ಉಡುಪಿ(ಫೆ.08): ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುವುದಕ್ಕಾಗಿ ಕೇಂದ್ರ ಸರ್ಕಾರವು ರಚಿಸುವ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟಿಗೆ ತಮ್ಮನ್ನು ಟ್ರಸ್ಟಿಯನ್ನಾಗಿ ನೇಮಿಸಿದ್ದು ದಕ್ಷಿಣ ಭಾರತಕ್ಕೇ ಸಂದ ಗೌರವ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು ಸಂತಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಪೇಜಾವರ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಟ್ರಸ್ಟ್‌ ಬಗ್ಗೆ ಕೇಂದ್ರ ಸರ್ಕಾರದಿಂದ ತಮಗೆ ಪತ್ರ ಬಂದಿದ್ದು, ಟ್ರಸ್ಟಿಯಾಗಲು ಒಪ್ಪಿಗೆ ನೀಡಿ, ಸ್ವೀಕೃತಿ ಪತ್ರ ಕಳುಹಿಸಿದ್ದೇನೆ. ಮುಂದಿನ 15 ದಿನಗಳಲ್ಲಿ ಟ್ರಸ್ಟ್‌ ದೆಹಲಿಯಲ್ಲಿ ಸಭೆ ಸೇರಲಿದ್ದು, ಅದರಲ್ಲಿ ರಾಮಮಂದಿರದ ಕಾರ್ಯ ಯೋಜನೆಗಳು ನಿರ್ಣಯವಾಗಲಿವೆ ಎಂದರು.

'ಪೇಜಾವರ ಶ್ರೀಗಳಿಂದ ರಾಮಮಂದಿರ ಶಂಕು ಸ್ಥಾಪನೆ ಮಾಡಿಸುವ ಇಚ್ಛೆ ಇತ್ತು'

ಈ ಟ್ರಸ್ಟ್‌ಗೆ ಸದಸ್ಯರಾಗುವುದಕ್ಕೆ ದಕ್ಷಿಣ ಭಾರತದಲ್ಲಿಯೇ ಒಬ್ಬರಿಗೆ ಅವಕಾಶ ಒದಗಿ ಬಂದಿದೆ. ಆ ಅವಕಾಶ ತಮಗೆ ಸಿಕ್ಕಿರುವುದಕ್ಕೆ ಸಂತೋಷವಾಗುತ್ತಿದೆ. ಇದು ನಮ್ಮ ಗುರುಗಳಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಸೇವೆಗೆ ಸಂದ ಗೌರವ. ಇದು ತುಂಬಾ ದೊಡ್ಡ ಜವಾಬ್ದಾರಿ ಎಂದ ಶ್ರೀಗಳು, ಈ ಜವಾಬ್ದಾರಿ ನಿರ್ವಹಿಸಲು ಸಮಾಜದ ಎಲ್ಲರ ಸಹಕಾರ ಬೇಕು ಎಂದರು.

ರಾಮಮಂದಿರ ಹೋರಾಟದಲ್ಲಿ ಭಾಗಿ:

ಟ್ರಸ್ಟಿಆಗಲು ಅವಕಾಶ ದೊರೆತರೆ ಒಪ್ಪಿಕೊಳ್ಳುವಂತೆ ತಮ್ಮ ಗುರುಗಳಾದ ವಿಶ್ವೇಶ ತೀರ್ಥರು ಸೂಚಿಸಿದ್ದರು. ಗುರುಗಳ ಜೊತೆ ರಾಮಮಂದಿರದ ಹೋರಾಟದಲ್ಲೂ ತಾನು ಭಾಗಿಯಾಗಿದ್ದೆ ಎಂದು ನೆನಪಿಸಿಕೊಂಡ ಶ್ರೀಗಳು, ಟ್ರಸ್ಟ್‌ನ ಎಲ್ಲಾ ಸದಸ್ಯರ ತೀರ್ಮಾನದಂತೆ ಕಾರ್ಯಯೋಜನೆ ರೂಪುಗೊಳ್ಳಲಿದೆ ಎಂದರು.

ರಾಮಮಂದಿರ ಭವ್ಯವಾಗಿ ನಿರ್ಮಾಣವಾಗಬೇಕು. ಜಗತ್ತಿನ ಗಮನ ಸೆಳೆಯುವ ಮಂದಿರವಾಗಬೇಕು.ಯಾತ್ರಿಗಳಿಗೆ ಅನುಕೂಲ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎಂಬುದು ನನ್ನ ವ್ಯಕ್ತಿಗತ ಅಭಿಪ್ರಾಯವಾಗಿದೆ ಎಂದರು.

ಅಯೋಧ್ಯೆ ರಾಮಮಂದಿರ ಟ್ರಸ್ಟ್‌ಗೆ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನೇಮಕ

ಅಯೋಧ್ಯೆಯಲ್ಲಿಯೂ ಪೇಜಾವರ ಮಠದ ಶಾಖೆ ಇದೆ. ಮುಂದೆ ದೊಡ್ಡ ಶಾಖಾ ಮಠ ತೆರೆಯುವ ಯೋಜನೆಯೂ ಇದೆ. ಹನುಮಂತ ದೇವರು ಅವತರಿಸಿದ ಕ್ಷೇತ್ರ ಕರ್ನಾಟಕ. ಮಧ್ವಾಚಾರ್ಯರು ಹನುಮಂತನ ಅವತಾರ. ಇದು ಆಂಜನೇಯನ ರಾಮ ಸೇವೆಗೆ ಸಿಕ್ಕ ಗೌರವ ಎಂದು ಭಾವಿಸುತ್ತೇನೆ ಎಂದು ಶ್ರೀಗಳು ಹೇಳಿದರು.