ಉಡುಪಿ[ಡಿ.28]: ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿಯು ತೀರಾ ಗಂಭೀರವಾಗಿದ್ದು, ಅವರ ದೇಹಸ್ಥಿತಿಯು ಶುಕ್ರವಾರಕ್ಕಿಂತ ಹೆಚ್ಚು ಇಳಿಮುಖವಾಗಿದೆ. ಅವರ ಪ್ರಜ್ಞೆಯ ಸ್ಥಿತಿಯಲ್ಲಿಯೂ ಯಾವುದೇ ಸುಧಾರಣೆಗಳು ಕಂಡು ಬರುತ್ತಿಲ್ಲ ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

"

ಬುಧವಾರದವರೆಗೆ ಶ್ರೀಗಳ ಆರೋಗ್ಯದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಚೇತರಿಕೆ ಇತ್ತು. ಆದರೆ ಗುರುವಾರ ಆರೋಗ್ಯ ಸ್ಥಿರವಾಗಿದ್ದರೂ ಯಾವುದೇ ಹೆಚ್ಚಿನ ಸುಧಾರಣೆಯಾಗಿರಲಿಲ್ಲ. ಆದರೆ ಶುಕ್ರವಾರ ಆರೋಗ್ಯ ಸ್ಥಿತಿ ಕುಸಿಯುತ್ತಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.

ಇದೀಗ ಬಂದ ಹೆಲ್ತ್ ಬುಲೆಟಿನ್: ಗಂಭೀರ ಸ್ಥಿತಿಯಲ್ಲಿ ಪೇಜಾವರ ಶ್ರೀ

ಶ್ರೀಗಳಿಗೆ ವಯಸ್ಸಾಗಿರುವುದರಿಂದ ನಿಧಾನವಾಗಿ ಪ್ರಜ್ಞೆಯತ್ತ ಮರಳುತ್ತಿದ್ದಾರೆ ಎಂದು ಹೇಳಲಾಗಿತ್ತಾದರೂ, ಶುಕ್ರವಾರ ಅವರ ಪ್ರಜ್ಞೆಯಲ್ಲಿಯೂ ಯಾವುದೇ ಸುಧಾರಣೆಗಳಾಗಿಲ್ಲ. ಅವರಿಗೆ ಜೀವರಕ್ಷಕ ಸಾಧನಗಳನ್ನು ಮುಂದವರಿಸಲಾಗಿದೆ, 24 ಗಂಟೆಗಳ ಕಾಲವೂ ನಿಗಾ ವಹಿಸಲಾಗುತ್ತಿದೆ ಎಂದೂ ಹೇಳಲಾಗಿದೆ.

ಸೋಮವಾರ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ತಜ್ಞ ವೈದ್ಯರು ಬಂದ ಮೇಲೆ ಶ್ರೀಗಳ ಆರೋಗ್ಯದ ಬಗ್ಗೆ ಬಹಳ ಆಶಾದಾಯಕ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಶುಕ್ರವಾರ ಮತ್ತೆ ಬೆಂಗಳೂರಿನಿಂದ ತಜ್ಞ ವೈದ್ಯರನ್ನು ಕರೆಸಿಕೊಳ್ಳಲಾಗಿದೆ. ರಾತ್ರಿ ಎಂಆರ್‌ಐ ಸ್ಕಾ್ಯನ್‌ ನಡೆಸಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಅಲ್ಲದೇ ದೆಹಲಿಯ ಏಮ್ಸ್ ಜೊತೆ ಮಣಿಪಾಲದ ವೈದ್ಯರು ನಿರಂತರ ಸಂಪರ್ಕದಲ್ಲಿದ್ದಾರೆ.