ಉಡುಪಿ(ಆ.18): ಇಲ್ಲಿ ನಿತ್ಯವೂ ಕುಗ್ರಾಮಗಳಿಂದ ಅರ್ಜಿ ಹಿಡಿದು ನೂರಾರು ಮಂದಿ ಬರುತ್ತಾರೆ. ಗರ್ಭಿಣಿಯರು, ಅಂಗವಿಕಲರು, ವಯೋವೃದ್ಧರು ಸೇರಿದಂತೆ ಸ್ವಂತ ಸೂರಿನ ಕನಸು ಹೊತ್ತುಕೊಂಡವರು ದಾಖಲೆಗಳ ಫೈಲು ಹಿಡಿದುಕೊಂಡು ಈ ಕಚೇರಿಯಲ್ಲಿ ಸರತಿ ಸಾಲಿನಲ್ಲಿ ಬಂದು ನಿಲ್ಲುತ್ತಾರೆ. ವಿಪರ್ಯಾಸವೆಂದರೆ ಸ್ವಂತ ಸೂರನ್ನು ಕಲ್ಪಿಸಿಕೊಡುವ ಕಚೇರಿಯಲ್ಲೇ ಅಭದ್ರತೆಯಿಂದಾಗಿ ಇಲ್ಲಿನ ಸಿಬ್ಬಂದಿ ಜೀವ ಕೈಯ್ಯಲ್ಲಿ ಹಿಡಿದೇ ದಿನ ದೂಡುತ್ತಿದ್ದಾರೆಂದರೆ ಆಶ್ಚರ್ಯವಾದೀತು!

ಇದು ಯಾವುದೋ ಒಂದು ಗ್ರಾಮದ ಸರ್ಕಾರಿ ಕಟ್ಟಡ ಅಲ್ಲ. ಕಳಪೆ ಕಾಮಗಾರಿಯಿಂದಾಗಿ ಆಗಾಗೆ ಸುದ್ದಿಯಲ್ಲಿರುವ ಕುಂದಾಪುರದ ಮಿನಿ ವಿಧಾನಸೌಧದ ದುಸ್ಥಿತಿ ಇದು.

ಉಡುಪಿ: ರಾಜ್ಯಮಟ್ಟದ ಹುಲಿವೇಷ ಕುಣಿತ ಸ್ಪರ್ಧೆ

ಕಟ್ಟಡ ಕಾಮಗಾರಿ ಉದ್ಘಾಟನೆಗೂ ಮುನ್ನ ಕಳಪೆ ಕಾಮಗಾರಿಯಿಂದಾಗಿ ಮಾಧ್ಯಮಗಳ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಮಿನಿ ವಿಧಾನಸೌಧ ಕಟ್ಟಡ ಕೇವಲ ನಾಲ್ಕು ವರ್ಷಗಳು ಸಮೀಪಿಸುತ್ತಿದ್ದಂತೆಯೇ ಒಂದೊಂದಾಗಿಯೇ ಕಳಚಿಕೊಳ್ಳುತ್ತಲೇ ಇವೆ.

ಉದ್ಘಾಟನೆಗೊಂಡ ನಾಲ್ಕೇ ವರ್ಷದಲ್ಲಿ ಮೂರ್ನಾಲ್ಕು ಭಾರಿ ಕಟ್ಟಡದ ಛಾವಣಿಯ ಗಾರೆ ಕುಸಿದಿದೆ. ಮೂರ್ನಾಲ್ಕು ಬಾರಿ ಇಂತಹ ಅವಘಡಗಳು ಸಂಭವಿಸಿದರೂ ಸಾರ್ವಜನಿಕರು ಹಾಗೂ ಸಿಬ್ಬಂದಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಕಳಪೆ ಕಾಮಗಾರಿಯ ಪರಿಣಾಮ ಮಳೆಗಾಲದಲ್ಲಿ ನೀರು ಸೋರುತ್ತಿದ್ದು, ಕಚೇರಿಗೆ ಬಂದವರು ಕೊಡೆ ಹಿಡಿದುಕೊಂಡೇ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ಒಂದೆಡೆಯಾದರೆ ಬಿರುಕುಬಿಟ್ಟಗಾರೆಗಳು ಯಾವ ಕ್ಷಣದಲ್ಲಾದರೂ ಕೆಳಗೆ ಬೀಳುವ ಸಾಧ್ಯತೆಗಳಿವೆ. ಸಿಬ್ಬಂದಿ ಹಾಗೂ ಸಾರ್ವಜನಿಕರು ಇಷ್ಟೆಲ್ಲಾ ಅಪಾಯಗಳನ್ನು ಎದುರಿಸುತ್ತಿದ್ದರೂ ಸಂಬಧಪಟ್ಟವರು ಮಾತ್ರ ತುಟಿ ಬಿಚ್ಚದಿರುವುದು ಸಾಕಷ್ಟುಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಆಕ್ಷೇಪಗಳ ನಡುವೆಯೂ ಉದ್ಘಾಟನೆ

2015ರ ಫೆಬ್ರವರಿ 7ರಂದು ಉದ್ಘಾಟನೆಗೊಂಡಿದ್ದ ಕುಂದಾಪುರದ ಮಿನಿ ವಿಧಾನಸೌಧದ ಕಾಮಗಾರಿಯ ಕುರಿತಂತೆ ಹಲವು ಬಾರಿ ಸಾರ್ವಜನಿಕ ಆಕ್ಷೇಪಗಳು ಕೇಳಿ ಬಂದಿದ್ದವು.

ಆದರೂ ವಿಧಾನಸೌಧ ಕಾಮಗಾರಿ ಗುಣಮಟ್ಟದ ಬಗ್ಗೆ ತನಿಖೆ ನಡೆಸದೆ ಅಂದಿನ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್‌ ಹಾಗೂ ಅಂದಿನ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿನಯ ಕುಮಾರ್‌ ಸೊರಕೆ ಉದ್ಘಾಟಿಸಿದ್ದರು. ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್‌ ಟ್ವೆಂಟಿ ಟ್ವೆಂಟಿ ಸರ್ಕಾರ ಇದ್ದಾಗ ಅಂದಿನ ಸಚಿವ ಡಾ.ವಿ.ಎಸ್‌. ಆಚಾರ್ಯ ಹಾಗೂ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಅವರ ಪ್ರಯತ್ನದ ಫಲವಾಗಿ 5 ಕೋಟಿ ರು. ವೆಚ್ಚದಲ್ಲಿ ಮಿನಿ ವಿಧಾನಸೌಧಕ್ಕೆ ಮುಹೂರ್ತ ಕೂಡಿ ಬಂದಿತ್ತು. ಶಂಕು ಸ್ಥಾಪನೆಯಿಂದ ಹಿಡಿದು ಉದ್ಘಾಟನೆಯ ತನಕ ಮಿನಿ ವಿಧಾನಸೌಧ ಕಳಪೆ ಕಾಮಗಾರಿಯಿಂದ ಸುದ್ದಿಯಾದರೂ ಯಾರೊಬ್ಬರೂ ಕಾಮಗಾರಿ ಗುಣಮಟ್ಟದ ಬಗ್ಗೆ ಧ್ವನಿ ಎತ್ತಿಲ್ಲ.

ಆಗಾಗೆ ಕಳಚಿಕೊಳ್ಳುತ್ತಿವೆ ಸ್ಲ್ಯಾಬ್‌ ಗಾರೆಗಳು:

ಕಳೆದ ವರ್ಷದ ಮಳೆಗಾಲದ ಆರಂಭದ ವೇಳೆಯಲ್ಲಿಯೂ ಮೊದಲ ಮಹಡಿ ಪ್ರವೇಶ ದ್ವಾರ ಬಳಿ ಗಾರೆ ಕುಸಿತವಾಗಿರುವ ಕುರಿತು ವರದಿಯಾಗಿತ್ತು. ಉಪವಿಭಾಗಾಧಿಕಾರಿ ಡಾ.ಎಸ್‌.ಎಸ್‌. ಮಧುಕೇಶ್ವರ ಅವರ ಅಧ್ಯಕ್ಷತೆಯಲ್ಲಿ ಪುರಸಭೆಯ ಕಚೇರಿಯಲ್ಲಿ ನಡೆದ ಅಭಿವೃದ್ಧಿ ವಿಚಾರದ ಸಭೆಯಲ್ಲಿಯೂ ಮಿನಿ ವಿಧಾನಸೌಧದ ಕಾಮಗಾರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸಾರ್ವಜನಿಕ ಸಂಘಟನೆಯ ಪ್ರಮುಖರು ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದರು.

ಮಳೆಗಾಲದಲ್ಲಿ ಕೊಡೆ ಹಿಡಿದು ಕೂರುವ ಸ್ಥಿತಿ

ಯಾವಾಗ ಸ್ಲಾಬ್‌ ಕಾಂಕ್ರಿಟ್‌ ಕಳಚಿಕೊಳ್ಳುತ್ತದೋ ಎನ್ನುವ ಭಯ ಒಂದೆಡೆಯಾದರೆ ಜೋರು ಮಳೆ ಬಂದರೆ ಕಚೇರಿಯೊಳಗೇ ಕೊಡೆ ಹಿಡಿಯಬೇಕಾದ ದೌರ್ಭಾಗ್ಯ ಇಲ್ಲಿನ ಸಿಬ್ಬಂದಿ ಹಾಗೂ ಕಚೇರಿಗೆ ಬರುವ ಜನರದ್ದು. ಆಧಾರ್‌ ಕಾರ್ಡ್‌ ಲಿಂಕ್‌, ಪಡಿತರ ಚೀಟಿ ಇನ್ನಿತರ ಸರ್ಕಾರಿ ಸೌಲಭ್ಯಗಳಿಗಾಗಿ ಕುಗ್ರಾಮಗಳಿಂದ ಬರುವ ಬರುವ ಜನರು ಜೀವಭಯದಲ್ಲಿಯೇ ಬಂದು ಕೆಲಸ ಮುಗಿಸಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದ್ದು, ಸಂಬಂದಪಟ್ಟವರು ಸೂಕ್ತ ತಾಂತ್ರಿಕ ಕಾರಣ ತಿಳಿದು ಸಮಸ್ಯೆ ಬಗೆಹರಿಸಬೇಕು. ಗುತ್ತಿಗೆದಾರ ಮತ್ತು ಎಂಜಿನಿಯರ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶ್ರೀಕಾಂತ ಹೆಮ್ಮಾಡಿ ಕುಂದಾಪುರ