ಉಡುಪಿ(ಏ.19): ಜಿಲ್ಲೆಯಲ್ಲಿ ಪತ್ತೆಯಾದ 3 ಮಂದಿ ಕೊರೋನಾ ರೋಗಿಗಳೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯಕ್ಕೀಗ ಯಾವುದೇ ಸಕ್ರಿಯ ಕೊರೋನಾ ರೋಗಿಗಳಿಲ್ಲ. ಇದರಿಂದ ಜಿಲ್ಲಾಡಳಿತ ಮತ್ತು ಸಾರ್ವಜನಿಕರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ಹಾಗಂತ ಮೈಮರೆಯುವಂತಿಲ್ಲ, ಮತ್ತೆ ಹೊಸ ರೋಗಿಗಳು ಪತ್ತೆಯಾಗದಂತೆ, ಕೊರೋನಾ ವೈರಸ್‌ ಹರಡದಂತೆ ಲಾಕ್‌ಡೌನ್‌ ಕಡ್ಡಾಯ ಪಾಲಿಸಲೇಬೇಕಾಗಿದೆ.

ಜಿಲ್ಲೆಯಲ್ಲಿ ಪತ್ತೆಯಾದ ಮೂರು ರೋಗಿಗಳಲ್ಲಿ ಇಬ್ಬರು ದುಬೈಯಿಂದ ಮತ್ತು ಮತ್ತೊಬ್ಬರು ಕೇರಳದಿಂದ ಬರುವಾಗ ಕೊರೋನಾ ಸೋಂಕು ಹೊಂದಿ​ದ್ದರು. ಅಂದರೆ, ಉಡುಪಿ ಜಿಲ್ಲೆಯೊಳಗೆ ಅದುವರೆಗೆ ಯಾರಿಗೂ ಕೊರೋನಾ ಸೋಂಕು ಇರಲಿಲ್ಲ ಅಥವಾ ಹರಡಿರಲಿಲ್ಲ. ಆಗಲೂ ಹೊರ ಜಿಲ್ಲೆಯಿಂದ ಬಂದ ಕೊರೋನಾ ರೋಗಿಗಳಿಂದಲೂ ಜಿಲ್ಲೆಯೊಳಗೂ ಯಾರಿಗೂ ರೋಗ ಹರಡಿಲ್ಲ.

ಕೊರೋನಾ ಆತಂಕ: ಜಿಲ್ಲಾಡಳಿತಕ್ಕೀಗ ಮುಲ್ಲಾನ ಓಣಿಯದ್ದೇ ದೊಡ್ಡ ಸವಾಲು..!

ಜಿಲ್ಲೆಯಲ್ಲಿ ಈಗಾಗಲೇ ಸುಮಾರು 2,717 ಮಂದಿಯನ್ನು ತಪಾಸಣೆಗೊಳಪಡಿಸಿ, ಕ್ವಾರಂಟೈನ್‌ಗೊಳಪಡಿಸಲಾಗಿದೆ. 868 ಮಂದಿಯ ಗಂಟಲದ್ರವವನ್ನು ಪರೀಕ್ಷೆ ಮಾಡಲಾಗಿದ್ದು, ಅವರಲ್ಲಿ 3 ಮಂದಿಯನ್ನು ಹೊರತುಪಡಿಸಿ ಉಳಿದವರೆಲ್ಲರೂ ನೆಗೆಟಿವ್‌ ಆಗಿದ್ದಾರೆ.

ಇನ್ನೆಲ್ಲಾ ನೆಗೆಟಿವ್‌ ಆಗಲಿ:

ಶನಿವಾರ ಕೊರೋನಾ ಹಾಟ್‌ ಸ್ಪಾಟ್‌ಗೆ ಹೋಗಿ ಬಂದ 18 ಮಂದಿ ಸೇರಿ ಒಟ್ಟು 28 ಮಂದಿ ಶಂಕಿತರ ಗಂಟಲದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಶನಿವಾರ 44 ವರದಿಗಳು ಬಂದಿದ್ದು, ಎಲ್ಲಾ ನೆಗೆಟಿವ್‌ ಆಗಿವೆ. ಇನ್ನೂ 187 ವರದಿಗಳು ಬರಬೇಕಾಗಿವೆ. ಐಸೋಲೇಶನ್‌ ವಾರ್ಡ್‌ನಲ್ಲಿ 56 ಮಂದಿ, ಹೋಮ್‌ ಕ್ವಾರಂಟೈನ್‌ನಲ್ಲಿ 488 ಮಂದಿ ಮತ್ತು ಹಾಸ್ಟಿಟಲ್‌ ಕ್ವಾರಂಟೈನ್‌ನಲ್ಲಿ 25 ಮಂದಿ ನಿಗಾದಲ್ಲಿದ್ದಾರೆ.

ರೋಗಿಗಳಿಲ್ಲವೆಂದು ಮೈಮರೆಯುವಂತಿಲ್ಲ

ಉಡುಪಿ ಜಿಲ್ಲೆಯಲ್ಲೀಗ ಸಕ್ರಿಯ ಕೊರೋನಾ ರೋಗಿಗಳಿಲ್ಲ, ಅಂದ ಮಾತ್ರಕ್ಕೆ ಲಾಕ್‌ಡೌನ್‌ ಸಡಿಲಿಕೆಯಾಗುವುದಿಲ್ಲ. ಜಿಲ್ಲೆಯಲ್ಲಿ ರೋಗಿಗಳಿಲ್ಲ. ಆದರೆ, ಹೊರಗಿನಿಂದ ರೋಗ ನಮ್ಮ ಜಿಲ್ಲೆಗೆ ಹರಡಬಾರದು. ಆದ್ದರಿಂದ ನಮ್ಮ ಎಚ್ಚರಿಕೆಯನ್ನು ನಾವು ಮಾಡಲೇಬೇಕಾಗಿದೆ. ಆದ್ದರಿಂದ ಬಿಗಿ ಲಾಕ್‌ ಡೌನ್‌ ಮುಂದುವರಿಯುತ್ತದೆ. ಪ್ರಸ್ತುತ ಉಡುಪಿ ಜಿಲ್ಲೆ ಆರೆಂಜ್‌ ಝೋನ್‌ನಲ್ಲಿದೆ. ಕೊನೆಯ ರೋಗಿ ಪತ್ತೆಯಾಗಿ 20 ದಿನಗಳು ಕಳೆದಿವೆ. ಇನ್ನು 8 ದಿನಗಳಲ್ಲಿ ಯಾವುದೇ ಪಾಸಿಟಿವ್‌ ಪ್ರಕರಣ ಪತ್ತೆಯಾಗದಿದ್ದಲ್ಲಿ ಉಡುಪಿ ಗ್ರೀನ್‌ ಝೋನ್‌ ಆಗುತ್ತದೆ. ಅದರಿಂದ ಲಾಕ್‌ಡೌನ್‌ನಲ್ಲಿ ಕೆಲವು ರಿಯಾಯಿತಿಗಳು ಸಿಗುತ್ತವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.