ಮಂಗಳೂರು(ಜ.23): ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವಾಲಯದ ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿ ಪಡೆದ ಬೆಳ್ತಂಗಡಿಯ ಮೂರ್ಜೆ ಸುನಿತಾ ಪ್ರಭು ಪ್ರತಿಭಾನ್ವಿತೆ. ಈಕೆ 2019 ರಲ್ಲಿ ಫೀನಿಕ್ಸ್‌ (ಅಮೆರಿಕಾ)ನಲ್ಲಿ ನಡೆದ 80 ನೇ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿದ ಹಿನ್ನೆಲೆಯಲ್ಲಿ ಈ ಪುರಸ್ಕಾರ ಲಭಿಸಿದೆ.

ಪ್ರಸಕ್ತ ಮಂಗಳೂರಿನ ಸಿಎಫ್‌ಎಎಲ್‌ ವಿದ್ಯಾ ಸಂಸ್ಥೆಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಮೂರ್ಜೆ ಸುನಿತಾ ಪ್ರಭು ಬೆಳ್ತಂಗಡಿಯ ಉದ್ಯಮಿ ವಿನಾಯಕ ವುಡ್‌ ಇಂಡಸ್ಟ್ರೀಸ್‌ನ ಮಾಲೀಕ ವಿವೇಕಾನಂದ ಪ್ರಭು-ಶಾಂತಲಾ ಪ್ರಭು ದಂಪತಿ ಪುತ್ರಿ. ಉಜಿರೆ ಶ್ರೀ ಮಂಜುನಾಥೇಶ್ವರ ಸಿಬಿಎಸ್‌ಸಿ ಶಾಲೆಯ ಹಳೆ ವಿದ್ಯಾರ್ಥಿನಿ. ಗ್ರಾಮೀಣ ಭಾಗದ ಬೆಳ್ತಂಗಡಿಯ ಪುಟ್ಟಹಳ್ಳಿಯ ಕೃಷಿ ಕುಟುಂಬದಿಂದ ಬಂದ ಈಕೆ, ಕೃಷಿಯ ಬಗ್ಗೆ ಎಳವೆಯಿಂದಲೇ ಅಪಾರ ಆಸಕ್ತಿ ಹೊಂದಿದ್ದಳು. ಶಾಲೆಯಲ್ಲಿ ಶಿಕ್ಷಕರು ನೀಡಿದ ಪ್ರೋತ್ಸಾಹದಿಂದಾಗಿ ತನ್ನಲ್ಲಿ ಸೃಜನಶೀಲತೆ ಬೆಳವಣಿಗೆಯಾಗಿದ್ದು, ಇದರಿಂದಾಗಿ ತಾನು ಕರ್ನಾಟಕ ಸ್ಟೇಟ್‌ ನ್ಯಾಶನಲ್‌ ಚಿಲ್ಡ್ರನ್‌ ಸೈನ್ಸ್‌ ಕಾಂಗ್ರೆಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಿತು ಎಂದು ಸ್ಮರಿಸುತ್ತಾರೆ.

ಬೆಳ್ಳಂಬೆಳಗ್ಗೆ SSLC ಮಕ್ಕಳ ಮನೆಗಳಿಗೆ ಶಾಸಕ ಭೇಟಿ..!

ಮಹಾರಾಷ್ಟ್ರದ ಭಾರಾಮತಿಯಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನೆ ಎಂಬ ಕಲ್ಪನೆಯಲ್ಲಿ ನಡೆದ ನ್ಯಾಶನಲ್‌ ಚಿಲ್ಡ್ರನ್‌ ಸೈನ್ಸ್‌ ಕಾಂಗ್ರೆಸ್‌ನಲ್ಲಿ ಈಕೆ ಫೈನಲಿಸ್ಟ್‌ ಆಗಿದ್ದಳು. ಬೆಂಗಳೂರು ಶಿಕ್ಷಕರ ಸದನದಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಸ್ಪರ್ಧೆಯಲ್ಲಿ ರಿಮೋಟ್‌ ಕಂಟ್ರೋಲ್ಡ್‌ ರಬ್ಬರ್‌ ಟ್ಯಾಪಿಂಗ್‌ ಮಿಶನ್‌ ಸಂಶೋಧನೆ ಸಾಕಷ್ಟುಪುರಸ್ಕಾರಗಳಿಗೆ ಪಾತ್ರವಾಗಿತ್ತು.

ಇತಿಹಾಸ ಸೃಷ್ಟಿಸಿದ ‘ಕೆಂಪುಕೋಟೆ’: ಮಂಗಳೂರು ವಿವಿ ಕಾಲೇಜಿಗೆ 150 ವರ್ಷದ ಸಂಭ್ರಮ!

ನವದೆಹಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ 2018ರಲ್ಲಿ ದೆಹಲಿಯಲ್ಲಿ ನಡೆದ ಐಆರ್‌ಐಎಸ್‌ ರಾಷ್ಟ್ರೀಯ ಉತ್ಸವದಲ್ಲಿ ಕೆಮಿಸ್ಟ್ರಿ ವಿಭಾಗದಲ್ಲಿ ಈಕೆ ಸ್ನೇಹಿತ ಸಂಜೀವ್‌ ಜೊತೆ ಸಂಶೋಧಿಸಿದ ಸೊಳ್ಳೆ ನಿವಾರಕ ಉಡುಪು ಸಂಶೋಧನೆಗೆ ನ್ಯಾಶನಲ್‌ ಗ್ರಾಂಡ್‌ ಅವಾರ್ಡ್‌ಗೆ ಪಾತ್ರವಾಗಿತ್ತು. ಇದರೊಂದಿಗೆ ಹಲವು ವಿಜ್ಞಾನ, ತಂತ್ರಜ್ಞಾನ ಸಂಬಂಧಿತ ಪ್ರದರ್ಶನಗಳಲ್ಲಿ ಈಕೆ ಪಾಲ್ಗೊಂಡಿದ್ದಾಳೆ. ಜೊತೆಗೆ ಈಕೆ ಶಾಸ್ತ್ರೀಯ ಸಂಗೀತ ಹಾಗೂ ಭರತನಾಟ್ಯ ಕಲಾವಿದೆಯೂ ಹೌದು.

ಈಕೆ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ನಲ್ಲೂ ಭಾಗವಹಿಸಿ, ಪ್ರಧಾನಿ ಹಾಗೂ ದೇಶ ವಿದೇಶಗಳ ಗಣ್ಯ ಅತಿಥಿಗಳನ್ನು ಭೇಟಿ ಮಾಡುವ ಅವಕಾಶ ಪಡೆದಿದ್ದಾಳೆ.