಿಯೇ ಉಳಿದಿದೆ. ಅದರಲ್ಲೂ ಯುಜಿಡಿ ಕಾಮಗಾರಿಯ ಬಗ್ಗೆ ಅಧಿಕಾರಿಗಳಿಗೂ ಸರಿಯಾಗಿ ಮಾಹಿತಿ ಇಲ್ಲದಷ್ಟುಗೊಂದಲ ಸೃಷ್ಟಿಯಾಗಿದೆ. ಯೋಜನೆ ಎಲ್ಲಿಗೆ ಬಂದಿದೆ, ಎಷ್ಟುಖರ್ಚಾಗಿದೆ ಎಂಬ ಮಾಹಿತಿಯೂ ತಿಳಿಯದಂತಾಗಿದೆ. ಬಹುತೇಕರು ಈ ಯೋಜನೆಯನ್ನೇ ಮರೆತಿದ್ದಾರೆ. ರಸ್ತೆಯಲ್ಲಿ ಆಗಾಗ ಅಗೆದು ಹಾಕುವುದು, ಮ್ಯಾನ್‌ಹೋಲ್‌ನಿಂದ ನೀರು ಬರುವುದೇ ಯೋಜನೆ ಇರುವುದಕ್ಕೆ ಇರುವ ಏಕೈಕ ಸಾಕ್ಷಿಯಾಗಿದೆ.

ಹಾವೇರಿ: ಹಬ್ಬದ ಸಂಭ್ರಮದಲ್ಲಿ ಜವರಾಯನ ಅಟ್ಟಹಾಸ, ಶೌಚಾಲಯದ ಗುಂಡಿಯಲ್ಲಿ ಬಿದ್ದು ಬಾಲಕ ಸಾವು

ಸಮರ್ಪಕ ಒಳಚರಂಡಿ ಇಲ್ಲದೆ, ನಗರದೆಲ್ಲೆಡೆ ಬಹುತೇಕ ಪ್ರದೇಶದಲ್ಲಿ ಚರಂಡಿ ನಿಂತು ಗಬ್ಬು ವಾಸನೆ ಮೂಗಿಗೆ ಬಡಿಯೋದಷ್ಟೆಅಲ್ಲ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. 2006ರಲ್ಲಿ ಯುಜಿಡಿ ಕಾಮಗಾರಿ ಆರಂಭಿಸಲಾಗಿತ್ತು. ನಗರದ ರಸ್ತೆಗಳನ್ನ ಅಗೆದು ಪೈಪ್‌ಲೈನ್‌ ಅಳವಡಿಸುವುದು, ಮತ್ತೆ ಅಗೆಯುವುದು ಹೀಗೆ ನಡೆಯುತ್ತಲೇ ಸಾಗತ್ತು. ಅಂದು ಶುರುವಾದ ಕಾಮಗಾರಿ ಇಂದಿಗೂ ಮುಗಿದಿಲ್ಲ. ಕಾಮಗಾರಿ ಕೈಗೆತ್ತಿಕೊಂಡಿದ್ದ ಗುತ್ತಿಗೆದಾರರು ಬದಲಾಗ್ತಿದ್ದಾರೆಯೇ ಹೊರತು ಒಳಚರಂಡಿ ಕಾಮಗಾರಿ ಮುಗಿಸುತ್ತಿಲ್ಲ. ಈಗ ಮತ್ತೆ ಗುತ್ತಿಗೆದಾರ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ನಾಪತ್ತೆಯಾಗಿದ್ದು, ಹೊಸ ಗುತ್ತಿಗೆದಾರನ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

2011ರಲ್ಲೇ ಮುಗಿಯಬೇಕಿದ್ದ ಕಾಮಗಾರಿ:

2006ರಲ್ಲಿ ಗೌತಮ… ಜಾನ್ವಿ ಕನಸ್ಟ್ರಕ್ಷನ್‌ ಕಂಪನಿ ನಗರದಲ್ಲಿ ಯುಜಿಡಿ ಕಾಮಗಾರಿಯ ಗುತ್ತಿಗೆ ಪಡೆದಿತ್ತು. .34.89 ಕೋಟಿಗೆ ಗುತ್ತಿಗೆ ಪಡೆದಿದ್ದ ಕಂಪನಿ, 2011ರ ಜುಲೈ ತಿಂಗಳಲ್ಲಿ ಕಾಮಗಾರಿ ಮುಗಿಸಬೇಕಿತ್ತು. ಕಾಮಗಾರಿ ಮುಗಿಯದ್ದಕ್ಕೆ 2013ರ ವರೆಗೆ ಅವಧಿ ವಿಸ್ತರಣೆ ಮಾಡಲಾಗಿತ್ತು. ಈ ಅವಧಿಯಲ್ಲೂ ಕಾಮಗಾರಿ ಮಗಿಯದ ಹಿನ್ನೆಲೆಯಲ್ಲಿ ಗುತ್ತಿಗೆದಾರನಿಗೆ .18 ಲಕ್ಷ ದಂಡ ಹಾಕಿ ಆತನನ್ನು ಕೈಬಿಡಲಾಗಿತ್ತು. ಈ ಗುತ್ತಿಗೆದಾರ ನಗರದಲ್ಲಿ 67.72 ಕಿಲೋ ಮೀಟರ್‌ ಒಳಚರಂಡಿ ಪೈಪ್‌ ಲೈನ್‌ ಹಾಕುವ ಬದಲಿಗೆ 49.27 ಕಿಲೋ ಮೀಟರ್‌ ಕಾಮಗಾರಿ ನಿರ್ವಹಿಸಿದ್ದ.

ಶಾಲಾ ಮಕ್ಕಳ ಮೇಲೆ ಹೆಜ್ಜೇನು ದಾಳಿ, 12 ವಿದ್ಯಾರ್ಥಿಗಳು ಅಸ್ವಸ್ಥ

2595 ಮ್ಯಾನ್‌ ಹೋಲ್‌ಗಳ ಪೈಕಿ 2028 ಅಳವಡಿಸಿದ್ದ. 5190 ಮನೆಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸುವ ಬದಲಿಗೆ 2740 ಮನೆಗಳಿಗೆ ಮಾತ್ರ ಸಂಪರ್ಕ ಕಲ್ಪಿಸಿದ್ದ. .5.21 ಕೋಟಿ ವೆಚ್ಚದಲ್ಲಿ ಅಗೆದು ಹಾಕಿದ್ದ ರಸ್ತೆ ಪುನರ್‌ ನಿರ್ಮಾಣ ಮಾಡಬೇಕಿತ್ತು. ಆದರೆ, .4.33 ಕೋಟಿ ವೆಚ್ಚದಲ್ಲಿ ಒಂದಿಷ್ಟುಅರೆಬರೆ ರಸ್ತೆ ಕಾಮಗಾರಿ ಮಾಡಿ ಉಳಿದದ್ದನ್ನು ಮಾಡಲಿಲ್ಲ. ನಗರದಲ್ಲಿ 1150 ಮೀಟರ್‌ ಚರಂಡಿ ನಿರ್ಮಾಣದ ಬದಲಿಗೆ 943 ಮೀಟರ್‌ ಚರಂಡಿ ನಿರ್ಮಾಣ ಮಾಡಿ ಕಾಮಗಾರಿ ಅರ್ಧಕ್ಕೆ ಬಿಟ್ಟಿದ್ದರು. ಅಷ್ಟೊತ್ತಿಗಾಗಲೆ ಇವರಿಗೆ ಬರೋಬ್ಬರಿ .17.64 ಕೋಟಿ ಬಿಲ್‌ ಪಾವತಿ ಮಾಡಲಾಗಿತ್ತು.

ಸೆಕೆಂಡ್‌ ಶೋ ಕೂಡ ಪ್ಲಾಪ್‌:

ಇದಾದ ಬಳಿಕ 2016ರಲ್ಲಿ ಶ್ರೀ ಗುರುರಾಘವೆಂದ್ರ ಎಂಟರಪ್ರೈಸಸ್‌ ಮೈಸೂರು ಕಂಪನಿಗೆ .25.65 ಕೋಟಿಗೆ ಗುತ್ತಿಗೆ ನೀಡಿ ಉಳಿದ ಕಾಮಗಾರಿ ಮುಗಿಸುವಂತೆ 2018ರ ಫೆಬ್ರವರಿ ತಿಂಗಳ ಡೆಡ್‌ಲೈನ್‌ ನೀಡಲಾಗಿತ್ತು. ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸದ್ದರಿಂದ ಮಾಚ್‌ರ್‍ 2022ರ ವರೆಗೆ ಅವಧಿ ವಿಸ್ತರಿಸಿಕೊಂಡಿದ್ದ ಗುತ್ತಿಗೆದಾರ, ಈಗ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ನಾಪತ್ತೆಯಾಗಿದ್ದಾನೆ. ಅವರಿಂದ .5.84 ಲಕ್ಷ ರು. ದಂಡ ವಸೂಲಿ ಮಾಡಲಾಗಿದ್ದು ಗುತ್ತಿಗೆದಾರನ್ನ ಕಪ್ಪು ಪಟ್ಟಿಗೆ ಸೇರಿಸುವಂತೆ ನಗರಸಭೆ ಠರಾವು ಪಾಸ್‌ ಮಾಡಿ ಹೊಸ ಟೆಂಡರ್‌ ಕರೆಯುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಎರಡನೇ ಗುತ್ತಿಗೆದಾರ ನಗರದಲ್ಲಿ 3.53 ಕಿಮೀ ಒಳಚರಂಡಿ ಕಾಮಗಾರಿ ಸರಿಪಡಿಸುವುದರ ಪೈಕಿ ಕೇವಲ 0.167 ಕಿಮೀ ಒಳಚರಂಡಿ ಪೈಪ್‌ಲೈನ್‌ ಕಾಮಗಾರಿ ಸರಿಪಡಿಸಿದ್ದಾನೆ. ಇನ್ನೂ 3.367 ಕಿಮೀ ಕಾಮಗಾರಿ ಬಾಕಿಯಿದೆ.

ಇನ್ನು 20.64 ಕಿಮೀ ಒಳಚರಂಡಿ ಪೈಪ್‌ಲೈನ್‌ ಅಳವಡಿಕೆಯಲ್ಲಿ 19.51 ಕಿಮೀ ಪೂರ್ಣಗೊಳಿಸಿದ್ದು, ಈ ಹಿಂದೆಯೇ ಹಾಕಲಾಗಿದ್ದ 269 ಮ್ಯಾನ್‌ಹೋಲ್‌ಗÜಳ ಪೈಕಿ 130 ಸರಿಪಡಿಸಲಾಗಿದೆ. ಇನ್ನೂ 139 ಬಾಕಿ ಉಳಿದಿದೆ. ಹೊಸದಾಗಿ ನಿರ್ಮಾಣ ಮಾಡಬೇಕಿದ್ದ 615 ಮ್ಯಾನ್‌ ಹೋಲ್‌ಗಳ ಪೈಕಿ 620 ನಿರ್ಮಾಣ ಮಾಡಿದ್ದು, ಈಗಾಗಲೇ ಹಾಕಲಾಗಿದ್ದ ರಿಸೀವಿಂಗ್‌ ಚೇಂಬರ್ಸ್‌ಪೈಕಿ 500ರ ಬದಲಿಗೆ 447 ಹಾಗೂ ನಿರ್ಮಾಣ ಮಾಡಬೇಕಿದ್ದ 781 ಚೇಂಬರ್ಸ್‌ ಬದಲಿಗೆ 517 ಮಾತ್ರ ನಿರ್ಮಿಸಿದ್ದಾರೆ. 1781 ಮನೆಗಳಿಗೆ ಸಂಪರ್ಕ ಕಲ್ಪಿಸುವಲ್ಲಿ 964 ಮನೆಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸಿದ್ದಾರೆ. 207 ಮೀಟರ್‌ ಚರಂಡಿ ಕಾಮಗಾರಿಯಲ್ಲಿ 200 ಮೀಟರ್‌ ಪೂರ್ಣಗೊಳಿಸಿದ್ದಾರೆ.

20 ಕಿಮೀ ರಸ್ತೆ ಪುನರ್‌ ನಿರ್ಮಾಣ ಮಾಡುವಲ್ಲಿ 12 ಕಿಮೀ ಮಾಡಿದ್ದು, ಇದುವರೆಗೆ .15.99 ಕೋಟಿ ಬಿಲ… ಪಾವತಿ ಮಾಡಿಕೊಂಡಿದ್ದಾರೆ. ಅಂದರೆ ಇಬ್ಬರು ಗುತ್ತಿಗೆದಾರರಿಗೆ ಇದುವರೆಗೆ ಸುಮಾರು .33 ಕೋಟಿ ಪಾವತಿಯಾಗಿದೆ. ಆದರೆ, ಇದುವರೆಗೆ ಯೋಜನೆಯ ಆರಂಭ, ಅಂತ್ಯದ ಬಗ್ಗೆ ಯಾರಿಗೂ ತಿಳಿಯದಂತಾಗಿದೆ. ಸಾರ್ವಜನಿಕರ ತೆರಿಗೆ ಹಣದಿಂದ ಮಾಡಿದ ಯೋಜನೆಯೊಂದು ಹಳ್ಳ ಹಿಡಿದು ಹೋಗಿರುವುದು ವ್ಯವಸ್ಥೆಗೆ ಹಿಡಿದಿರುವ ಕೈಗನ್ನಡಿಯಾಗಿದೆ.

ಗುತ್ತಿಗೆದಾರ ಅರ್ಧಕ್ಕೆ ಕಾಮಗಾರಿ ಬಂದ್‌ ಮಾಡಿ ನಾಪತ್ತೆಯಾಗಿದ್ದಾನೆ. ಅನೇಕ ಸಲ ನೋಟಿಸ್‌ ಕೊಟ್ಟರೂ ಸ್ಪಂದಿಸುತ್ತಿಲ್ಲ. ಅದಕ್ಕಾಗಿ ಆತನನ್ನು ಕಪ್ಪು ಪಟ್ಟಿಗೆ ಸೇರಿಸುವ ಬಗ್ಗೆ ನಗರಸಭೆಯಿಂದ ಠರಾವು ಕೈಗೊಳ್ಳಲಾಗಿದೆ. ಅಲ್ಲದೇ ಸಂಬಂಧಪಟ್ಟಗುತ್ತಿಗೆದಾರನ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಹೊಸದಾಗಿ ಟೆಂಡರ್‌ ಕರೆದು ಕಾಮಗಾರಿ ಮುಗಿಸಬೇಕು ಎಂಬುದು ನಮ್ಮ ಬಯಕೆಯಾಗಿದೆ.

- ಸಂಜೀವಕುಮಾರ ನೀರಲಗಿ, ನಗರಸಭೆ ಅಧ್ಯಕ್ಷರು

ಮೂಲಸೌಕರ್ಯದ್ದೇ ಸಮಸ್ಯೆ: ನಗರದ ಎಲ್ಲ ಮನೆಗಳಿಗೆ ಯುಜಿಡಿ ಸಂಪರ್ಕ ಕೊಟ್ಟು ಅಲ್ಲಿಂದ ಪೈಪ್‌ಲೈನ್‌ ಮೂಲಕ ಹೋಗುವ ನೀರನ್ನು ಶುದ್ಧೀಕರಿಸಲೆಂದು ವೀರಾಪುರ ರಸ್ತೆ ಬಳಿ ಕೋಟ್ಯಂಟರ ರು. ಖರ್ಚು ಮಾಡಿ 10 ಎಕರೆ ಜಾಗದಲ್ಲಿ ಟ್ರೀಟ್‌ಮೆಂಟ್‌ ಪ್ಲಾಂಟ್‌ ನಿರ್ಮಿಸಲಾಗಿತ್ತು. ಈಗ ಅದೂ ಸಂಪೂರ್ಣ ಹಾಳಾಗಿದ್ದು, ಹೊಸದಾಗಿ ಮಾಡಬೇಕಾದ ಅನಿವಾರ್ಯತೆಯಿದೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯಲಿರುವ ಹಾವೇರಿ ನಗರದ ಮೂಲಸೌಕರ್ಯ ಯಾವಾಗ ಸರಿಹೋಗುವುದೋ ಎಂದು ಸಾರ್ವಜನಿಕರು ಆಡಿಕೊಳ್ಳುವಂತಾಗಿದೆ.

Follow Us:
Download App:
  • android
  • ios